Advertisement

ಇಂದು ಕರಾವಳಿಯ ವಿವಿಧೆಡೆ ಕೋಟಿಕಂಠ ಗಾಯನ

11:10 PM Oct 27, 2022 | Team Udayavani |

ಉಡುಪಿ: ರಾಜ್ಯೋತ್ಸವದ ಪ್ರಯುಕ್ತ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್‌ ಕುಮಾರ್‌ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ. 28ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮವು ಕರಾವಳಿಯ ವಿವಿಧ ಭಾಗಗಳಲ್ಲಿ ನಡೆಯಲಿದೆ.

Advertisement

ಮಲ್ಪೆ ಸಮುದ್ರ ಮಧ್ಯದಲ್ಲಿ ಸುಮಾರು 130 ದೋಣಿಗಳಲ್ಲಿ 4,000 ಜನರು ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪೊಲೀಸ್‌ ಬ್ಯಾಂಡ್‌ನೊಂದಿಗೆ 5,000 ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು, ಮಲ್ಪೆಯ ಸೈಂಟ್‌ ಮೇರಿಸ್‌ ದ್ವೀಪದಲ್ಲಿ ನಗರಸಭೆಯ ವತಿಯಿಂದ, ಮಣಿಪಾಲದ ಗ್ರೀನ್ಸ್‌ನಲ್ಲಿ ಮಾಹೆ ವಿ.ವಿ.ಯ ಸಹಭಾಗಿತ್ವದಲ್ಲಿ 5,000 ವೈದ್ಯರು ಬಿಳಿ ಕೋಟ್‌, ಸ್ಟೆತೊಸ್ಕೋಪ್‌ನೊಂದಿಗೆ, ನಿಟ್ಟೆ ವಿ.ವಿ.ಯಲ್ಲಿ 3,000 ವಿದ್ಯಾರ್ಥಿಗಳು, ಕಾರ್ಕಳ ಅತ್ತೂರು ಚರ್ಚ್‌, ಚತುರ್ಮುಖ ಬಸದಿ, ಗೊಮ್ಮಟ ಬೆಟ್ಟ, ಆನೆಕೆರೆ, ವರಂಗ ಬಸದಿಯಲ್ಲಿ ಕೋಟಿಕಂಠ ಗಾಯನ ನಡೆಯಲಿದೆ.

ಕೈಗಾರಿಕೆ ಇಲಾಖೆ ಜಿಲ್ಲೆಯಿಂದ 30,000 ಕಾರ್ಮಿಕರು (ವಿವಿಧ ಕೈಗಾರಿಕೆ ಪ್ರದೇಶದಲ್ಲಿ), ಕಾರ್ಮಿಕ ಇಲಾಖೆಯಿಂದ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಕಟ್ಟಡ ಕಾರ್ಮಿಕರು, ಕಾಪು ಜೂನಿಯರ್‌ ಕಾಲೇಜು ಮತ್ತು ಬಂಟಕಲ್‌ ಎಂಜಿನಿಯರಿಂಗ್‌ ಕಾಲೇಜು, ಕುಂದಾಪುರ ಜೂನಿಯರ್‌ ಕಾಲೇಜು, ಬೈಂದೂರು ಗಾಂಧಿ ಮೈದಾನ, ಉಡುಪಿ ನ್ಯಾಯಾಲಯಗಳ ಸಂಕೀರ್ಣ, 155 ಗ್ರಾ.ಪಂ., ಗ್ರಂಥಾಲಯಗಳಲ್ಲಿ, ಶಾಲಾ ಕಾಲೇಜು, ರೈಲ್ವೇ, ಆಟೋ, ಬಸ್‌ ನಿಲ್ದಾಣ, ಧಾರ್ಮಿಕ ಕೇಂದ್ರಗಳಲ್ಲಿ, ಬ್ಯಾಂಕ್‌ ಹಾಗೂ ಎಲ್‌ಐಸಿ ಕಚೇರಿಗಳಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯಿಂದ  ಕೋಟಿಕಂಠ ಗಾಯನ:

ಜಿಲ್ಲಾ ಬಿಜೆಪಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಡಾ| ವಿ.ಎಸ್‌. ಆಚಾರ್ಯ ಅವರ ಪ್ರತಿಮೆಯ ಎದುರು 500 ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಕೆಂಪು-ಹಳದಿ ಶಾಲು, ಟೋಪಿ ಧರಿಸಿ ಕೋಟಿ ಕಂಠ ಗಾಯನದಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ದ.ಕ.ದಿಂದ 8 ಲಕ್ಷ ಮಂದಿ:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಲ್ಲಿ, ಸರಕಾರಿ ಕಚೇರಿ, ರೈಲು, ಬಸ್‌ ನಿಲ್ದಾಣ, ವಿಮಾನ ನಿಲ್ದಾಣ ಇತ್ಯಾದಿ ಸ್ಥಳಗಳಲ್ಲಿ ಕೋಟಿ ಕಂಠ ಗಾಯನದಲ್ಲಿ  8 ಲಕ್ಷ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕ ರಾಜೇಶ್‌ ತಿಳಿಸಿದ್ದಾರೆ.

ಬಂದರಿನಲ್ಲಿ 70 ದೋಣಿಗಳಲ್ಲಿ ಸಾವಿರಕ್ಕೂ ಅಧಿಕ ಮಂದಿ, ಮೂಡುಬಿದಿರೆಯ ಆಳ್ವಾಸ್‌ ಕ್ಯಾಂಪಸ್‌ನಲ್ಲಿ 20 ಸಾವಿರ ವಿದ್ಯಾರ್ಥಿಗಳು,  ಸಾವಿರ ಕಂಬದ ಬಸದಿಯಲ್ಲಿ ಸುಮಾರು 2 ಸಾವಿರ ಮಂದಿ, ಪಣಂಬೂರು ಕಡಲ ಕಿನಾರೆಯಲ್ಲಿ 5 ಸಾವಿರ ವಿದ್ಯಾರ್ಥಿಗಳು, ಕದ್ರಿ ದೇವಸ್ಥಾನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಮಾರು 3 ಸಾವಿರ ಸದಸ್ಯರು, ವಿವಿಧ ಕೈಗಾರಿಕೆ ಪ್ರದೇಶಗಳಲ್ಲಿನ ಉದ್ದಿಮೆಗಳ 20 ಸಾವಿರಕ್ಕೂ ಅಧಿಕ ಕಾರ್ಮಿಕರು ಆಯಾ ಸ್ಥಳದಲ್ಲೇ ಪಾಲ್ಗೊಳ್ಳಲಿದ್ದಾರೆ.

ನೌಕೆಗಳಲ್ಲಿ ಗಾಯನ:

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನೌಕೆಯಲ್ಲಿ ಸಾಗುತ್ತಾ ಸಮುದ್ರ ಹಾಗೂ ಫಲ್ಗುಣಿ, ನೇತ್ರಾವತಿ ಸೇರುವ ಜಾಗದಲ್ಲಿ ಹಾಡುಗಳನ್ನು ಹಾಡುವ ಕಾರ್ಯಕ್ರಮವಿದೆ.

Advertisement

Udayavani is now on Telegram. Click here to join our channel and stay updated with the latest news.

Next