Advertisement

ಡಿಜಿಟಲ್‌ ಇಂಡಿಯಾದತ್ತ ಕೋಟೆ ಗ್ರಾ.ಪಂ.

11:10 AM Sep 17, 2018 | Team Udayavani |

ಕಟಪಾಡಿ: ಎಲ್ಲವೂ ಅಂದು ಕೊಂಡಂತೆ ನಡೆದರೆ ಕೆಲವೇ ತಿಂಗಳುಗಳಲ್ಲಿ ಉಡುಪಿಯ ಕಾಪು ತಾಲೂಕಿನ ಕೋಟೆ ಗ್ರಾ.ಪಂ. ವ್ಯಾಪ್ತಿಯ ಸಮಗ್ರ ಮಾಹಿತಿ ಸಂಪೂರ್ಣ ಡಿಜಿಟಲ್‌ ಆಗಲಿದೆ. ಇದಕ್ಕಾಗಿ ಸರ್ವೇ ಸೆ. 17ರಿಂದ ಆರಂಭವಾಗುತ್ತಿದೆ.

Advertisement

ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ “ಗ್ರಾಮೀಣ ಸಮಗ್ರ ಮಾಹಿತಿ’ ಯೋಜನೆಯ ಅನುಷ್ಠಾನಕ್ಕೆ ಕೋಟೆ ಗ್ರಾ.ಪಂ. ಆಯ್ಕೆಯಾಗಿರುವುದು ಇದಕ್ಕೆ ಕಾರಣ. ಸರಕಾರದ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಉದ್ದೇಶದ ಈ ಯೋಜನೆಗೆ ರಾಜ್ಯ ಕರಾವಳಿಯಲ್ಲಿ ಆಯ್ಕೆಯಾಗಿರುವ ಏಕೈಕ ಗ್ರಾ.ಪಂ. ಕೋಟೆ.

ಯೋಜನೆ ಸಂಪೂರ್ಣವಾದಾಗ ಮಟ್ಟು ಮತ್ತು ಕೋಟೆ ಎಂಬ ಎರಡು ಕಂದಾಯ ಗ್ರಾಮಗಳನ್ನೊಳಗೊಂಡ ಈ ಗ್ರಾ.ಪಂ.ನಲ್ಲಿ ಗ್ರಾಮದ ಸಮಗ್ರ ಚಿತ್ರಣ ಡಿಜಿಟಲ್‌ ಸ್ವರೂಪದಲ್ಲಿ ಲಭ್ಯವಾಗುತ್ತದೆ.

ಗ್ರಾಮ ಮಾಹಿತಿ ವ್ಯವಸ್ಥೆ
ಪಂ.ರಾಜ್‌ ಇಲಾಖೆಯ ಬಹುತೇಕ ಯೋಜನೆ ಮತ್ತು ಕಾಮಗಾರಿಗಳಿಗೆ ಜನ ಗಣತಿ ಮತ್ತು ವಿವಿಧ ಇಲಾಖೆಗಳ ಅಂಕಿ ಅಂಶ ಆಧರಿಸಿ ಕ್ರಿಯಾ ಯೋಜನೆ ರೂಪಿಸಲಾಗುತ್ತಿತ್ತು. ಆದರೆ ಗ್ರಾಮದ ವಾಸ್ತವ ಚಿತ್ರಣದ ಕೊರತೆ ಕಾಡುತ್ತಿತ್ತು. ಈಗ ಈ ಸಮಸ್ಯೆಗೆ ಗ್ರಾಮ ಮಾಹಿತಿ ವ್ಯವಸ್ಥೆ (ವಿಲೇಜ್‌ ಇನ್‌ಫಾರ್ಮೇಶನ್‌ ಸಿಸ್ಟಂ) ಮೂಲಕ ಪರಿಹಾರ ಪಡೆಯಲಾಗುತ್ತಿದೆ.

ಕರಾವಳಿಯಲ್ಲಿ  ಕೋಟೆ ಪಂಚಾಯತ್‌
ಕೇಂದ್ರದ ಈ ಯೋಜನೆಯನ್ನು ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯು ಉಡುಪಿ ಜಿ.ಪಂ. ಸಹಕಾರದೊಂದಿಗೆ ಅನುಷ್ಠಾನಗೊಳಿಸುತ್ತಿದೆ. ರಾಜ್ಯದಲ್ಲಿ ವಿಭಿನ್ನ ನೈಸರ್ಗಿಕ ನೆಲೆಗಳ ನಾಲ್ಕು ಗ್ರಾಮಗಳನ್ನು ಆಯ್ದು ಕೊಳ್ಳಲಾಗಿದೆ.

Advertisement

ಏನೇನು ದಾಖಲಾಗಲಿವೆ?
ಆಯ್ಕೆಯಾದ ಗ್ರಾಮದ ಮನೆ, ಇತರ ಕಟ್ಟಡಗಳು, ಕಚೇರಿ, ಜಲ ಮೂಲಗಳು, ರಸ್ತೆ, ವಿದ್ಯುತ್‌ ಕಂಬ, ಕುಟುಂಬಗಳ ವಾರ್ಷಿಕ ಆದಾಯ, ಸಾಕ್ಷರತೆ, ಆಧಾರ್‌ ವಿವರ, ಮನೆ ನಂಬರ್‌, ಜಮೀನು ಮಾಹಿತಿ, ಜಾತಿ, ಆದಾಯ, ಉದ್ಯೋಗ, ಕೃಷಿ ಮತ್ತು ವಾಣಿಜ್ಯ ವಾಹನಗಳು, ಜಾನುವಾರು, ಮೊಬೈಲ್‌, ಭೂರಹಿತರು, ಭೂ ಹಿಡುವಳಿದಾರರ ಮಾಹಿತಿ, ಗಟಾರ, ಶೌಚಾಲಯ, ನೀರಿನ ಟ್ಯಾಂಕ್‌ಗಳು, ಶಿಥಿಲ ಕಟ್ಟಡಗಳು -ಹೀಗೆ ಸಮಗ್ರ ಮಾಹಿತಿ ಡಿಜಿಟಲ್‌ ರೂಪದಲ್ಲಿ ಸಿಗಲಿದೆ.

ಪ್ರಯೋಜನ ಏನು?
ಗ್ರಾ.ಪಂ.ಗೆ ಯೋಜನೆಗಳ ನೇರ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಜನರಿಗೆ ಮತ್ತು ಸರಕಾರಕ್ಕೆ ಆನ್‌ಲೈನ್‌ನಲ್ಲಿ ಸುಲಭವಾಗಿ ದಾಖಲೆಗಳು ಲಭ್ಯವಾಗುತ್ತವೆ. ಕಂದಾಯ ಇಲಾಖೆಯ ದಶಕಗಳಷ್ಟು ಹಳೆಯ ನಕ್ಷೆಗಳು ಮಾರ್ಪಾಡುಗೊಂಡು ಸಮಗ್ರ ಮಾಹಿತಿ ಡಿಜಿಟಲ್‌ ಆಗಿ ದಾಖಲಾಗುತ್ತವೆ. ಹಳೆಯ ಕಂದಾಯ ದಾಖಲೆಗಳಿಗೆ ಹೊಸ ಜೀವ ತುಂಬಲಾಗುತ್ತದೆ.

ಡಿಸೆಂಬರ್‌ ಒಳಗೆ ಕೇಂದ್ರಕ್ಕೆ ವರದಿ ಸಲ್ಲಿಕೆ
ಹಿಮಾಚಲ ಪ್ರದೇಶ, ಉತ್ತರಾಂಚಲ, ಪಂಜಾಬ್‌, ಹರಿಯಾಣ, ಆಂಧ್ರಪ್ರದೇಶ, ಕರ್ನಾಟಕ ಸಹಿತ 10 ರಾಜ್ಯಗಳ ಕೆಲವು ಗ್ರಾ.ಪಂ.ಗಳನ್ನು ಆಯ್ದುಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯದಲ್ಲಿ ಆಯ್ಕೆಯಾಗಿರುವ 4 ಗ್ರಾ.ಪಂ.ಗಳಲ್ಲಿ 2ನೇ ಹಂತದಲ್ಲಿ ಕರಾವಳಿ ಭಾಗದ ಕೋಟೆ ಗ್ರಾ.ಪಂ. ಸೇರಿದೆ. ಆರು ಮಂದಿ ಸಿಬಂದಿಯನ್ನು ಬಳಸಿಕೊಂಡು 4ರಿಂದ 6 ವಾರಗಳ ಸರ್ವೇ ಮೂಲಕ ಯೋಜನೆ ಸಿದ್ಧಪಡಿಸಿ, ಉಪಗ್ರಹ ಮಾಹಿತಿ ಕಲೆ ಹಾಕಿ ದಾಖಲಿಸಲಾಗುತ್ತದೆ. ಡಿಸೆಂಬರ್‌ ಒಳಗಾಗಿ ಮೂರು ಹಂತಗಳಲ್ಲಿ ಕರಡು ಪ್ರತಿ ಪ್ರದರ್ಶನ ನಡೆಸಿ, ತಿದ್ದುಪಡಿಗಳಿಗೆ ಅವಕಾಶ ನೀಡಿ, ಅಂತಿಮ ವರದಿಯನ್ನು ಸಲ್ಲಿಸಲಾಗುತ್ತದೆ. ಅನಂತರ ಒಂದು ಕ್ಲಿಕ್‌ ಮೂಲಕ ಸಮಗ್ರ ಮಾಹಿತಿ ಲಭ್ಯವಾಗಲಿದೆ.
– ಎಚ್‌. ಹೇಮಂತ್‌, ಪ್ರಧಾನ ವೈಜ್ಞಾನಿಕ ಅಧಿಕಾರಿ, ಬೆಂಗಳೂರು
(ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ)

ಯೋಜನೆ ಅನುಷ್ಠಾನಕ್ಕೆ ಸುಲಭ
ಸರ್ವೇ ಕಾರ್ಯ ಮುಗಿದ ಅನಂತರ ಗ್ರಾಮಸ್ಥರ ವಿವರಗಳು, ಸ್ಥಿತಿಗತಿಗಳು ಕ್ಷಣ ಮಾತ್ರದಲ್ಲಿ ಲಭ್ಯವಾಗುವುದರಿಂದ ಸರಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸಿ, ಕಾರ್ಯಗತಗೊಳಿಸಲು ಸುಲಭವಾಗಲಿದೆ.
– ಗಣೇಶ್‌ ಕುಮಾರ್‌ ಮಟ್ಟು , ಉಪಾಧ್ಯಕ್ಷ, ಕೋಟೆ ಗ್ರಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next