Advertisement

ಪ್ಲಾಸ್ಟಿಕ್‌ ಮುಕ್ತ “ಕೊಡಿ ಹಬ್ಬ’ಆಚರಣೆಗೆ ಒತ್ತು

10:26 PM Dec 08, 2019 | Sriram |

ಕೋಟೇಶ್ವರ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬವನ್ನು ಈ ಬಾರಿ ಪ್ಲಾಸ್ಟಿಕ್‌ ಮುಕ್ತವಾಗಿಸಲು ಸಾರ್ವಜನಿಕರು ಹಾಗೂ ಭಕ್ತರ ಸಹಕಾರ ಬೇಕಿದೆ ಎಂದು ಕೋಟೇಶ್ವರ ಮಹಾತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಹೇಳಿದ್ದಾರೆ.

Advertisement

ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಕೋಟೇಶ್ವರ ಗ್ರಾ.ಪಂ., ಬೀಜಾಡಿ ಗ್ರಾ.ಪಂ., ಗೋಪಾಡಿ ಗ್ರಾ.ಪಂ., ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸಂಸ್ಥೆಯಿಂದ ದೇವಸ್ಥಾನದಲ್ಲಿ ರವಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಸರಕಾರ ಒಮ್ಮೆ ಬಳಸುವ ಪ್ಲಾಸ್ಟಿಕ್‌ನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಅಲ್ಲದೆ ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ ಪರಿಸರವನ್ನು ಉಳಿಸಲು ಪಣತೊಟ್ಟಿದೆ. ಪ್ಲಾಸ್ಟಿಕ್‌ನಿಂದಾಗುವ ಅನಾಹುತಗಳ ಬಗ್ಗೆ ಈಗಾಗಲೇ ನಾಗರಿಕರಿಗೆ ಮನವರಿಕೆ ಆಗಿದೆ. ಈ ಹಿನ್ನೆಲೆಯಲ್ಲಿ, ಜಿಲ್ಲಾಡಳಿತದ ಸ್ಪಷ್ಟ ಆದೇಶದಂತೆ ಕೊಡಿ ಹಬ್ಬದಲ್ಲಿ ಪ್ಲಾಸ್ಟಿಕ್‌ ಬಳಸದೆ ಹಬ್ಬವನ್ನು ಆಚರಿಸಿ ಮಾದರಿಯಾಗಬೇಕಿದೆ. ಅಂಗಡಿಗಳ ಮಾಲಕರು ಕೂಡ ಗ್ರಾಹಕರಿಗೆ ಪ್ಲಾಸ್ಟಿಕ್‌ ನೀಡಬಾರದು, ಪರಿಸರ ಹಾನಿ ಮಾಡುವ ವಸ್ತುಗಳನ್ನು ಬಳಸದಂತೆ ಗ್ರಾ.ಪಂ. ಹಾಗೂ ಆಡಳಿತ ಮಂಡಳಿ ಎಚ್ಚರಿಕೆ ನೀಡಬೇಕು ಎಂದು ಗೋಪಾಡಿ ಗ್ರಾ.ಪಂ. ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್‌ ಹೇಳಿದರು.

ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ರೂವಾರಿ ಭರತ್‌ ಬಂಗೇರ, ಜನರಲ್ಲಿ ಪ್ಲಾಸ್ಟಿಕ್‌ ವಸ್ತುಗಳಿಂದಾಗುವ ಅನಾಹುತದ ಬಗ್ಗೆ ಎಚ್ಚರಿಕೆ ನೀಡಲು ಹಬ್ಬದಲ್ಲಿ ಒಂದು ಸ್ಟಾಲ್‌ ನಿರ್ಮಿಸಿ ಅಲ್ಲಿ ಜಾಗೃತಿ ಕಾರ್ಯಕ್ರಮ, ವಿಡಿಯೋ ಮೂಲಕ ತಾಜ್ಯ ಸಮಸ್ಯೆ ಕುರಿತು ಅರಿವು ಮೂಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಜಾತ್ರೆಯಲ್ಲಿ ಸಹಸ್ರಾರು ಜನರು ನೆರೆಯುವ ಕಾರಣ ಈ ಅಭಿಯಾನ ಯಶಸ್ವಿಯಾಗಲಿದ್ದು ಜನರು ಕೂಡ ಸ್ಪಂದಿಸುವ ಭರವಸೆ ಇದೆ ಎಂದರು.

ಕೋಟೇಶ್ವರ ಗ್ರಾ.ಪಂ. ಅಧ್ಯಕ್ಷೆ ಶಾಂತಾ ಗೋಪಾಲಕೃಷ್ಣ, ಬೀಜಾಡಿ ಗ್ರಾ.ಪಂ.ನ ಸದಸ್ಯ ವಾದಿರಾಜ ಹೆಬ್ಟಾರ್‌, ಸಮಾಜ ಸೇವಕ ಗಣೇಶ್‌ ಪುತ್ರನ್‌, ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್ ಸದಸ್ಯರಾದ ಅರುಣ್‌ ಕುಂದಾಪುರ, ಶಶಿಧರ ಎಚ್‌. ಎಸ್‌., ಸುಹಿತ್‌ ಬಂಗೇರ, ಸತ್ಯನಾರಾಯಣ ಮಂಜ, ರೋಹನ್‌ ಬಿ., ನಾಗಭೂಷಣ್‌ ಕಾಮತ್‌, ಸಂತೋಷ್‌ ಕಾಮತ್‌, ಪವಿತ್ರಾ ಕಾಮತ್‌, ಪ್ರತೀಕ್ಷಾ ಕಾಮತ್‌ ಅಕ್ಷಯ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಕೊಡಿಹಬ್ಬದ ವಿಶೇಷ ಕಟ್ಟೆವೋಲಗ
ಕೋಟೇಶ್ವರ: ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇಗುಲದ ಕೊಡಿ ಹಬ್ಬದ ಸಲುವಾಗಿ ಡಿ. 9ರಿಂದ ಡಿ. 11ರ ತನಕ ಕಟ್ಟೆವೋಲಗ ನಡೆಯಲಿದೆ.

ತೆಂಕಿನಕಟ್ಟೆ, ಬಡಗಿನಕಟ್ಟೆ ಹಾಗೂ ಮೂಡಿನ ಕಟ್ಟೆವೋಲಗದ ಸಲುವಾಗಿ ಆಯ್ದ ಕಟ್ಟೆಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ಗೋಪಾಡಿ, ಕಟೆRàರೆ, ಕುಂದಾಪುರ ತನಕ ಉತ್ಸವ ಮೂರ್ತಿ ಸಾಗಲಿದೆ.

ದೇಗುಲದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಾಂಡವ ನೃತ್ಯ ಹಾಗೂ ಚಂಡೆ ವಾದನ, ಡಿ. 8ರಂದು ನಡೆಯುವ ವೃಷಭ ವಾಹನ ಉತ್ಸವಕ್ಕೆ ಗ್ರಾಮಸ್ಥರು ಆಗಮಿಸುತ್ತಾರೆ.

ದೇಗುಲದ ಜಾತ್ರೆಯ ಸಲುವಾಗಿ ರಥಕ್ಕೆ ವಿಶೇಷ ಪುಷ್ಪಾಲಂಕಾರ ನಡೆಯಲಿದೆ. ಕೊಡಿ ಹಬ್ಬದ ಸಲುವಾಗಿ ಸಭಾಭವನದಲ್ಲಿ ಐದು ದಿನ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ದೇಗುಲ ಸಹಿತ ಇಡೀ ಪೇಟೆಯನ್ನು ದೀಪಾಲಂಕಾರ ದಿಂದ ವಿಶೇಷವಾಗಿ ಶೃಂಗಾರಿಸಲಾಗಿದೆ.

ಪ್ಲಾಸ್ಟಿಕ್‌ ಬಳಸಿದಲ್ಲಿ
ಸೂಕ್ತ ದಂಡ
ದೇಗುಲವನ್ನು ಕಟ್ಟುನಿಟ್ಟಾಗಿ ಪ್ಲಾಸ್ಟಿಕ್‌ ಮುಕ್ತಗೊಳಿಸಬೇಕೆಂದು ಸುತ್ತೋಲೆಯೂ ಇದೆ. ಪೂಜಾ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತಂದರೆ ಅವರಿಗೆ ದೇವಸ್ಥಾನ ಪ್ರವೇಶ ನಿಷೇಧಿಸಲಾಗಿದೆ. ಭಕ್ತರಿಗೆ ಸ್ವಯಂಸೇವಕರು ಈ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸಲಿದ್ದಾರೆ. ಅಲ್ಲದೆ ಜಾತ್ರೆಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಸ್ಥರು ಪ್ಲಾಸ್ಟಿಕ್‌ ಉಪಯೋಗಿಸದಂತೆ ನಿರ್ಬಂಧಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನು ತೆರೆದು ವ್ಯಾಪಾರ ಮಾಡುವವರು ಪ್ಲಾಸ್ಟಿಕ್‌ ಬಳಸಿದಲ್ಲಿ ಸೂಕ್ತ ದಂಡ ಹಾಗೂ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಪರಿಸರ ಸ್ನೇಹಿ ವಸ್ತುಗಳನ್ನು ಬಳಸುವುದಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಗೋಪಾಲಕೃಷ್ಣ ಶೆಟ್ಟಿ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next