Advertisement

Koteshwara: ಕೊಡಿ ಹಬ್ಬಕ್ಕೆ ಸಜ್ಜಾಗುತ್ತಿದೆ ಕೋಟಿಲಿಂಗೇಶ್ವರ ದೇಗುಲ

03:31 PM Dec 12, 2024 | Team Udayavani |

ಕೋಟೇಶ್ವರ: ಸಪ್ತಕ್ಷೇತ್ರಗಳಲ್ಲೊಂದಾದ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇಗುಲದಲ್ಲಿ ಡಿ.15ರಂದು ನಡೆಯಲಿರುವ ಕೊಡಿ ಹಬ್ಬಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ದೇಗುಲ ಸಹಿತ ಪೇಟೆಯ ಉದ್ದಗಲಕ್ಕೂ ವಿಶೇಷ ಅಲಂಕಾರ ಮಾಡಲಾಗಿದೆ. ಕೊಡಿ ಹಬ್ಬದ ಸಲುವಾಗಿ ರಂಗೋತ್ಸವ, ಪನ್ನಗ, ವಾಹನೋತ್ಸವ ಮೊದಲಾದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಡಿ. 12ರಿಂದ ನಾಲ್ಕೂ ದಿಕ್ಕುಗಳಿಗೆ ದೇವರು ಸಾಗಿ ಕಟ್ಟೆಪೂಜೆ ನಡೆಯಲಿದೆ.

Advertisement

ಕೋಟೇಶ್ವರ ಎಂಬ ಊರಿನ ಹೆಸರು, ಕೋ ಟಿಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ಹಲವು ಐತಿಹ್ಯಗಳಿವೆ. ವಸುಚಕ್ರವರ್ತಿಗೆ ಸಂತಾನ ವಿಲ್ಲದಿರುವುದರಿಂದ ಆತ ಕೋಟೇಶ್ವರದಲ್ಲಿ ಕೋಟಿಲಿಂಗೇಶ್ವರ ದೇಗುಲ ಕಟ್ಟಿಸಿದನೆಂಬ ಪ್ರತೀತಿ ಇದೆ. ಈ ದೇವಸ್ಥಾನಕ್ಕೆ 10ರಿಂದ 13ನೇ ಶತಮಾನದ ನಡುವೆ ನಿರ್ಮಾಣ ಆಗಿರಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ.

ಧ್ವಜಪುರವೆಂಬ ಹೆಸರಿತ್ತು: ಕೋಟೇಶ್ವರ ಎಂಬ ಈಗಿನ ಊರಿಗೆ ಧ್ವಜಪುರವೆಂಬ ಹೆಸರೂ ಇತ್ತೆಂದು ಕ್ರಿ.ಶ.1261ರ ಶಾಸನದ ದಾಖಲೆಗಳಲ್ಲಿ ಉಲ್ಲೇಖವಿದೆ. ಡಾ.ಶಿವರಾಮ ಕಾರಂತರು ಕೋಟೇಶ್ವರದ ಪುರಾತನ ಕಾಲದ ಹೆಸರು ಕೋಡಿ ಅಥವಾ ಕುಡಿ ಇರಬಹುದು ಎಂದು ದಾಖಲಿಸಿದ್ದಾರೆ. ಕುಡಿ ಎಂಬ ಶಬ್ದಕ್ಕೆ ಧ್ವಜ ಎಂಬ ಅರ್ಥವೂ ಇರುವುದರಿಂದ ಧ್ವಜಪುರಕ್ಕೂ ಇದನ್ನೂ ಸಾಮ್ಯತೆ ಕಂಡುಬರುತ್ತದೆ.

ಹಲವು ಶಾಸನಗಳು ಲಭ್ಯ
10ನೇ ಶತಮಾನದ ಮಧ್ಯಭಾಗದಿಂದ 14ನೇ ಶತಮಾನದ ಮಧ್ಯಭಾಗದವರೆಗಿನ (ಕ್ರಿ.ಶ 950-1350) ಕಾಲದಲ್ಲಿ ಕೊಟೇಶ್ವರದ ಬಗ್ಗೆ 16 ಶಾಸನಗಳು ಲಭಿಸಿವೆ. ವಿಜಯನಗರದ ಸಾಮ್ರಾಜ್ಯದ ಕಾಲದ ಇತರ 32 ಶಾಸನಗಳು ಇಲ್ಲಿ ಸಿಕ್ಕಿವೆ. ಸಂಶೋಧಕರಾದ ಡಾ. ಶಂಕರನಾರಾಯಣ ಉಡುಪ ಅವರ ಅಭಿಪ್ರಾಯದಂತೆ ಕೋಟೇಶ್ವರ ದೇಗುಲದ ಒಳಸುತ್ತಿನ ಮೂಡು ಭಾಗದಲ್ಲಿರುವ ಶಾಸನವು ಇಲ್ಲಿನ ತೇದಿ ಇರುವ ಶಾಸನಗಳಲ್ಲಿ ಮೊದಲಿನದ್ದಾಗಿದೆ.
ರೆ|ಫಾ| ಕಿಟ್ಟೆಲ್‌ ಮತ್ತು ಡಾ| ಪಿ. ಗುರುರಾಜ ಭಟ್ಟರು ಕೋಟೇಶ್ವರ ಹೆಸರಿನ ಹುಟ್ಟಿನ ಬಗ್ಗೆ ತಮ್ಮ ಪ್ರತಿಪಾದನೆ ಮಂಡಿಸಿದ್ದಾರೆ. ಇಲ್ಲಿನ ದೇವಾಲಯದಲ್ಲಿ ಬಳಸಿದ ಕಲ್ಲುಗಳು ಕೂಡಾ ಕಾಲಮಾನದ ಕಥೆ ಹೇಳುತ್ತವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next