Advertisement

ಕುಂಬಳೆ ಗ್ರಾ.ಪಂ.ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

07:59 PM Jun 25, 2019 | sudhir |

ಕುಂಬಳೆ: ರಾಷ್ಟ್ರದಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಮುಂಚೂಣಿಯಲ್ಲಿರುವ ಕುಂಬಳೆ ಗ್ರಾ.ಪಂ. ಕಾರ್ಯಾಲಯಕ್ಕೆ ಕರ್ನಾಟಕ ಸರಕಾರದ ವಿಧಾನ ಪರಿಷತ್‌ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ತಂಡ ಭೇಟಿ ನೀಡಿ ಗ್ರಾ.ಪಂ. ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿನಿಮಯ ನಡೆಸಿತು.

Advertisement

ಪಂಚಾಯತ್‌ ರಾಜ್‌ ಕಾಯ್ದೆ ಜಾರಿಗೆ ಬಂದ ಬಳಿಕ 2008ರಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಪಡೆದಿದ್ದ ಕುಂಬಳೆ ಗ್ರಾ.ಪಂ.ನ ಒಟ್ಟು ಕಾರ್ಯಕ್ರಮಗಳು, ಯೋಜನೆಗಳ ತಯಾರಿ, ಅನುಷ್ಠಾನ, ಅಧ್ಯಕ್ಷರು, ಸದಸ್ಯರ ಜವಾಬ್ದಾರಿಗಳ ಬಗ್ಗೆ ಅವರು ವಿಸ್ತೃತವಾಗಿ ಮಾಹಿತಿ ಪಡೆದುಕೊಂಡರು. ಸ್ವತಃ ಪಂಚಾಯತ್‌ ರಾಜ್‌ ಕಾಯ್ದೆಯ ಅಧ್ಯಯನಶೀಲರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಸಂದರ್ಭ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಈ ಕಾಯ್ದೆ ಹಂತಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಯೋಜನೆಯ ಅನುಷ್ಠಾನದಲ್ಲಿ ಮಾದರಿಯಾದ ರಾಜ್ಯಸರಕಾರದ ಪ್ರಯತ್ನ ಶ್ಲಾಘನೀಯವೆಂದರು.

ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಪಂಚಾಯತ್‌ ರಾಜ್‌ ಕಾಯ್ದೆಯ ಹೊಸ ದೃಷ್ಟಿಕೋನ ಯಶಸ್ವಿಯಾಗಿ ಕೇರಳದಲ್ಲಿ ಜಾರಿಗೊಂಡಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಈ ಕಾಯ್ದೆ ನೆರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕೇರಳ ಮಾದರಿಯ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಬಗ್ಗೆ ಚಿಂತನೆಗಳು ವಿಸ್ತೃತವಾಗಿ ಸಾಗಿವೆೆ ಎಂದ ಅವರು ತಳಮಟ್ಟದ ನಾಯಕತ್ವದ ಮೂಲಕ ಮುನ್ನೆಲೆಗೆ ಬರುವಲ್ಲಿ, ಯೋಜನೆಗಳನ್ನು ತಳಮಟ್ಟದಲ್ಲೇ ವಿಕೇಂದ್ರೀಕರಿಸಿಕೊಂಡು ಅಭಿವೃದ್ಧಿ ಹೊಂದುವಲ್ಲಿ ಕರ್ನಾಟಕ ಸರಕಾರ ಇನ್ನಷ್ಟು ಪ್ರಗತಿಯನ್ನು ಸಾಧಿಸಲಿದೆ ಎಂದರು.

ಕುಂಬಳೆ ಗ್ರಾ.ಪಂ. ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್‌, ಉಪಾಧ್ಯಕ್ಷೆ ಗೀತಾ ಎಲ್‌.ಶೆಟ್ಟಿ, ಸ್ಥಾಯೀ ಸಮಿತಿ ಅಧ್ಯಕ್ಷ ಎ.ಕೆ. ಆರೀಫ್‌, ಗ್ರಾ.ಪಂ.ಮಾಜಿ ಅಧ್ಯಕ್ಷ ಎಂ.ಅಬ್ಟಾಸ್‌, ಬ್ಲಾ.ಪಂ.ಸದಸ್ಯ ಸತ್ಯಶಂಕರ ಭಟ್‌ ಹಿಳ್ಳೆಮನೆ, ಗ್ರಾ.ಪಂ.ಹಿರಿಯ ಸೂಪರಿಂಟೆಂಡೆಂಟ್‌ ಸುರೇಶ್‌ ಬಿ.ಎನ್‌. ಉಪಸ್ಥಿತರಿದ್ದು ಕೋಟ ಶ್ರೀನಿವಾಸ ಪೂಜಾರಿಯವರೊಂದಿಗೆ ಸಂವಾದ ನಡೆಸಿದರು.
ಗ್ರಾ.ಪಂ.ಕಾರ್ಯದರ್ಶಿ ಪಿ.ಜಯನ್‌ ಸ್ವಾಗತಿಸಿ, ಗ್ರಾ.ಪಂ.ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಕುಂದಾಪುರ ತಾಲೂಕು ಪಂಚಾಯತ್‌ ಸದಸ್ಯ ಕರುಣಾ, ಬಂಟ್ವಾಳ ತಾ.ಪಂ. ಪಿಡಿಓ ನಯನಾ, ಪ್ರತಿಪಕ್ಷ ನಾಯಕರ ಕಾರ್ಯದರ್ಶಿಗಳಾದ ಹರೀಶ್‌ ಶೆಟ್ಟಿ ಹಾಗೂ ಪ್ರಕಾಶ್‌, ಕುಂಬಳೆ ಗ್ರಾ.ಪಂ. ಸದಸ್ಯರಾದ ಮುರಳೀದರ ಯಾದವ್‌, ಕೆ. ರಮೇಶ್‌ ಭಟ್‌, ಸುಜಿತ್‌ ರೈ, ಕೆ. ಸುಧಾಕರ ಕಾಮತ್‌, ಪೈವಳಿಕೆ ಗ್ರಾ.ಪಂ. ಮಾಜಿ ಅಧ್ಯಕ್ಷ ಮಣಿಕಂಠ ರೈ, ಸುರೇಶ್‌ ಶಾಂತಿಪಳ್ಳ, ಪ್ರೊ| ಎ. ಶ್ರೀನಾಥ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next