ಕೋಟೇಶ್ವರ: ಪುರಾಣ ಪ್ರಸಿದ್ಧ ಸಪ್ತ ಕ್ಷೇತ್ರಗಳಲ್ಲೊಂದಾದ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ಕ್ಷೇತ್ರ ಪುರಾಣದಲ್ಲಿ ಧ್ವಜಪುರವೆಂದು ಕರೆಯಲ್ಪಡುತ್ತಿದ್ದು, ವಿವಿಧ ತಲೆಮಾರುಗಳಲ್ಲಿ ಬದುಕಿ ಬಾಳಿದ ಜನರ ಸಾಂಸ್ಕೃತಿಕ ಪರಂಪರೆ ಸೂಚಿಸುತ್ತದೆ. ಕೊಡಿಹಬ್ಬವೆಂದು ಜನಜನಿತವಾಗಿರುವ ಇಲ್ಲಿನ ಜಾತ್ರೆಯು ನ.19ರಂದು ನಡೆಯಲಿದ್ದು , ಸಕಲ ಸಿದ್ಧತೆ ಭರದಿಂದ ಸಾಗುತ್ತಿದೆ.
ಸ್ಥಳ ಪುರಾಣ:
ಕ್ರಿ.ಶ. 1261ರ ಶಾಸನದಲ್ಲಿ ಈ ಊರಿನ ಹೆಸರು ಕುಡಿಪೂರು ಆಗಿತ್ತು. ಆ ಹಿನ್ನೆಲೆಯಲ್ಲಿ ಇಲ್ಲಿ ನಡೆಯುವ ಹಬ್ಬವನ್ನು ಕೊಡಿಹಬ್ಬವೆಂದು ಹೇಳಲಾಗುತ್ತಿದೆ. ಕೊಡಿ, ಕೋಡಿ ಎಂದರೆ ಭೂಮಿಯ ತುದಿ. ನದಿಯ ನೀರು ಸಮುದ್ರಕ್ಕೆ ಸೇರುವ ಜಾಗ. ನಾನಾ ವಿಶ್ಲೇಷಣೆ ಅವಲೋಕಿಸಿದರೆ ಕೋಟೀಶ್ವರ, ಕೋಟೇಶ್ವರ, ಕೋಡೇಶ್ವರ ಹೀಗೆ ಉಚ್ಚಾರ ಸೌಲಭ್ಯಕ್ಕನುಗುಣವಾಗಿ ಕರೆಯಲ್ಪಡುತ್ತಿ ದ್ದರೂ ಸ್ಕಂದ ಪುರಾಣಗಳಲ್ಲಿ ಹೇಳಿರುವ ಕೋಟಿ ಕ್ಷೇತ್ರ ಇದನ್ನೇ ಸಮರ್ಥಿಸುತ್ತದೆ. ಡಾ| ಆರ್.ಕೆ. ಮಣಿಪಾಲ, ಡಾ| ಶಿವರಾಮ ಕಾರಂತ ಹೀಗೆ ಅನೇಕರು ಕೋಟೇಶ್ವರದ ಸ್ಥಳ ಪುರಾಣದ ಬಗ್ಗೆ ಧ್ವಜಪುರವೆಂದೇ ವಿಶ್ಲೇಷಿಸಿದ್ದಾರೆ.
ಇಲ್ಲಿ ದೊರೆತಿರುವ ಶಾಸನ ಕಲ್ಲುಗಳು ಕ್ಷೇತ್ರದ ವೈವಿಧ್ಯಪೂರ್ಣ ಪರಂಪರೆ ಸಾರುತ್ತವೆ. ಈ ಕಲ್ಲುಗಳ ಸುರಕ್ಷತೆಯ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.ಪರಶುರಾಮ ಸೃಷ್ಟಿಯ ಕಡಲತೀರದ ಕೋಟಿಲಿಂಗೇಶ್ವರ ದೇಗುಲದೊಡನೆ ಸಪ್ತ ಕ್ಷೇತ್ರವಾಗಿ ಉಡುಪಿ, ಸುಬ್ರಹ್ಮಣ್ಯ, ಕುಂಭಾಸಿ, ಶಂಕರನಾರಾಯಣ ಗೋಕರ್ಣ ಹಾಗೂ ಕೊಲ್ಲೂರು ಸೇರಿ ಏಳು ಕ್ಷೇತ್ರಗಳಾಗಿ ಮೋಕ್ಷದಾಯಕ ಪುಣ್ಯ ಸ್ಥಳಗಳೆಂದು ಪರಿಗಣಿಸಲ್ಪಟ್ಟಿವೆ.
ಶೂಲಪಾಣಿ, ಪರಶುಪಾಣಿ ದ್ವಾರಪಾಲಕರು ದೇಗುಲದ ಒಳಪೌಳಿಯ ಪ್ರವೇಶ ದ್ವಾರದಲ್ಲಿನ ಶೂಲಪಾಣಿ, ಪರಶುಪಾಣಿ ದ್ವಾರಪಾಲಕರು ಕ್ಷೇತ್ರದ ಇತಿಹಾಸವನ್ನು ಸಾರುತ್ತವೆ. ಕೋಟೇಶ್ವರನ ಉದ್ಭವವಾಗಿ ಯುಗಾಂತರಗಳಾಗಿದೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.
ಏಳು ಪ್ರದಕ್ಷಿಣ ಪಥ ಒಳಗೊಂಡ ದೇಗುಲ:
ಏಳು ಪ್ರದಕ್ಷಿಣ ಪಥ ಒಳಗೊಂಡ ದೇಗುಲವು ಪೂರ್ವಾಭಿಮುಖವಾಗಿದೆ. 60 ಸೆಂ.ಮೀ. ವ್ಯಾಸದ ವೃತ್ತಾಕಾರದ ಶಿಲಾ ಬಾವಿಯಿದೆ. 45 ಸೆಂ.ಮೀ. ಆಳದಲ್ಲಿ ಮೊರಬು ಶಿಲೆಗಳಿವೆ. ಈ ಶಿಲಾ ಬಾವಿಯ ಮೇಲೆ ಕರಿಶಿಲೆಯ ಬƒಹತ್ ಪಾಣಿಪೀಠವಿದೆ. ಅದರ ಮೇಲೆ ಶಿವನ ಪ್ರತಿಮೆಯನ್ನಿಟ್ಟು ಪೂಜಿಸಲಾಗುತ್ತಿದೆ. ಹೊರಭಾಗದಲ್ಲಿ ಅಗಲ ಕಿರಿದಾದ 2ನೇ ಸುತ್ತು ಇದ್ದು , ಮುಂಭಾಗ ವಿಸ್ತಾರವಾಗಿದೆ, ಇದನ್ನು ಸುಕನಾಸಿ ಎಂದು ಕರೆಯುತ್ತಾರೆ.
ಇಲ್ಲಿ ಬ್ರಹ್ಮ, ಶಿವ, ವಿಷ್ಣು ಮೊದಲಾದ ದೇವರ ಉಬ್ಬು ಶಿಲ್ಪ ಬಹುಪ್ರಾಚೀನ ಕಾಲದ್ದಾಗಿದೆ. ನಾನಾ ರೀತಿಯಲ್ಲಿ ಕ್ಷೇತ್ರದ ಇತಿಹಾಸ ಸಾರುವ ಸಂಶೋಧಕರಿಗೆ ಸವಾಲಾಗಿರುವ ಕೋಟಿಲಿಂಗೇಶ್ವರ ದೇಗುಲವು 1,400 ವರ್ಷಗಳ ಇತಿಹಾಸ ಹೊಂದಿದೆ.
ರಾಜ್ಯದ ಅತೀ ದೊಡ್ಡ ಕೋಟಿತೀರ್ಥ ಪುಷ್ಕರಿಣಿ:
ನಾಲ್ಕೂವರೆ ಎಕರೆ ವಿಸ್ತೀರ್ಣದ ಇಲ್ಲಿನ ಕೋಟಿ ತೀರ್ಥ ಪುಷ್ಕರಿಣಿ ಪುರಾಣ ಕಾಲದಲ್ಲಿ ಬ್ರಹ್ಮತೀರ್ಥ, ಬ್ರಹ್ಮಸರೋವರ, ಶಿವಗಂಗೆ, ಕೋಟಿ ಸರೋವರ ಮುಂತಾದ ಹೆಸರುಗಳಿಂದ ಗುರುತಿಸ್ಪಟ್ಟಿತ್ತು. ಈ
ಕೆರೆಯ ಆಗ್ನೇಯ ದಿಕ್ಕಿನ ಮೂಲೆಯಲ್ಲಿ ಒಂದು ಸುರಂಗವಿದ್ದು, ಅದರ ಇನ್ನೊಂದು ತುದಿ ಕೋಟ ಸಮೀಪದ ವಂಡಾರು ಎಂಬಲ್ಲಿ ಇದ್ದು ಇದರಲ್ಲಿ ಮೊಸಳೆ ವಾಸವಾಗಿತ್ತು ಎಂಬ ಪ್ರತೀತಿ ಇದೆ. ವಂಡಾರು ಕಂಬಳವಾದಾಗ ಕೋಟಿತೀರ್ಥ ಪುಷ್ಕರಿಣಿ ನೀರು ಕೆಸರಾಗುತ್ತಿದ್ದು ಇಲ್ಲಿ ಕೊಡಿಹಬ್ಬದ ದಿನ ರಥ ಎಳೆದಾಗ ವಂಡಾರು ಕಂಬಳ ಗದ್ದೆಯಲ್ಲಿ ಧೂಳು ಏಳುತ್ತಿತ್ತು ಎಂದು ವಿರ್ಮಶಕರು ವಿಶ್ಲೇಷಿಸಿದ್ದಾರೆ.