Advertisement

ಮಹಿಳೆಯರಿಗೂ ಸೇನಾ ಪೂರ್ವ ತರಬೇತಿ ಶಾಲೆ: ಸಚಿವ ಕೋಟ

09:17 AM Sep 06, 2022 | Team Udayavani |

ಉಡುಪಿ : ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಮಹಿಳೆಯರಿಗೂ ಆರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾಡಳಿತ, ಜಿ.ಪಂ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸೋಮವಾರ ಉಡುಪಿಯಲ್ಲಿ ನಡೆದ ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ ಉದ್ಘಾಟನ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಗ್ನಿಪಥ್‌ ಪೂರ್ಣಗೊಳಿಸಿದವರಿಗೆ ಸರಕಾರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಲ್ಲಿ ಶೇ. 50ರಷ್ಟು ಮೀಸಲಾತಿ ನೀಡುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ. ದ.ಕ., ಉಡುಪಿ, ಉ.ಕ. ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ತೆರೆಯಲಿದ್ದೇವೆ. ಸದ್ಯ ಪ್ರತೀ ಶಾಲೆಗೆ 100 ಪುರುಷ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಾಲ್ಕು ತಿಂಗಳ ತರಬೇತಿ ಇರಲಿದೆ. ವಸತಿ, ಊಟ ಸಹಿತ ಎಲ್ಲವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನೋಡಿಕೊಳ್ಳಲಿದೆ. ರಾಜ್ಯದ ಪ್ರತೀ ಮನೆ ಯಿಂದಲೂ ಒಬ್ಬರು ಸೇನೆಗೆ ಸೇರಬೇಕು ಎಂಬುದು ಇದರ ಉದ್ದೇಶ. ಇಲ್ಲಿ ತರಬೇತಿ ಪಡೆದವರಿಗೆ ಶೇ. 99ರಷ್ಟು ಅಗ್ನಿಪಥ್‌ ಯೋಜನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ ಎಂದರು.

ದೇಶ, ಸಮಾಜದ ರಕ್ಷಣೆ
ಶಾಲೆ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಮಾತನಾಡಿ, ದೇಶಕ್ಕಾಗಿ ತ್ಯಾಗ ಮಾಡಿದಾಗ ದೇಶದ ರಕ್ಷಣೆಯ ಜತೆಗೆ ಸಮಾಜದ ರಕ್ಷಣೆಯೂ ಆಗುತ್ತದೆ. ಜಾತಿಯ ಹೆಸರಿನಲ್ಲಿ ಏನೇ ಮಾಡಿದರೂ ನೀತಿ ಇರಬೇಕು. ನೀತಿ ಇಲ್ಲದೇ ಜಾತಿ ಹೆಸರಿನಲ್ಲಿ ಏನೇ ಮಾಡಿದರೂ ಅದಕ್ಕೆ ಅರ್ಥ ಇರುವುದಿಲ್ಲ. ಸೇನಾಪೂರ್ವ ತರಬೇತಿಯು ಸ್ವಾಭಿಮಾನದಿಂದ ಬೆಳೆಯಲು ಪೂರಕವಾಗಲಿದೆ ಎಂದರು.

ಇದನ್ನೂ ಓದಿ : ನವಲಗುಂದದಲ್ಲಿ ಮಳೆಯ ಆವಾಂತರ : ಭೋಗಾನೂರ ಗ್ರಾಮದ 40 ಮನೆಗಳು ಜಲಾವೃತ

Advertisement

ಸ್ವಾಗತಾರ್ಹ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯ ಪ್ರಕಾಶ್‌ ಹೆಗ್ಡೆ ಮಾತನಾಡಿ, ಕೋಟಿ ಚೆನ್ನಯ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಬಾರಕೂರಿನಲ್ಲಿ ಆರಂಭಿಸುತ್ತಿರುವುದು ಸ್ವಾಗತಾರ್ಹ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ| ಗಣೇಶ್‌ ಕಾರ್ಣಿಕ್‌ ಅಗ್ನಿಪಥ್‌ ಬಗ್ಗೆ ಮಾಹಿತಿ ನೀಡಿದರು. ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್‌. ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮನೋಹರ ಎಸ್‌. ಕಲ್ಮಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಂಟಿಕಾರ್ಯದರ್ಶಿ ಪ್ರದೀಪ್‌, ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್‌., ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್‌ ಕೊಡ್ಗಿ ಉಪಸ್ಥಿತರಿದ್ದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್‌ ಕುಮಾರ್‌ ಸ್ವಾಗತಿಸಿ, ವಂದಿಸಿದರು. ತಿಮ್ಮಪ್ಪ ಶೆಟ್ಟಿ ಆರೂರು ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next