ಉಳ್ಳಾಲ: ಕೋಟೆಕಾರು ಸಹಕಾರಿ ಬ್ಯಾಂಕ್‌ನ ತಲಪಾಡಿ ಕೆ.ಸಿ.ರೋಡ್ ಶಾಖೆಯಲ್ಲಿ ಜೂನ್ 23 ರ ಹಾಡಹಗಲೇ ದರೋಡೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಪಿಲಾರ್ ಮೂಲದ ಇಬ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಓರ್ವ ಆರೋಪಿ ಬ್ಯಾಂಕ್ ನ ನಿರ್ದೇಶಕಿಯ ಪತಿ,ಇನ್ನೋರ್ವ ನೆರೆಮನೆಯ ಯುವಕ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಸಿಬಂದಿಗೆ ಚೂರಿ ತೋರಿಸಿ ಶೌಚಾಲಯದಲ್ಲಿ ಕೂಡಿ ಹಾಕಿ 3.5 ಕೋಟಿ ರೂ. ಮೌಲ್ಯದ ಚಿನ್ನಾಭರಣ ವನ್ನು ಜೂನ್ 23 ರ ಶುಕ್ರವಾರ ಮಧ್ಯಾಹ್ನ ದರೋಡೆ ನಡೆಸಿ ಚಿನ್ನಾಭರಣ ಗೋಣಿ ಚೀಲದಲ್ಲಿ ತುಂಬಿಸಿ ಪರಾರಿಯಾಗುವ ಹಂತದಲ್ಲಿ ಬ್ಯಾಂಕ್‌ನ ಸಿಬಂದಿಯ ಕಲ್ಲಿನೇಟಿಗೆ ತತ್ತರಿಸಿದ ದರೋಡೆ ಕೋರರು ಚಿನ್ನಾಭರಣ ಬಿಟ್ಟು ಪರಾರಿಯಾಗಿದ್ದರು.
ಜಾಕೆಟ್ ಮತ್ತು ಹೆಲ್ಮೆಟ್ ಧರಿಸಿದ್ದ ಇಬ್ಬರು ಆಗಂತುಕರು ಬಂದಿದ್ದು, ದಾರಿಯಲ್ಲಿ ನಿಂತಿದ್ದ ರಾತ್ರಿ ವೇಳೆ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುವ ಉಮೇಶ್ ಅವರ ಕುತ್ತಿಗೆ ಹಿಡಿದು ತಳ್ಳಿಕೊಂಡು ಬ್ಯಾಂಕ್ ಒಳಗೆ ಬಂದರು. ಬಳಿಕ ಷಟರ್ ಬಾಗಿಲು ಎಳೆದು ಬ್ಯಾಂಕ್‌ನ ಪ್ರಬಂಧಕಿ ಮನೋಹರಿ, ಸಿಬಂದಿ ಸುಧೀರ್ ಮತ್ತು ರಾಮಚಂದ್ರ ಅವರಿಗೆ ಚೂರಿ ತೋರಿಸಿ ಬ್ಯಾಂಕ್‌ನೊಳಗಿರುವ ಶೌಚಾಲಯದಲ್ಲಿ ಕೂಡಿ ಹಾಕಿದ್ದರು.
ಪರಾರಿಯಾಗುವ ಯತ್ನದಲ್ಲಿದ್ದವರ ಮೇಲೆ ಬಾಗಿಲು ಒಡೆದು ಹೊರಬಂದ ರಾಮಚಂದ್ರ ದೊಡ್ಡ ಜಲ್ಲಿಕಲ್ಲೊಂ ದನ್ನು ಎಸೆದರು. ಕಲ್ಲಿನೇಟಿಗೆ ತತ್ತರಿಸಿದ ದರೋಡೆ ಕೋರರ ಕೈಯಲ್ಲಿದ್ದ ಬಂಗಾರ ತುಂಬಿದ ಗೋಣಿ ಚೀಲ ಕೆಳಗೆ ಬಿದ್ದಿತು. ಇನ್ನು ನಿಂತರೆ ಅಪಾಯ ಎಂದರಿತ ದರೋಡೆಕೋರರು
ಪರಾರಿಯಾಗಿದ್ದರು.