ಬೆಳ್ತಂಗಡಿ: ಜ್ಯೋತಿರಾಜ್ ಯಾನೆ ಕೋತಿ ರಾಜ್ ಎಂದೇ ಖ್ಯಾತಿಯಾಗಿರುವ ಮಂಕಿ ಮ್ಯಾನ್ ಫೆ.12 ರಂದು ಯಾವುದೇ ಸಹಾಯವಿಲ್ಲದೆ ಕೈ ಮೂಲಕ ಗಡಾಯಿಕಲ್ಲು ಏರುವ ಸಾಹಸಕ್ಕೆ ಮುಂದಾಗಿದ್ದಾರೆ.
ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ಸಮುದ್ರ ಮಟ್ಟದಿಂದ 1700 ಅಡಿ ಎತ್ತರದ ಐತಿಹಾಸಕ ಗಡಾಯಿಕಲ್ಲು ಏರಲು ಕಳೆದ ಎರಡು ದಿನಗಳಿಂದ 8 ಮಂದಿ ತಂಡದೊಂದಿಗೆ ಸಿದ್ಧತೆ ಕೈಗೊಂಡಿದ್ದರು.
ರವಿವಾರ ಬೆಳಗ್ಗೆ ಇಲ್ಲಿನ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವಸ್ಥಾನದ ಉತ್ತರ ಭಾಗದಿಂದ ಗಡಾಯಿಕಲ್ಲು ಏರುವ ಮುನ್ನ 9.50 ಕ್ಕೆ ತೆಂಗಿನ ಕಾಯಿ ಒಡೆದು ಹತ್ತಲು ಆರಂಭಿಸಿದ್ದಾರೆ.
ಇದಕ್ಕೂ ಮುನ್ನ ವನ್ಯಜೀವಿ ವಿಭಾಗದಿಂದ ಅನುಮತಿ ಪಡೆದಿದ್ದಾರೆ. ಅಪಾಯ ಎದುರಾದರೆ ಮುನ್ನೆಚ್ಚರಿಕೆಯಾಗಿ ರೋಪ್ ಅಳವಡಿಸಲಾಗಿದೆ. ಆದರೂ ಕೈಗಳ ಸಹಾಯದಿಂದಲೇ ಲಂಭಾಕಾರದ ಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ಏರುವ ಮೂಲಕ ಮತ್ತೊಂದು ದಾಖಲೆಗೆ ಮುಂದಾಗಿದ್ದಾರೆ.
ಈಗಾಗಲೆ ಚಿತ್ರದುರ್ಗದಲ್ಲಿ ಕೋಟೆಗಳನ್ನು ಅನಾಯಾಸವಾಗಿ ಏರುವ ಮೂಲಕ ಪ್ರವಾಸಿಗರನ್ನು ರಂಜಿಸುತ್ತಿದ್ದ ಕೋತಿ ರಾಜ್ ಇದೀಗ ಗಡಾಯಿಕಲ್ಲು ಏರುವ ಸಾಹಸದಲ್ಲಿ ನಿರತರಾಗಿದ್ದಾರೆ.