Advertisement

ತಡೆಗೋಡೆ ಎತ್ತರಿಸಿದಕ್ಕೆ ವಿರೋಧ: ತೆರವಿಗೆ  ನಿರ್ಣಯ ಕೈಗೊಳ್ಳಲು ಪಟ್ಟ

06:40 AM Sep 29, 2018 | Team Udayavani |

ಕೋಟ: ಕೋಟ ಕಾರಂತ ಕಲಾಭವನದಲ್ಲಿ ಸೆ.28ರಂದು ಕೋಟತಟ್ಟು ಗ್ರಾ.ಪಂ. 2017-18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು.

Advertisement

ಕೋಟ-ಪಡುಕರೆ ಕಾಲೇಜಿನ ಸಮೀಪ ಕಾರ್ಯನಿರ್ವಹಿಸುತ್ತಿರುವ ಓಶಿಯನ್‌ ಪ್ರೊಡಕ್ಟ್ ಕಾರ್ಖಾನೆಯವರು ರಸ್ತೆಯ ತಿರುವಿನಲ್ಲಿ ಎತ್ತರದ ತಡೆಗೋಡೆ ನಿರ್ಮಿಸಿದ್ದು ಇದರಿಂದ ಪಾರಂಪಳ್ಳಿ ಕಡೆಗೆ ಸಂಚರಿಸುವವರಿಗೆ ಎದುರಿನಿಂದ ಬರುವ ವಾಹನಗಳನ್ನು ಗುರುತಿಸಲು ಅಸಾಧ್ಯವಾಗುತ್ತಿದೆ.ಈ ಕುರಿತು ಹಲವು ಬಾರಿ ಗ್ರಾ.ಪಂ.ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ತತ್‌ಕ್ಷಣ ಆ  ತಡೆಗೋಡೆಯ ಎತ್ತರವನ್ನು ತಗ್ಗಿಸಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಸ್ಥಳೀಯ ಮುಖಂಡ ವಿವೇಕ ಸುವರ್ಣ ಅವರ ನೇತೃತ್ವದಲ್ಲಿ ಆಗ್ರಹಿಸಿದರು.

ಈ ಸಂದರ್ಭ  ಗ್ರಾ.ಪಂ. ಕಾರ್ಯದರ್ಶಿ ಮೀರಾ ಹಾಗೂ ಗ್ರಾ.ಪಂ. ಅಧ್ಯಕ್ಷ ರಘು ತಿಂಗಳಾಯ ಪಂಚಾಯತ್‌ ಕೈಗೊಂಡ ಕ್ರಮದ ಕುರಿತು ತಿಳಿಸಿದರು ಹಾಗೂ ಸಂಜೆ ಈ ಸ್ಥಳಕ್ಕೆ ಪ್ರಾದೇಶಿಕ ಸಾರಿಗೆ ಆಯುಕ್ತರು ಹಾಗೂ ಮೀನು ಗಾರಿಕೆ ಇಲಾಖೆಯವರು ಭೇಟಿ ನೀಡಿ ಪರಿಶೀಲಿಸಲಿದ್ದಾರೆ.  ಅನಂತರ ಈ ಕುರಿತು ಸೂಕ್ತ  ನಿರ್ಣಯ ಕೈಗೊಳ್ಳಲಾಗುವುದು ಎಂದರು. 

ಆದರೆ ಗ್ರಾಮಸ್ಥರು ತೃಪ್ತರಾಗದೆ ತೆರವಿಗೆ ನಿರ್ಣಯ ಕೈಗೊಳ್ಳಬೇಕು, ಅಧಿಕಾರಿಗಳು ಬಂದು ಪರಿಶೀಲಿಸಿ ತೀರ್ಮಾನ ಕೈಗೊಳ್ಳುವ ತನಕ  ಸಭೆ ಮುಂದುವರಿಸಬೇಕು  ಎಂದು ಪಟ್ಟು ಹಿಡಿದರು. ಅನಂತರ ಈ ಕುರಿತು ನಿರ್ಣಯವನ್ನು  ಬಾಕಿ ಉಳಿಸಿಕೊಂಡು ಸಭೆ ಮುಂದುವರಿಸಲಾಯಿತು. ಅನಂತರ ಸಂಜೆ ಆರ್‌ಟಿಒ ಉಪಆಯುಕ್ತ ವರ್ಣೇಕರ್‌ ಅವರು ಸ್ಥಳ ಪರಿಶೀಲಿಸಿ ಈ ಕುರಿತು ವರದಿಯನ್ನು ಜಿಲ್ಲಾಧಿಕಾರಿಗೆ ನೀಡಲಾಗುವುದು. ಈ ಸಭೆಯಲ್ಲಿ ಗ್ರಾಮಸ್ತರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿ ಮನವಿಯನ್ನು ತಿಳಿಸಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭರವಸೆ ನೀಡಿದರು. 

ಮಕ್ಕಳ ತಜ್ಞರು ಲಭ್ಯ
ಸಭೆಯ ಆರಂಭದಲ್ಲಿ ಇಲಾಖೆ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ  ಕೋಟ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ| ವಿಶ್ವನಾಥ, ಇದೀಗ ನಮ್ಮ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ನೇಮಕವಾಗಿದೆ.  ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಇವರನ್ನು ಸಂಪರ್ಕಿಸಬಹುದು ಮತ್ತು ಅನೇಕ ಆಧುನಿಕ ಸೌಕರ್ಯಗಳು ಲಭ್ಯವಿದ್ದು ರೋಗಿಗಳು ಸದುಪಯೋಗಪಡೆದುಕೊಳ್ಳ ಬಹುದು ಎಂದರು.

Advertisement

ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ತ್ರೀರೋಗ ತಜ್ಞರನ್ನು ನೇಮಕ ಮಾಡುವಂತೆ ಗ್ರಾಮಸ್ಥರಾರ ರಾಮಣ್ಣ ಪೂಜಾರಿ ಹಂದಟ್ಟು , ದಿನೇಶ್‌ ಗಾಣಿಗ ಮನವಿ ಮಾಡಿದರು. ಅರಣ್ಯ ಇಲಾಖೆಯ ಅಧಿಕಾರಿ  ಜೀವನ್‌ದಾಸ್‌ ಶೆಟ್ಟಿ, ಮೆಸ್ಕಾಂನ ಗುರುಪ್ರಸಾದ್‌, ಕಂದಾಯ ಇಲಾಖೆಯ ಚಲುವರಾಜ್‌ ಮುಂತಾದವರು ತಮ್ಮ ಇಲಾಖೆ ಕುರಿತು ಮಾಹಿತಿ ನೀಡಿದರು.

ಪಶು ಇಲಾಖೆಯ ಅರುಣ್‌ ಕುಮಾರ್‌ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಿ.ಪಂ.ಸದಸ್ಯ ರಾಘವೇಂದ್ರ ಕಾಂಚನ್‌, ಪಿ.ಡಿ.ಒ. ಸುಜಾತಾ, ಮಾಜಿ ಅಧ್ಯಕ್ಷ ಪ್ರಮೋದ್‌ ಹಂದೆ, ಉಪಾಧ್ಯಕ್ಷ ಲೋಕೇಶ್‌ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ದಾರಿದೀಪಕ್ಕೆ ಬದಲಿ ವ್ಯವಸ್ಥೆ 
ಕೋಟತಟ್ಟು ಗ್ರಾ.ಪಂ.ನಲ್ಲಿ ಈ ಹಿಂದೆ ಸಂಪೂರ್ಣ ಸೋಲಾರ್‌ ದಾರಿದೀಪವಿತ್ತು. ಆದರೆ ಇದೀಗ  ಅದು ನಿರ್ವಹಣೆ ಇಲ್ಲದೆ ಸೊರಗುತ್ತಿದೆ.  ಆದ್ದರಿಂದ ಇದಕ್ಕೆ ಪೂರಕ ವ್ಯವಸ್ಥೆ ಮಾಡುವಂತೆ ರಂಜಿತ್‌ ಬಾರಿಕೆರೆ  ತಿಳಿಸಿದರು. ಸಮಸ್ಯೆಯ ಕುರಿತು ಈಗಾಗಲೇ ಗಮನಹರಿಸಿದ್ದು ಸೋಲಾರ್‌ ದೀಪ ತೆಗೆದು ಎಲ್‌.ಇ.ಡಿ. ಬಲ್ಬ್ಗಳನ್ನು ಅಳವಡಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. 

ರೈತ ಸಂಪರ್ಕ ಕೇಂದ್ರದಲ್ಲಿ ಬಾಡಿಗೆ ಸೇವಾ ಕೇಂದ್ರ
ಕೋಟ ರೈತ ಸಂಪರ್ಕ ಕೇಂದ್ರದಲ್ಲಿ  ಇದೀಗ ಕೃಷಿ ಯಂತ್ರೋಪಕರಣಗಳ ಬಾಡಿಗೆ ಸೇವಾ ಕೇಂದ್ರದ ಕಚೇರಿ ಆರಂಭ ವಾಗಿದ್ದು, ರೈತರಿಗೆ ಯಾವುದೇ ಕೃಷಿ ಯಂತ್ರಗಳು ಬಾಡಿಗೆಗೆ ಬೇಕಾದಲ್ಲಿ ಸಂಪರ್ಕಿಸಬಹುದು ಎಂದು ಚಂದ್ರಶೇಖರ್‌ ಉಪಾಧ್ಯ ತಿಳಿಸಿದರು.

ಅಕ್ಟೋಬರ್‌ನಲ್ಲಿ  ಎಸ್‌.ಎರ್‌ಎಲ್‌ಎಂ ಘಟಕ 
ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚುತ್ತಿದೆ. ಹೆದ್ದಾರಿ ಬದಿಯಲ್ಲಿ ಅಕ್ರಮವಾಗಿ ಕಸ ಎಸೆಯಲಾಗುತ್ತಿದೆ. ಆದ್ದರಿಂದ ಈ ಕುರಿತು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ತಿಳಿಸಿದರು. ಸಮಸ್ಯೆಯ ಪರಿಹಾರಕ್ಕಾಗಿ ಈಗಾಗಲೇ ಘನ-ದ್ರವ ತ್ಯಾಜ್ಯ ಸಂಪನ್ಮೂಲ ಸಂಸ್ಕೃರಣಾ ಘಟಕ ಸ್ಥಾಪನೆಗೆ ಮುಂದಾಗಿದ್ದು ಅಕ್ಟೋಬರ್‌ನಲ್ಲಿ ಅಳವಡಿಸಿಕೊಳ್ಳಲಾಗುವುದು. ಆಗ ಗ್ರಾಮಸ್ಥರು ನಿಗದಿತ ರೀತಿಯಲ್ಲಿ ಒಣಕಸಗಳನ್ನು ನೀಡಿ ಸಹಕಾರ ನೀಡಬೇಕು ಎಂದು ಅಧ್ಯಕ್ಷರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next