ಡೆಹ್ರಾಡೂನ್ : ಈ ವರ್ಷದ ಫೆಬ್ರವರಿಯಲ್ಲಿ ನಡೆದ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ನಿವೃತ್ತ ಕರ್ನಲ್ ಅಜಯ್ ಕೊಥಿಯಾಲ್ ಅವರು ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮಾಜಿ ಸೇನಾಧಿಕಾರಿ ಟ್ವಿಟರ್‌ನಲ್ಲಿ ಪಕ್ಷವನ್ನು ತೊರೆಯುವ ನಿರ್ಧಾರವನ್ನು ಘೋಷಿಸಿ, ತಮ್ಮ ರಾಜೀನಾಮೆ ಪತ್ರದ ಸಾಫ್ಟ್ ಕಾಪಿಯನ್ನು ಪೋಸ್ಟ್ ಮಾಡಿದ್ದಾರೆ.
ಗಂಗೋತ್ರಿ ವಿಧಾನಸಭಾ ಕ್ಷೇತ್ರದಿಂದ ಕೊಥಿಯಾಲ್ ಠೇವಣಿ ಕಳೆದುಕೊಳ್ಳುವ ಮೂಲಕ ಎಎಪಿ ಮುಖಭಂಗ ಅನುಭವಿಸಿತ್ತು.
“ನಾನು ಏಪ್ರಿಲ್ 19, 2021 ರಿಂದ ಮೇ 18, 2022 ರವರೆಗೆ ಆಮ್ ಆದ್ಮಿ ಪಕ್ಷದ ಸದಸ್ಯನಾಗಿದ್ದೇನೆ. ಮಾಜಿ ಸೈನಿಕರು, ಮಾಜಿ ಅರೆ ಮಿಲಿಟರಿ ಸಿಬ್ಬಂದಿ, ಹಿರಿಯರು, ಮಹಿಳೆಯರು, ಯುವಕರು ಮತ್ತು ಬುದ್ಧಿಜೀವಿಗಳ ಭಾವನೆಗಳನ್ನು ಇಟ್ಟುಕೊಂಡು ನಾನು ನಿಮಗೆ ಮೇ 18 ರಂದು ನನ್ನ ರಾಜೀನಾಮೆ ಪಾತ್ರ ಕಳುಹಿಸುತ್ತಿದ್ದೇನೆ. ” ಎಂದು ಕರ್ನಲ್ ಕೊಥಿಯಾಲ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಕುತುಬ್ ಮಿನಾರ್ ರಾಜ ವಿಕ್ರಮಾದಿತ್ಯ ನಿರ್ಮಿಸಿದ್ದು: ಧರಂ ವೀರ್ ಶರ್ಮಾ
ಚುನಾವಣಾ ಸೋಲಿನ ನಂತರ ಪಕ್ಷವು ತನ್ನನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಕೊಥಿಯಾಲ್ ಅತೃಪ್ತರಾಗಿದ್ದರು ಎಂದು ಹೇಳಲಾಗುತ್ತಿದೆ. ಉತ್ತರಾಖಂಡದಲ್ಲಿ ಅದರ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಪಕ್ಷದ ಸಭೆಗೆ ಅವರನ್ನು ಆಹ್ವಾನಿಸಿರಲಿಲ್ಲ.