Advertisement

ಟ್ರಸ್ಟ್‌ ಅಧ್ಯಕ್ಷರಿಗೆ ಧಕ್ಕೆ ತಂದ ಕೋಟಿಲಿಂಗ ಗದ್ದುಗೆ ಗುದ್ದಾಟ

07:47 AM Mar 10, 2019 | Team Udayavani |

ಬಂಗಾರಪೇಟೆ: ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದ ಪಟ್ಟದ ಕಿತ್ತಾಟ ದಿನೇ ದಿನೆ ಹೆಚ್ಚಾಗುತ್ತಿದೆ. ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಡುವಿನ ಮುಸುಕಿನ ಗುದ್ದಾಟದಿಂದ ಬೇಸತ್ತು 20 ದಿನಗಳ ಹಿಂದೆ ದೇವಾಲಯದ ಟ್ರಸ್ಟ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಶ್ರೀಗಳ ಸಹೋದರ ಕೆ.ಎನ್‌.ನಾರಾಯಣಮೂರ್ತಿ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Advertisement

ಕೋಲಾರ ಸಂಸದ ಕೆ.ಎಚ್‌.ಮುನಿಯಪ್ಪ ಅಧ್ಯಕ್ಷತೆಯಲ್ಲಿ ಕೆ.ವಿ.ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಅವರನ್ನು ಹೊಂದಾಣಿಕೆಯಿಂದ ದೇಗುಲವನ್ನು ನಡೆಸಲು ಮಾತುಕತೆ ಮೂಲಕ ಸೂಚನೆ ನೀಡಲಾಗಿತ್ತು. ಇದರ ನೇತೃತ್ವವನ್ನು ಶ್ರೀಗಳ ಸಹೋದರ ಕೆ.ಎನ್‌.ನಾರಾಯಣಮೂರ್ತಿ ಅವರಿಗೆ ವಹಿಸಲಾಗಿತ್ತು. ಹಲವಾರು ಬಾರಿ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ರಿಗೆ ಬುದ್ಧಿವಾದ ಹೇಳಿದರೂ ಶಿವಪ್ರಸಾದ್‌ ತನ್ನ ಚಿಕ್ಕಪ್ಪ ಕೆ.ಎನ್‌.ನಾರಾಯಣಮೂರ್ತಿ ಅವರಿಗೆ ಗೌರವ ನೀಡದೇ ತಮ್ಮ ಇಷ್ಟಾನುಸಾರವಾಗಿ ನಡೆದುಕೊಳ್ಳುತ್ತಿದ್ದರೆನ್ನಲಾಗಿದ್ದು ಈ ಬಗ್ಗೆ ತೀವ್ರ ಬೇಸರದಿಂದ ಸಂಸದ ಕೆ.ಎಚ್‌.ಮುನಿಯಪ್ಪರಿಗೂ ಮಾಹಿತಿ ಆಗ್ಗಿಂದಾಗ್ಗೆ ನೀಡಿದ್ದರು. 

ಮಾ.2 ರಿಂದ 6ರವರೆಗೆ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ ಮಹಾಶಿವರಾತ್ರಿ ಜಾತ್ರೆ ನಡೆಯಲು ಟ್ರಸ್ಟ್‌ ಅಧ್ಯಕ್ಷ ಕೆ.ಎನ್‌.ನಾರಾಯಣಮೂರ್ತಿ ಅಧ್ಯಕ್ಷತೆಯಲ್ಲಿಯೇ ಎಲ್ಲಾ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಲಾಗಿತ್ತು. ದೇವಾಲಯದಲ್ಲಿ ಎಲ್ಲಾ ಪೂಜಾ ಕಾರ್ಯಗಳು ಶ್ರೀಗಳ ಆಶಯದಂತೆಯೇ ಅದ್ಧೂರಿಯಾಗಿ ಆಚರಣೆ ಮಾಡಿದರೂ ಕೆ.ವಿ.ಕುಮಾರಿ ಹಾಗೂ ಡಾ.ಶಿವಪ್ರಸಾದ್‌ ಹೊಂದಾಣಿಕೆಯಿಂದ ಹೋಗುವ ಲಕ್ಷಣಗಳು ಕಾಣಿಸಿಲ್ಲ.

ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ರಾತ್ರೋರಾತ್ರಿ ಹುಂಡಿಗಳನ್ನು ಒಡೆದಿರುವುದು. ಮಹಾಶಿವರಾತ್ರಿ ನಂತರ ಇವರ ಗಮನಕ್ಕೆ ಬಾರದೇ ಮತ್ತೆ 2ನೇ ಬಾರಿಗೆ ಹುಂಡಿ ಒಡೆದು ಹಣ ಪಡೆದಿರುವುದು. ದಿನಸಿ ಅಂಗಡಿಗಳಿಂದ ಪ್ರತಿನಿತ್ಯ ಬಾಡಿಗೆ ವಸೂಲಿಯಲ್ಲಿ ಬೆದರಿಕೆ ಹಾಕುವುದು. ದೇಗುಲದ ಅರ್ಚಕರನ್ನು ನಾರಾಯಣಮೂರ್ತಿ ಅವರೊಂದಿಗೆ ಮಾತನಾಡದಂತೆ ಎಚ್ಚರಿಕೆ ನೀಡಿರುವುದು. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಬೇತಮಂಗಲ ಪಿಎಸ್‌ಐ ಸುನೀಲ್‌ಕುಮಾರ್‌, ಡಿವೈಎಸ್ಪಿ, ತಹಶೀಲ್ದಾರ್‌, ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆಂದು ತಿಳಿದು ಬಂದಿದೆ.

ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ ವಿವಾದಗಳನ್ನು ತಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮಧ್ಯೆಪ್ರವೇಶಿಸಿ ಎರಡೂ ಗುಂಪುಗಳ ವರ್ತನೆಯಿಂದ ದೇಗುಲದಲ್ಲಿ ಅಶಾಂತಿ ಉಂಟಾಗಿ ನೆಮ್ಮದಿ ಹಾಳಾಗುತ್ತಿರುವುದನ್ನು ತಡೆಯಲು ಈ ಹಿಂದೆ ಶಾಂತಿ ಸಭೆ ನಡೆಸಿದರೂ ಇಬ್ಬರ ನಡುವಿನ ಗಲಾಟೆ ಕಡಿಮೆಯಾಗಿರಲಿಲ್ಲ. ದೇಗುಲದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಸೆಕ್ಷನ್‌ 107 ದೂರು ದಾಖಲಿಸಿದ್ದದ್ದು ಬೇಸರ ತಂದಿತ್ತು ಎನ್ನಲಾಗಿದೆ.

Advertisement

ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದ ಟ್ರಸ್ಟ್‌ ಅಧ್ಯಕ್ಷರಾಗಿದ್ದ ಶ್ರೀಕಮಲ ಸಾಂಭವಶಿವಮೂರ್ತಿಗಳು ಡಿ.14ರಂದು ಲಿಂಗೈಕ್ಯರಾಗಿದ್ದರಿಂದ ಶ್ರೀಗಳ ಸಹೋದರ ಕೆ.ಎನ್‌.ನಾರಾಯಣಮೂರ್ತಿ ಫೆ.18ರಂದು ಟ್ರಸ್ಟ್‌ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಕೆ.ವಿ.ಕುಮಾರಿ ಹಾಗೂ ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ಹೊಂದಾಣಿಕೆಯಿಂದ ಹೋಗಲು ಸ್ಥಳೀಯ ಕೆಲವು ಮುಖಂಡರ ಕಿರುಕುಳದಿಂದ ಆಗುತ್ತಿಲ್ಲ ಎನ್ನುವುದೇ ದೇಗುಲದ ಟ್ರಸ್ಟ್‌ ನಿರ್ಗಮಿತ ಅಧ್ಯಕ್ಷ ನಾರಾಯಣಮೂರ್ತಿ ಅವರಿಗೆ ಬೇಸರ ತಂದಿದೆ ಎನ್ನಲಾಗಿದೆ.

ಇಬ್ಬರ ಹೊಂದಾಣಿಕೆ ಅಸಾಧ್ಯವಾಗಿದೆ…: ನಮ್ಮ ಅಣ್ಣ ಶ್ರೀಕಮಲ ಸಾಂಭವಶಿವಮೂರ್ತಿ ಸ್ವಾಮೀಜಿಗಳು ಇಡೀ ವಿಶ್ವದಲ್ಲಿ ಪ್ರವಾಸಿತಾಣವಾಗಿ ನಿರ್ಮಾಣ ಮಾಡಿದ ಕಮ್ಮಸಂದ್ರದ ಶ್ರೀಕೋಟಿಲಿಂಗ ದೇಗುಲದಲ್ಲಿ ಶಾಂತಿ ಕಾಪಾಡಬೇಕೆನ್ನುವ ಉದ್ದೇಶ ಹೊಂದಿದ್ದರು. ಆದರೆ, ಶ್ರೀಗಳ ಪುತ್ರ ಡಾ.ಶಿವಪ್ರಸಾದ್‌ ನಡಾವಳಿಕೆ ತೀವ್ರ ಬೇಸರ ತಂದಿದೆ. ಸಂಸದ ಕೆ.ಎಚ್‌.ಮುನಿಯಪ್ಪ ಸೂಚನೆ ಮೇರೆಗೆ ಇವರಿಬ್ಬರ ನಡುವೆ ಹೊಂದಾಣಿಕೆ ಮೂಡಿಸಲು ಎಷ್ಟೇ ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ.

ಮಹಾಶಿವರಾತ್ರಿ ಜಾತ್ರೆಯನ್ನು ನನ್ನ ಅಧ್ಯಕ್ಷತೆಯಲ್ಲಿ ಯಾವುದೇ ಗಲಾಟೆ ಇಲ್ಲದೇ ಸುಸೂತ್ರವಾಗಿ ನಡೆಸಿದ್ದೇನೆ. ಯಾವುದೇ ತಪ್ಪು ಮಾಡದಿದ್ದರೂ ಟ್ರಸ್ಟ್‌ ಅಧ್ಯಕ್ಷರಾಗಿದ್ದಕ್ಕೆ ನನ್ನ ಮೇಲೆ ಪೊಲೀಸ್‌ ಸೆಕ್ಷನ್‌ 107 ದೂರು ದಾಖಲಿಸಿರುವುದು ನೋವುಂಟು ಮಾಡಿದೆ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿರುವುದರಿಂದ ಟ್ರಸ್ಟ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಕಮ್ಮಸಂದ್ರ ಕೋಟಿಲಿಂಗ ದೇಗುಲದ ನಿರ್ಗಮಿತ ಅಧ್ಯಕ್ಷ ಕೆ.ಎನ್‌.ನಾರಾಯಣಮೂರ್ತಿ ತಿಳಿಸಿದ್ದಾರೆ.

* ಎಂ.ಸಿ.ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next