Advertisement

Kota: ಜಗತ್ತಿಗೆ ಅನ್ನ, ಅಕ್ಷರ, ಆರ್ಥಿಕ ಜ್ಞಾನ ನೀಡಿದ ಉಡುಪಿ: ರಾಜ್ಯಪಾಲ ವಿಜಯಶಂಕರ್‌

12:20 AM Nov 12, 2024 | Team Udayavani |

ಕೋಟ: ಬ್ಯಾಂಕಿಂಗ್‌ ಕ್ಷೇತ್ರದ ಮೂಲಕ ಜಗತ್ತಿಗೆ ಅರ್ಥಿಕ ಜ್ಞಾನವನ್ನು, ಹೆಸರಾಂತ ಶಿಕ್ಷಣ ಸಂಸ್ಥೆಗಳು, ಗುಣಮಟ್ಟದ ವಿದ್ಯೆಯ ಮೂಲಕ ಅಕ್ಷರ ಜ್ಞಾನವನ್ನು ಹಾಗೂ ಪ್ರಪಂಚದ ಎಲ್ಲ ಕಡೆಗಳಲ್ಲೂ ಹೊಟೇಲ್‌ ಉದ್ಯಮ ನಡೆಸುವ ಮೂಲಕ ಅಲ್ಲಿನ ಜನರಿಗೆ ಅನ್ನವನ್ನು ಜತೆಗೆ ಧಾರ್ಮಿಕ ಕ್ಷೇತ್ರಗಳ ಮೂಲಕ ನಿತ್ಯ ಅನ್ನದಾಸೋಹವನ್ನು ನೀಡುತ್ತಿರುವ ಕೀರ್ತಿ ಉಡುಪಿ ಜಿಲ್ಲೆಗೆ ಸಲ್ಲುತ್ತದೆ. ಹೀಗಾಗಿ ಈ ಮಣ್ಣು ಜಗತ್ತಿಗೆ ಅನ್ನ, ಅಕ್ಷರ, ಆರ್ಥಿಕ ಜ್ಞಾನವನ್ನು ನೀಡಿದ ನಾಡು ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್‌. ವಿಜಯಶಂಕರ್‌ ತಿಳಿಸಿದರು.

Advertisement

ಕೋಟ ಡಾ| ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ರವಿವಾರ ಕೋಟತಟ್ಟು ಗ್ರಾ.ಪಂ., ಕೋಟ ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕಾರಂತ ಟ್ರಸ್ಟ್‌ ಆಶ್ರಯದಲ್ಲಿ ಜರಗಿದ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತಿ, ಉಪನ್ಯಾಸಕ ಪ್ರೊ| ಕೃಷ್ಣೇಗೌಡ ಅವರಿಗೆ ಕಾರಂತ ಹುಟ್ಟೂರು ಪ್ರಶಸ್ತಿ ನೀಡಿ ಮಾತನಾಡಿದರು.

ಯಾರಿಗೂ ಯಾವ ಅಧಿಕಾರವೂ ಶಾಶ್ವತವಲ್ಲ. ಆದರೆ ಕಾರಂತರು ಜ್ಞಾನದ ಮೂಲಕ ಸಂಪಾದಿಸಿದ ಪೀಠ ಎಂದಿಗೂ ಶಾಶ್ವತವಾದದ್ದು. ನೇರ ನುಡಿಯ ಅಪ್ಪಟ ಪರಿಸರವಾದಿಯಾಗಿದ್ದ ಶಿವರಾಮ ಕಾರಂತರನ್ನು ಇಡೀ ಲೋಕವೇ ಗೌರವಿಸುತ್ತಿದೆ. ಕಾರಂತರ ಜೀವಂತಿಕೆ ಯನ್ನು ಉಳಿಸಿಕೊಂಡು ಬಂದ ಕೋಟದ ಇಂಥ ಕಾರ್ಯಕ್ರಮಗಳು ಇತರ ಗ್ರಾಮಗಳಿಗೂ ಮಾದರಿ ಎಂದರು.

ಕಾರಂತರಂತೆ ಬದುಕಲು ಅಸಾಧ್ಯ
ಸಾಹಿತಿ, ವಾಗ್ಮಿ ಮೈಸೂರಿನ ಪ್ರೊ| ಕೃಷ್ಣೇಗೌಡರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಕಾರಂತರಂತೆ ಎಲ್ಲ ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ಬರೆಯಲು ಹಾಗೂ ಅವರಂತೆ ಬದುಕಲು ಪ್ರಪಂಚದ ಯಾರಿಗೂ ಸಾಧ್ಯವಿಲ್ಲ. ಈ ಪ್ರಶಸ್ತಿ ನನ್ನ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಶಾಸಕ ಎ.ಕಿರಣ್‌ ಕುಮಾರ್‌ ಕೊಡ್ಗಿ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಗಾಂಧೀ ಗ್ರಾಮ ಪ್ರಶಸ್ತಿ ಪ್ರದಾನ
ಈ ಸಂದರ್ಭ ಉಡುಪಿ ಮತ್ತು ದ.ಕ. ಜಿಲ್ಲೆಯ ಆಯ್ದ ಗ್ರಾ.ಪಂ.ಗಳಿಗೆ ಗಾಂಧೀ ಗ್ರಾಮ ಪುರಸ್ಕಾರ ಮತ್ತು ಸಮಗ್ರ ಆಡಳಿತ ಮತ್ತು ಘನತ್ಯಾಜ್ಯ ವಿಲೇವಾರಿಯಲ್ಲಿ ತೋರಿದ ಸಾಧನೆಗೆ ವಿಶೇಷ ಪುರಸ್ಕಾರವನ್ನು ನೀಡಲಾಯಿತು. ರಾಜ್ಯಪಾಲ ಸಿ.ಎಚ್‌.ವಿಜಯ ಶಂಕರ್‌, ಕೋಟದ ಉದ್ಯಮಿ ಆನಂದ ಸಿ.ಕುಂದರ್‌ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕ ನರೇಂದ್ರ ಕುಮಾರ್‌ ಕೋಟ, ಕಾರಂತ ಥೀಂ ಪಾರ್ಕ್‌ನ ಮೇಲ್ವಿಚಾರಕ ಪ್ರಶಾಂತ್‌ ಅವರನ್ನು ಗೌರವಿಸಲಾಯಿತು. ಶಾಸಕ ಗುರ್ಮೆ ಸುರೇಶ ಶೆಟ್ಟಿ, ಕುಂದಾಪುರ ಸಹಾಯಕ ಉಪವಿಭಾಗಾಧಿಕಾರಿ ಮಹೇಶ್ಚಂದ್ರ, ಕೋಟತಟ್ಟು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್‌ ಮೊದಲಾದವರಿದ್ದರು.

ಡಾ| ಶಿವರಾಮ ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್‌ ಸ್ವಾಗತಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹರೀಶ್‌ ಕುಮಾರ್‌ ಶೆಟ್ಟಿ ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯಿತಿಗಳ ಪಟ್ಟಿ ವಾಚಿಸಿದರು. ಪ್ರಶಸ್ತಿ ಕುರಿತು ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಯು.ಎಸ್‌. ಶೆಣೈ ಮಾಹಿತಿ ನೀಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್‌ ಕೋಟ, ಜತೆ ಕಾರ್ಯದರ್ಶಿ ಸತೀಶ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ಗ್ರಾ.ಪಂ.ಅಧ್ಯಕ್ಷ ಕೆ.ಸತೀಶ ಕುಂದರ್‌ ವಂದಿಸಿದರು.

ರಾಜಭವನ ಮದ್ಯ, ಮಾಂಸ ಮುಕ್ತ
ಮೇಘಾಲಯದ ಮಣ್ಣು, ಸಂಸ್ಕೃತಿ ಎಲ್ಲವೂ ವಿಶಿಷ್ಟವಾಗಿದೆ. ಹೀಗಾಗಿ ಮೇಘಾಲಯದ ರಾಜಭವನ ನನಗೆ ದೇವಸ್ಥಾನ ಇದ್ದಂತೆ. ಆದ್ದರಿಂದ ಅಧಿಕಾರ ವಹಿಸಿಕೊಂಡ ತತ್‌ಕ್ಷಣ ರಾಜಭವನವನ್ನು ಮದ್ಯ, ಮಾಂಸ ಮುಕ್ತಗೊಳಿಸಿದ್ದೇನೆ ಎಂದು ಸಿ.ಎಚ್‌ ವಿಜಯಶಂಕರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next