Advertisement

ಬರಿಯ ಓಟವಲ್ಲ; ಸಮಗ್ರ ತರಬೇತಿಯ ತಾಣ

09:07 PM Sep 29, 2021 | Team Udayavani |

ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆಯಲ್ಲಿರುವ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ ಈಗ ಕಂಬಳದ ತರಬೇತಿ ಪಡೆಯುತ್ತಿರುವ 18ರಿಂದ 27 ವರ್ಷ ವಯೋಮಾನದ 33 ಮಂದಿ ಯುವಜನರದ್ದೇ ಸಂಭ್ರಮ.

Advertisement

ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ವ್ಯಾಪ್ತಿಯ “ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆಮಿ ವತಿಯಿಂದ ಸೆ. 19ರಿಂದ ಹದಿನಾರು ದಿನಗಳ ಪರ್ಯಂತ 6ನೇ ವರ್ಷದ ಕಂಬಳ ತರಬೇತಿ ಶಿಬಿರ ನಡೆಯುತ್ತಿದೆ.

ಕಂಬಳದ ವಿಶ್ವಕೋಶ ಹೆಸರಾಂತ ಗುಣಪಾಲ ಕಡಂಬರ ಮುತುವರ್ಜಿ, ಮಾರ್ಗದರ್ಶನದಲ್ಲಿ 5 ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದೆ. ಇದು ಆರನೇಯದು.

ಇದು ಬರೇ ಕೋಣಗಳನ್ನು ಓಡಿಸು ವವವರ ತರಬೇತಿ ಅಲ್ಲ. ಇಲ್ಲಿ ಕೋಣಗಳ ಪರಿಪಾಲನೆ, ಆರೈಕೆಯಿಂದ ತೊಡಗಿ ಮನುಷ್ಯ ಪಶುಪ್ರೀತಿಯನ್ನು ರೂಢಿಸಿಕೊಳ್ಳುವ ಬಗ್ಗೆ ಶಿಬಿರದಲ್ಲಿ ತಿಳಿಸಲಾಗುತ್ತದೆ.

ಶಿಬಿರದ ವೇಳಾಪಟ್ಟಿ ಮುಂಜಾನೆ ಗಂಟೆ 5.30ರಿಂದಲೇ ಪ್ರಾರಂಭ. ಯೋಗಾಸನ, ವ್ಯಾಯಾಮ, ಕೋಣಗಳ ಪಾಲನೆ,ಲಾಲನೆ, ಮಜ್ಜನ, ಕೋಣಗಳೊಂದಿಗೆ ಓಟದ ತರ ಬೇತಿ, ಕಂಬಳಕ್ಕೆ ಸಂಬಂಧಿಸಿದ ಪರಿಕ ರಗಳ ಪರಿಚಯ, ವಿಶೇಷವಾಗಿ ಕಂಬಳದ ಕೋಣ ಗಳಿಗೆ ಸಂಬಂಧಿಸಿದ ವಿವಿಧ ಹಗ್ಗಗಳ ನೇಯ್ಗೆ, ಬೆತ್ತದ ಕರಕೌಶಲ ಇವನ್ನೆಲ್ಲ ಕಲಿಸಲಾಗುತ್ತಿದೆ.

Advertisement

ಇದನ್ನೂ ಓದಿ:ಸರಕಾರಕ್ಕೆ 48 ಗಂಟೆಗಳ ಗಡುವು ನೀಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ

ಏನೆಲ್ಲ ಹಗ್ಗಗಳು, ಬೆತ್ತಗಳು?
ಕೋಂಟುದ ಬಲ್ಲ್ , ಪೊನಕೆದ ಬಲ್ಲ್ , ನೆತ್ತಿದ ಬಲ್ಲ್ (ಹಣೆಯ ಹಗ್ಗ), ಕೋಣಗಳನ್ನು ಓಡಿಸುವ “ಗಿಡಾವುನ ಬಲ್ಲ್ , ಪನೆತ ಬಲ್ಲ್ , ಕೋಣಗಳನ್ನು ಕರೆತರುವಾಗ ಹಾಕಲಾಗುವ “ಕೊನಪುನ ಬಲ್ಲ್ ‘ಹೀಗೆ ಆರು ಬಗೆಯ ಹಗ್ಗಗಳನ್ನು ಹೊಸೆಯುವ, ನೇಯ್ಗೆ ಮಾಡುವ, ಕಲಾತ್ಮಕ ಬೆತ್ತ ತಯಾರಿಸುವ ಕರ ಕೌಶಲವನ್ನು ಶಿಬಿರಾಧಿಕಾರಿ ಸರಪಾಡಿ ಜೋನ್‌ ಸಿರಿಲ್‌ ಡಿ’ಸೋಜಾ ಜತೆಗೆ ರಾಮಕೃಷ್ಣ ರೆಂಜಾಳ, ಕಡಂದಲೆ ಗಣೇಶ ಸಫ‌ಲಿಗ ಮಾರ್ಗದರ್ಶನ ನೀಡುತ್ತಿದ್ದಾರೆ.

ಶಿಬಿರದಲ್ಲಿ ನಾಯಕತ್ವ, ವ್ಯಕ್ತಿತ್ವ ವಿಕಸನ, ಆರೋಗ್ಯಕರ ಆಹಾರ, ಕಂಬಳದ ಧಾರ್ಮಿಕ ಆಚರಣೆ, ನಿಯಮ/ಸಮಯ ಪಾಲನೆ, ಕಂಬಳ ಸುಧಾರಣೆಯಲ್ಲಿ ಕೋಣದ ಯಜಮಾನರ ಪಾತ್ರ, ಪರಿಕರ ರಚನೆ, ದೈಹಿಕ ಕ್ಷಮತೆ, ವಿಮೆ, ಕೋಣಗಳ ಆರೈಕೆ, ತರಬೇತಿ, ಪ್ರಥಮ ಚಿಕಿತ್ಸೆ, ತುಳುನಾಡ ಸಂಸ್ಕೃತಿ, ಕಂಬಳದಲ್ಲಿ ಸಾಮಾಜಿಕ ಪಾತ್ರ ಇಂಥ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಅಮೂಲ್ಯ ಮಾಹಿತಿ ನೀಡಲಾಗುತ್ತಿದೆ.

ತುಳು ಅಕಾಡೆಮಿ ಮುದ್ರೆ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಈ ತರಬೇತಿ ಶಿಬಿರಕ್ಕೆ ಸಹಭಾಗಿತ್ವ ಸಾರಿದ್ದು, ಸರಕಾರಿ ಲಾಂಛನದೊಂದಿಗೆ, ಅಕಾಡೆಮಿಯ ಮುದ್ರೆಯೊಂದಿಗೆ ಪಾಲ್ಗೊಂಡವರಿಗೆ ಪ್ರಮಾಣಪತ್ರ ಲಭಿಸಲಿದೆ.

ಯೋಗ ತರಬೇತಿಯಲ್ಲಿ ಆಳ್ವಾಸ್‌ನ ದೈಹಿಕ ಶಿಕ್ಷಣ ಶಿಕ್ಷಕ ವಸಂತ ಜೋಗಿ, ಶಾಂತಾರಾಮ್‌, ಸೀತಾರಾಮ ಶೆಟ್ಟಿ, ಬಂಟ್ವಾಳ, ರವೀಂದ್ರ ಕುಮಾರ ಕುಕ್ಕುಂದೂರು, ನಟರಾಜ ಹೆಗ್ಡೆ ಹಿರಿಯಡಕ, ಸುರೇಶ್‌ ಕೆ. ಪೂಜಾರಿ ರೆಂಜಾಳ ಕಾರ್ಯ, ಸುಭಾಶಚಂದ್ರ ಚೌಟ, ಜ್ವಾಲಾಪ್ರಸಾದ್‌ ಪಡ್ಯಾರ ಮನೆ ಈದು, ಆದಿರಾಜ ಜೈನ್‌, ಅಲ್ಲಿಪಾದೆ, ಉಮೇಶ ಕರ್ಕೇರ ಪುತ್ತೂರು, ಶ್ರೀಧರ ಆಚಾರ್ಯ ಸಾಣೂರು ಮೊದಲಾದವರಿದ್ದಾರೆ.

ಶಿಸ್ತು ಸಹಿತ ತರಬೇತಿ
ಕಂಬಳದ ಕೋಣಗಳ ಜತೆಗೆ ಎರಡು ದಿನ ನರ್ವಸ್‌ ಆಗಿದ್ದೆ. ಮೂರನೇ ದಿನದಿಂದ ಕೋಣಗಳೊಂದಿಗೆ ಸಲುಗೆಯಿಂದಿರಲು ಸಾಧ್ಯವಾಗುತ್ತಿದೆ. ಶಿಸ್ತು ಸಹಿತ ತರಬೇತಿ. ಎಲ್ಲವೂಉತ್ತಮ ಗುಣಮಟ್ಟದ್ದು.
-ಸೃಜನ್‌ ರೈ, ದೈಹಿಕ ಶಿಕ್ಷಣ ಶಿಕ್ಷಕ ಸಿದ್ದಕಟ್ಟೆ, ಶಿಬಿರಾರ್ಥಿ

 

Advertisement

Udayavani is now on Telegram. Click here to join our channel and stay updated with the latest news.

Next