Advertisement

ಪುಣೆ ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಕೋಟ ಶ್ರೀನಿವಾಸ್‌ ಪೂಜಾರಿ ಭೇಟಿ

05:37 PM Jun 05, 2019 | Vishnu Das |

ಪುಣೆ: ಬಿಲ್ಲವ ಸಮುದಾಯದ ಅಭ್ಯುಯದಯಕ್ಕಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಜೀವನ ತತ್ವ ಸಿದ್ಧಾಂತಗಳನ್ನಿತ್ತು ಬೆಳಗಿಸಿರುವುದರಿಂದ ಇಂದು ನಾವು ಸನ್ಮಾರ್ಗ ದಲ್ಲಿ ನಡೆಯುವಂತಾಗಿದೆ. ಅವರ ಆದರ್ಶದ ನುಡಿಯಂತೆ ನಾನು ಇಂದು ಸಮಾಜ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಒತ್ತುನೀಡಿ ಸರಕಾರದ ಸವಲತ್ತುಗಳು ಸಮರ್ಪಕವಾಗಿ ಸಿಗುವಂತೆ ಪ್ರಯತ್ನಿಸಿದ್ದೇನೆ. ಆದರೆ ನಮ್ಮ ಸಮಾಜವು ಇನ್ನೂ ಹೆಚ್ಚಿನ ಉನ್ನತ ಮಟ್ಟದ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಪರಿಪೂರ್ಣ ಸಮಾಜವನ್ನು ಕಟ್ಟುವಲ್ಲಿ ಕಾಳಜಿ ವಹಿಸಬೇಕಾಗಿದೆ. ಆದರೆ ಇಂದು ನಮ್ಮ ಬಿಲ್ಲವ ಸಮಾಜದ ಯುವಕರು ಅಪರಾಧ ಪ್ರಕರಣಗಳಿಗೆ ಬಲಿಯಾಗುತ್ತಿರುವುದು ವಿಷಾದ ನೀಯವಾಗಿದೆ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸುಸಂಸ್ಕೃರನ್ನಾಗಿ ಸಮಾಜದಲ್ಲಿ ಬಾಳು ವಂತೆ ಮಾಡುವಲ್ಲಿ ಪೋಷಕರ ಜವಾಬ್ದಾರಿ ಬಹಳಷ್ಟಿದೆ. ಹೆಚ್ಚೆಚ್ಚು ಯುವಕ ಯುವತಿ
ಯರು ಉನ್ನತ ಶಿಕ್ಷಣ ಪಡೆದು ಪ್ರಬುದ್ಧರಾದರೆ ಸಮಾಜವು ಬಲಿಷ್ಠವಾಗಿ ಬೆಳೆಯಬಹುದು. ಸಮಾಜದ ಸಂಘಟನೆ ಬಲಿಷ್ಠವಾದಂತೆಸಮಾಜದ ಬಡ ಜನರ ಕಷ್ಟಗಳಿಗೆ ಸ್ಪಂದಿಸಬಹುದು. ಇದು ಸಮಾಜದ ತಳಮಟ್ಟದಲ್ಲಿಂದಲೇ ಆಗಬೇಕಾಗಿದೆ. ಸಂಘ ಅಥವಾ ಸಂಘಟನೆ ಕೇವಲ ಎರಡು ವರ್ಷಗಳಿಗೊಮ್ಮೆ ಅಧ್ಯಕ್ಷರನ್ನು ಬದಲಿಸಲಷ್ಟೇ ಸೀಮಿತವಾಗಿರದೆ ಸಮಾಜದ ಅಭಿವೃದ್ದಿ ಹೇಗೆ ಸಾಧ್ಯ ಎಂಬುವುದರ ಬಗ್ಗೆ ಆಳವಾಗಿ ಚಿಂತಿಸುವ ಕಾಲ ಇದಾಗಿದೆ. ಪರಸ್ಪರ ವೈಮನಸ್ಸುಗಳನ್ನು ಬದಿಗಿಟ್ಟು ಸಮಾಜದ ಉನ್ನತಿಗೆ ಶ್ರಮಿಸುವ ಸಂಘ ನಿರ್ಮಾಣವಾಗಬೇಕು. ಕಠಿನ ಪರಿಶ್ರಮ ಸ್ವಸಾಮರ್ಥ್ಯದಿಂದ ನಿಷ್ಠೆಯ ಸೇವೆಯನ್ನು ನಾವೆಲ್ಲರೂ ಮಾಡಿದರೆ ಯಾವುದೇ ಸಮಾಜ ಹಿಂದುಳಿಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಸರಕಾರದ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ್‌ ಪೂಜಾರಿ ಹೇಳಿದರು.

Advertisement

ಎೂ. 2 ರಂದು ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಕಚೇರಿಗೆ ಭೇಟಿ ನೀಡಿ, ಸೇರಿದ ಸಮಾಜ ಬಾಂಧವರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲ ಸಮಾಜದಲ್ಲಿರುವ ಆರ್ಥಿಕವಾಗಿ ಹಿಂದುಳಿದವರನ್ನು ಸ್ಥಿತಿವಂತರನ್ನಾಗಿ ಮಾಡಿ ಸರಕಾರದ ಎಲ್ಲ ಸೌಲಭ್ಯಗಳು ಅವರಿಗೆ ಸಿಗುವಂತೆ ಮಾಡುವ ಸಂಕಲ್ಪವನ್ನು ನಾವು ಹೊಂದಿದ್ದೇವೆ. ಇದು ಕೇಂದ್ರದಲ್ಲಿರುವ ಸರಕಾರದ ಧ್ಯೇಯವೂ ಆಗಿದೆ. ಜನ ಸಾಮಾನ್ಯರಿಗೆ ಸಹಾಯಕವಾಗುವಂತಹ ಯಾವುದೇ ಕಾರ್ಯಗಳನ್ನು ಮಾಡಲು ನನ್ನಿಂದಾದ ಪ್ರಯತ್ನವನ್ನು ಮಾಡುತ್ತಿದ್ದೇನೆ. ತಾವು ಸಲ್ಲಿಸಿದ ಪುಣೆ ಮಂಗಳೂರು ನೇರ ವಿಮಾನ ಸೇವೆಯ ಬಗ್ಗೆ ಪುಣೆಯ ಸಂಸದರಿಗೆ ಲಿಖೀತವಾಗಿ ಅರ್ಜಿಯನ್ನು ಕೊಟ್ಟು ಅದರ ಪ್ರತಿಯನ್ನು ನನಗೆ ಕಳುಹಿಸಿ ಕೊಡಿ. ಕೂಡಲೇ ಅದರ ಬಗ್ಗೆ ಪ್ರಯತ್ನಿಸುವೆ. ಪುಣೆ ಬಿಲ್ಲವ ಸಂಘದ ಮುಂದಿನ ಯೋಜನೆಗಳಿಗೆ, ಅಭಿವೃದ್ದಿಗೆ ಸರಕಾರದ ವತಿಯಿಂದ ಪ್ರಯತ್ನ ಮಾಡಿ ಅದರ ಸೌಲಭ್ಯಗಳನ್ನು ಸಿಗುವಂತೆ ಮಾಡುತ್ತೇನೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಕಡ್ತಲ ಉಪಸ್ಥಿತರಿದ್ದರು. ಶ್ರೀನಿವಾಸ್‌ ಪೂಜಾರಿ ಅವರು ದೀಪ ಬೆಳಗಿಸಿ, ಬ್ರಹ್ಮಶ್ರೀ ನಾರಾಯಣ ಗುರು, ಕೋಟಿ ಚೆನ್ನಯರ ಭಾವಚಿತ್ರಕ್ಕೆ ಪ್ರಾರ್ಥನೆಗೈದರು. ಬೆಳಗಾಂವಿ ಬಿಲ್ಲವ ಸಂಘದ ಅಧ್ಯಕ್ಷರಾದ ಸುನಿಲ್‌, ಕೋಟ ತಾಲೂಕು ಪಂಚಾಯತ್‌ ಅಧ್ಯಕ್ಷ ಮಹೀಂದ್ರ, ಕೋಟದ ರೋಟರಿ ಕ್ಲಬ್‌ನ ಅಧ್ಯಕ್ಷರಾದ ಸುಭಾÅಯ ಆಚಾರ್ಯ ಮತ್ತು ತಂಡದವರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ಬಂಗೇರ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ವಿಶ್ವನಾಥ್‌ ಪೂಜಾರಿ ಅವರು ಶ್ರೀನಿವಾಸ್‌ ಪೂಜಾರಿ ಅವರನ್ನು ಪುಣೇರಿ ಪೇಟ ತೊಡಿಸಿ, ಶಾಲು, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು. ಊರಿನಿಂದ ಆಗಮಿಸಿದ ಗಣ್ಯರನ್ನು ಗೌರವಿಸಲಾಯಿತು.

ಸಮಾರಂಭದಲ್ಲಿ ಪುಣೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಸದಾನಂದ ಪೂಜಾರಿ, ಉಪಾಧ್ಯಕ್ಷರಾದ ಸಂದೇಶ್‌ ಪೂಜಾರಿ, ಕೋಶಾಧಿಕಾರಿ ಹರೀಶ್‌ ಪೂಜಾರಿ, ಬಾಲಕೃಷ್ಣ ಸುವರ್ಣ, ಉದಯ್‌ ಸುವರ್ಣ ಸುರತ್ಕಲ್‌, ಸೂರ್ಯ ಪೂಜಾರಿ, ಭಾಸ್ಕರ್‌ ಪೂಜಾರಿ, ಸುದೀಪ್‌ ಪೂಜಾರಿ, ಜಯ ಪೂಜಾರಿ, ವಿಶ್ವನಾಥ್‌ ಪೂಜಾರಿ ಕಪಿಲ, ಗಿರೀಶ್‌ ಪೂಜಾರಿ, ಪ್ರಕಾಶ್‌ ಪೂಜಾರಿ ಬೈಲೂರು, ಶಿವಪ್ರಸಾದ್‌ ಪೂಜಾರಿ, ಶಂಕರ ಪೂಜಾರಿ ಬಂಟಕಲ್‌, ನಾರಾಯಣ ಪೂಜಾರಿ, ರಾಘು ಪೂಜಾರಿ, ಉಮಾ ಕೆ. ಪೂಜಾರಿ, ವನಿತಾ ಪೂಜಾರಿ, ಗೀತಾ ಪೂಜಾರಿ ಮತ್ತು ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು. ಸದಾನಂದ ಬಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

Advertisement
Advertisement

Udayavani is now on Telegram. Click here to join our channel and stay updated with the latest news.

Next