Advertisement

ಅಲೆಮಾರಿ ವಸತಿ ಅನುದಾನ ಅನ್ಯ ಕಾರ್ಯಕ್ಕೆ ಬಳಸಬೇಡಿ : ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ

09:10 PM Jan 31, 2022 | Team Udayavani |

ಬೆಂಗಳೂರು: ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಸಮುದಾಯಗಳಿಗೆ ವಸತಿ ಯೋಜನೆಗೆ ಮೀಸಲಿಟ್ಟ 250 ಕೋಟಿ ರೂ.ಗಳನ್ನು ಅನ್ಯ ಕೆಲಸಗಳಿಗೆ ಬಳಸದಂತೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಅಲೆಮಾರಿ ಮತ್ತು ಅರೆ ಅಲೆಮಾರಿಗಳಿಗೆ ವಸತಿ ಸೌಲಭ್ಯ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯದವರನ್ನು ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸೀಮಿತಗೊಳಿಸಿ, ಅನುದಾನವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವಂತೆ ತಿಳಿಸಿದರು.

ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗ ಅತೀ ಸಣ್ಣ ಸಮುದಾಯ ಆಗಿರುವುದರಿಂದ ಸಾಮಾನ್ಯ ವಸತಿ ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ವಿಶೇಷ ವರ್ಗವೆಂದು ಪರಿಗಣಿಸಿ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಸೀಮಿತಗೊಳಿಸಿ, ಮೊತ್ತವನ್ನು ಫ‌ಲಾನುಭವಿಗೆ ನೇರವಾಗಿ ಮನೆ ನಿರ್ಮಾಣಕ್ಕೆ ನೀಡುವಂತೆ ಹೇಳಿದರು.

ನಿಯಮ ಸಡಿಲಿಕೆಗೆ ನಿರ್ದೇಶನ: ಮನೆ ಪಡೆಯಲು ನಿವೇಶನ ಅಥವಾ ಇನ್ನಿತರ ದಾಖಲೆಗಳು ಇಲ್ಲದಿರುವುದರಿಂದ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನಷ್ಟೇ ಕೇಳಬೇಕು. ಭೂ ಪರಿವರ್ತನೆ ಮತ್ತು ಗ್ರಾಪಂ ಪರವಾನಗಿ ಕಡ್ಡಾಯಗೊಳಿಸದೆ, ನಿರಾಕ್ಷೇಪಣಾ ಪತ್ರ ಮಾತ್ರ ಪಡೆದು ಇನ್ನಿತರ ದಾಖಲೆಗಳನ್ನು ಒದಗಿಸಲು ಇರುವ ನಿಯಮಗಳನ್ನು ಸಡಿಲ ಮಾಡುವಂತೆ ನಿರ್ದೇಶಿಸಿದರು.

ಇದನ್ನೂ ಓದಿ : 2023 ಕ್ಕೆ ರಾಜಕೀಯ ಪ್ರವೇಶದ ಸುಳಿವು ನೀಡಿದ ಗಾಲಿ ಜನಾರ್ಧನ ರೆಡ್ಡಿ

Advertisement

ಅಲೆಮಾರಿ ಕೋಶದಲ್ಲಿ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡಿರುವ ಪರಿಶಿಷ್ಟ ಜಾತಿಯ 1,726 ಹಾಗೂ ಪರಿಶಿಷ್ಟ ಪಂಗಡದ 944 ಫ‌ಲಾನುಭವಿಗಳ ಪಟ್ಟಿಯನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ಒದಗಿಸಲಾಗಿದೆ. ಇನ್ನುಳಿದವರಿಗೆ ವಸತಿ ನೀಡಲು ಮುಂದಿನ ಒಂದು ವಾರದೊಳಗೆ ಪ್ರಕ್ರಿಯೆ ಆರಂಭಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಲೆಮಾರಿ ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು, ಸಮಾಜ ಕಲ್ಯಾಣ ಅಪರ ಮುಖ್ಯಕಾರ್ಯದರ್ಶಿ ಎನ್‌. ನಾಗಾಂಬಿಕಾ ದೇವಿ, ನಿವೃತ್ತ ಐಎಎಸ್‌ ಅಧಿಕಾರಿ ವೆಂಕಟಯ್ಯ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಬಜೆಟ್‌ನಲ್ಲಿ 365 ಕೋಟಿ ರೂ. ನಿರೀಕ್ಷೆ
ರಾಜ್ಯದಲ್ಲಿರುವ ಗ್ರಾಮೀಣ ಮತ್ತು ನಗರ ಪ್ರದೇಶ ಸೇರಿ ಅಲೆಮಾರಿ ಮತ್ತು ಅರೆ ಅಲೆಮಾರಿ ಪ.ಜಾತಿ ಫ‌ಲಾನುಭವಿಗಳಿಗೆ ಸುಮಾರು 300 ಕೋಟಿ ರೂ. ಹಾಗೂ ಪ.ಪಂಗಡದ ಫ‌ಲಾನುಭವಿಗಳಿಗೆ ಸುಮಾರು 65 ಕೋಟಿ ರೂ. ಅಗತ್ಯವಿದೆ. ಈ ಅನುದಾನವನ್ನು ಮುಂದಿನ ಬಜೆಟ್‌ನಲ್ಲಿ ನಿರೀಕ್ಷಿಸಬಹುದು ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.