ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರ ಹೋರಾಟ, ಎಚ್.ಡಿ.ದೇವೇಗೌಡರ ಶ್ರಮ, ದೇವರಾಜ ಅರಸು ಅವರ ಸಾಮಾಜಿಕ ಬದ್ಧತೆಯನ್ನು ಅರಿತುಕೊಂಡರೆ ನಾವು ಇನ್ನಷ್ಟು ಪರಿಶ್ರಮಪಡುವ ಅಗತ್ಯವಿದೆ ಎಂಬುದು ಮನದಟ್ಟಾಗುತ್ತದೆ ಎಂದು ವಿಧಾನ ಪರಿಷತ್‌ನ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ವಿಪಕ್ಷ ನಾಯಕನ ಸ್ಥಾನವನ್ನು ಆಲಂಕರಿಸಿದ್ದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಸಹಿತ ಆಡಳಿತ ಮತ್ತು ವಿಪಕ್ಷ ಸದಸ್ಯರಿಂದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಈಗಲೂ ಕಲಾಪಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆಯಲು, ನಿಯಮಗಳ ಬಗ್ಗೆ ಅರಿತುಕೊಳ್ಳಲು ರಮೇಶ್ ಕುಮಾರ್, ವೈಎಸ್‌ವಿ ದತ್ತ ಅವರನ್ನು ಸಂಪರ್ಕಿಸುತ್ತೇನೆ. ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿ ಸಚಿವ ಎಚ್.ಕೆ.ಪಾಟೀಲ್ ಅವರಿಂದ ಮಾರ್ಗದರ್ಶನ ಪಡೆಯುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವಿಪಕ್ಷ ಉಪನಾಯಕ ಸುನೀಲ್ ವಲ್ಯಾಪುರೆ ಮತ್ತು ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರನ್ನು ಕೂಡ ಅಭಿನಂದಿಸಲಾಯಿತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಭಾ ನಾಯಕ, ಸಣ್ಣ ನೀರಾವರಿ ಸಚಿವ ಎನ್. ಎಸ್. ಭೋಸರಾಜ್, ಸದಸ್ಯರಾದ ಯು. ಬಿ. ವೆಂಕಟೇಶ್, ಮಂಜುನಾಥ ಭಂಡಾರಿ, ಎಸ್. ಎಲ್. ಭೋಜೇ ಗೌಡ, ಎಂ. ನಾಗರಾಜು, ಸಿ. ಎನ್. ಮಂಜೇಗೌಡ, ಪ್ರತಾಪ್‌ಸಿಂಹ ನಾಯಕ್, ತೇಜಸ್ವಿನಿ ಗೌಡ, ಶರವಣ ಮುಂತಾದವರು ಅಭಿನಂದಿಸಿ ಮಾತನಾಡಿದರು.