Advertisement
ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಕೆ.ಎನ್. ವೆಂಕಟನಾರಾಯಣ ಅವರು ಈ ಮಹಾಸಮಾವೇಶದ ಧ್ವಜಾರೋಹಣ ನೆರವೇರಿಸಿದರು. ಬೆಳಗ್ಗೆ ವರೇಣ್ಯ ಗಾಯತ್ರೀ ಯಾಗಶಾಲೆಯಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇ|ಮೂ| ಪಿ. ಲೋಕೇಶ ಅಡಿಗ ಬಡಾಕೆರೆ ಅವರ ನೇತೃತ್ವದಲ್ಲಿ, ಪ್ರಧಾನ ಅರ್ಚಕ ವೇದಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಭಟ್‌ಸಹಕಾರದೊಂದಿಗೆ ಶ್ರೀ ಗಾಯತ್ರಿ ಯಜ್ಞ ಪ್ರಾರಂಭಗೊಂಡು, ಬಳಿಕ ಮಹಾಯಜ್ಞದ ಪೂರ್ಣಾಹುತಿಯೊಂದಿಗೆ ಸಂಪನ್ನಗೊಂಡಿತು.
ಈ ಮಹಾಸಮ್ಮೇಳನಕ್ಕೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ವಿಪ್ರ ಸಮಾಜ ಬಾಂಧವರು ಆಗಮಿಸಿದ್ದರು. ಬೆಂಗಳೂರು, ಶಿವಮೊಗ್ಗ, ಹೊಸನಗರ, ಶೃಂಗೇರಿ, ಹುಬ್ಬಳ್ಳಿ, ಉತ್ತರ ಕನ್ನಡ, ಮಂಗಳೂರು ಸಹಿತ ರಾಜ್ಯದೆಲ್ಲೆಡೆಯಿಂದ ಅಂದಾಜು 30 ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸಿದ್ದರು.
ಮಹಾ ಸಮ್ಮೇಳನದಲ್ಲಿ ಪುಸ್ತಕ, ತಿಂಡಿ – ತಿನಿಸುಗಳು, ವಸ್ತ್ರ, ಯಂತ್ರೋಪಕರಣಗಳ ಹತ್ತಾರು ಮಳಿಗೆಗಳನ್ನು ಹಾಕಲಾಗಿದ್ದು, ಜನರು ಖರೀದಿಗೆ ಮುಗಿ ಬೀಳುತ್ತಿರುವುದು ಕಂಡು ಬಂತು.
Related Articles
ಇನ್ನೂ ಸಮ್ಮೇಳನಕ್ಕೆ ತೆರಳಲು ಅನುಕೂಲ ವಾಗುವಂತೆ ಕುಂದಾಪುರದಿಂದ ಕೋಟೇಶ್ವರದ ಕಾಲೇಜುವರೆಗೆ ವಿಶೇಷ ಬಸ್ ವ್ಯವಸ್ಥೆಗಳನ್ನು ಕೂಡ ಕಲ್ಪಿಸಲಾಗಿತ್ತು.
Advertisement
ಸದಾಚಾರ ಮೈಗೂಡಿಸಿಕೊಳ್ಳಿ: ಶೃಂಗೇರಿ ಶ್ರೀ ಉದ್ಘಾಟನ ಸಮಾರಂಭಕ್ಕೂ ಮುನ್ನ ಶೃಂಗೇರಿ ಶ್ರೀ ಶಾರದಾ ಪೀಠದ ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಎಲ್ಲ ವೇದಗಳನ್ನು ಅಧ್ಯಯನ ಮಾಡಿದರೂ, ಸದಾಚಾರಗಳನ್ನು ಮೈಗೂಡಿಸಿಕೊಳ್ಳದಿದ್ದರೆ ಏನೂ ಪ್ರಯೋಜನವಿಲ್ಲ. ಲೋಕದ ಕ್ಷೇಮಕ್ಕಾಗಿ ಗಾಯತ್ರಿ ಮಹಾಯಜ್ಞವನ್ನು ನೆರವೇರಿಸಲಾಗಿದೆ. ಒಳ್ಳೆಯ ಕೆಲಸ – ಕಾರ್ಯಗಳು ಯಾರಿಂದಲಾದರೂ ನಡೆಯುತ್ತಿದ್ದರೆ ಅದನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ಎಲ್ಲರ ಕ್ಷೇಮ ಬಯಸುವುದರಿಂದ ಸಮಾಜದ ಕ್ಷೇಮವೂ ಒಲಿಯುತ್ತದೆ ಎಂದವರು ಹೇಳಿದರು.
ಜಿಲ್ಲೆಯ ಪ್ರಥಮ ಸಮ್ಮೇಳನಧ್ವಜಪುರ ಖ್ಯಾತಿಯ ಕೋಟೇಶ್ವರದಲ್ಲಿ 10ನೇ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ ನಡೆಯುತ್ತಿದ್ದು, 2016ರಲ್ಲಿ ಬೆಳಗಾವಿಯಲ್ಲಿ 9ನೇ ಸಮ್ಮೇಳನ ಆಯೋಜನೆಗೊಂಡಿದ್ದರೆ, ಅದಕ್ಕೂ ಮೊದಲು 7 ಬಾರಿ ಬೆಂಗಳೂರಿನಲ್ಲಿ ಹಾಗೂ 1 ಸಲ ಹುಬ್ಬಳ್ಳಿಯಲ್ಲಿ ಈ ಮಹಾಸಮ್ಮೇಳನ ನಡೆದಿತ್ತು. ಇದು ಉಡುಪಿ ಜಿಲ್ಲೆ ಮಾತ್ರವಲ್ಲದೆ ಕರಾವಳಿಯಲ್ಲಿ ನಡೆಯುತ್ತಿರುವ ಮೊದಲ ಮಹಾ ಸಮ್ಮೇಳನ ಎನ್ನುವುದು ಇಲ್ಲಿನ ವೈಶಿಷ್ಟ್ಯ.
ಅಖೀಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ವಿವಿಧ ವಿಚಾರ ಗೋಷ್ಠಿಗಳು, ಚಿಂತನ – ಮಂಥನ ನಡೆಯಿತು. ಶನಿವಾರ ಮಧ್ಯಾಹ್ನ ಬ್ರಾಹ್ಮಣ್ಯ ಆಚರಣೆ – ರಕ್ಷಣೆ – ಸಂಘಟನೆ ವಿಚಾರವಾಗಿ ಧಾರ್ಮಿಕ ವಿಚಾರ ಗೋಷ್ಠಿ ನಡೆಯಿತು.
ಬಳಿಕ ಬ್ರಾಹ್ಮಣ ಸಮಾಜ ಸಂಘಟನೆ – ಸವಾಲುಗಳು, ಮಾಧ್ಯಮ, ಸಂಘ-ಸಂಸ್ಥೆಗಳ ಪಾತ್ರದ ಕುರಿತು ವಿಚಾರಗೋಷ್ಠಿ ನಡೆಯಿತು.
ಬಳಿಕ ಗುರುವಂದನೆ, ಸಂಜೆ ಯುವ ಜನರಿಗೆ ಸಂದೇಶ, ಬಳಿಕ ಚಿಂತನ ಮಂಥನ, ಸಂಜೆ 7 ಗಂಟೆಯಿಂದ ಆಳ್ವಾಸ್ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ಮನರಂಜಿಸಿತು.