ಕೋಟ: ನಾನು ಮುಜರಾಯಿ ಸಚಿವನಾಗಿದ್ದಾಗ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಹಾರಾಡಿ ರಾಮ ಗಾಣಿಗ ಅವರ ಹೆಸರಲ್ಲಿ ಮುಜರಾಯಿ ಇಲಾಖೆಯಿಂದ ಮಂದಾರ್ತಿ ದೇವಾಲಯದ ಮೂಲಕ ಕಲಾವಿದನೋರ್ವನಿಗೆ ಒಂದು ಲಕ್ಷ ರೂ. ನಗದು ಹಾಗೂ ಪ್ರಶಸ್ತಿ ನೀಡುವಂತೆ ಆದೇಶ ಮಾಡಿದ್ದೆ. ಆದರೆ ಇದುವರೆಗೆ ಆ ಪ್ರಶಸ್ತಿ ಪ್ರದಾನ ನಡೆದಿಲ್ಲ. ಆದಷ್ಟು ಬೇಗ ಈ ಪ್ರಶಸ್ತಿಯನ್ನು ನೀಡಬೇಕು ಎಂದು ಮಾಜಿ ಮುಜರಾಯಿ ಸಚಿವ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅವರು ರವಿವಾರ ಕೋಟದಲ್ಲಿ ಜರಗಿದ ಬಡಗುತಿಟ್ಟು ಯಕ್ಷಗಾನದ ದಂತಕಥೆ ಹಾರಾಡಿ ಕುಷ್ಟ ಗಾಣಿಗ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ಅಂಬಾತನಯ ಮುದ್ರಾಡಿ ಸಂಸ್ಮರಣೆ ಭಾಷಣ ಮಾಡಿದರು. ಸಾಲಿಗ್ರಾಮ ಮಕ್ಕಳ ಮೇಳದ ಸಂಚಾಲಕ ಎಚ್. ಶ್ರೀಧರ ಹಂದೆ ಅಧ್ಯಕ್ಷತೆ ವಹಿಸಿದ್ದರು. ಎಸ್.ವಿ. ಉದಯ್ ಕುಮಾರ್ ಶೆಟ್ಟಿ ಸಂಪಾದಿಸಿದ “ಪುರುಷ ವೇಷದ ಪೊಗರು ಹಾರಾಡಿ ಕುಷ್ಟ ಗಾಣಿಗ’ ಪುಸ್ತಕ ಬಿಡುಗಡೆಗೊಂಡಿತು. ಕುಟುಂಬದ ಹಿರಿಯರಾದ ಸುಮತಿ ಗಾಣಿಗರನ್ನು ಗೌರವಿಸಲಾಯಿತು. ಹಿರಿಯ ಕಲಾವಿದರಾದ ಐರೋಡಿ ಗೋವಿಂದಪ್ಪ, ಮಜ್ಜಿಗೆಬೈಲು ಆನಂದ ಶೆಟ್ಟಿ, ಹಾರಾಡಿ ಸರ್ವ ಗಾಣಿಗ, ಜಂಬೂರು ರಾಮಚಂದ್ರ ಶ್ಯಾನುಭಾಗ್, ಹಳ್ಳಾಡಿ ಕೃಷ್ಣ ನಾಯ್ಕ ಅವರಿಗೆ ಕುಷ್ಟ ಗಾಣಿಗ ಜನ್ಮ ಶತಮಾನೋತ್ಸವ ಕಲಾ ಗೌರವಾರ್ಪಣೆ ನೀಡಿ ಸಮ್ಮಾನಿಸಲಾಯಿತು.
ಯಕ್ಷಗಾನ ಬಯಲಾಟ ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ, ಕೋಟ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಮಂದಾರ್ತಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಚ್. ಧನಂಜಯ ಶೆಟ್ಟಿ, ಉಡುಪಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ, ಯಕ್ಷಗಾನ ಅಕಾಡೆಮಿ ಸದಸ್ಯ ಕೆ.ಎಂ. ಶೇಖರ್, ಕೋಟ ರಾಜಶೇಖರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಜಿ. ಪ್ರಭಾಕರ ಅಡಿಗ ಉಪಸ್ಥಿತರಿದ್ದರು.
ಪಿ. ಕಿಶನ್ ಹೆಗ್ಡೆ ಸ್ವಾಗತಿಸಿ, ಚೇರ್ಕಾಡಿ ಶ್ರೀನಿವಾಸ ಗಾಣಿಗ ಅವರು ಕುಷ್ಟ ಗಾಣಿಗರ ಕುರಿತು ಮಾತ
ನಾಡಿದರು. ಸುಜಯೀಂದ್ರ ಹಂದೆ ಸಮ್ಮಾನಿತರನ್ನು ಪರಿಚಯಿಸಿ, ಪತ್ರಕರ್ತ ಚಂದ್ರಶೇಖರ್ ಬೀಜಾಡಿ, ಚಂದ್ರ ಆಚಾರ್ಯ ಕೋಟ ನಿರ್ವಹಿಸಿದರು.