ಬೆಂಗಳೂರು : ರಾಜ್ಯದ ವಿವಿಧ ಇಲಾಖೆಯಲ್ಲಿನ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕುವುದೇ ನಮ್ಮ ಮೊದಲ ಗುರಿ ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಇಂದು ಪಕ್ಷದ ಕಚೇರಿಗೆ ಬಂದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಿಜೆಪಿ ಅಧ್ಯಕ್ಷರ ಸೂಚನೆಯಂತೆ ಪಕ್ಷದ ಕಚೇರಿಗೆ ಬಂದಿದ್ದೇವೆ, ಅಹವಾಲುಗಳನ್ನು ಸ್ವೀಕಾರ ಮಾಡಿದ್ದೇವೆ ಅಲ್ಲದೆ ಪ್ರತೀ ದಿನ ಕಾರ್ಯಾಲಯಕ್ಕೆ ಬಂದು ಅಹವಾಲು ಸ್ವೀಕಾರಕ್ಕೆ ಸೂಚನೆಯನ್ನೂ ನೀಡಿದ್ದೇವೆ ಎಂದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ 1.20 ಕೋಟಿ ಕುಟುಂಬ ಇದೆ. ಅವರಿಗೆ ಶೌಚಾಲಯ, ಹಕ್ಕು ಪತ್ರ, ಶಿಕ್ಷಣ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ. ಇಲಾಖೆಯಲ್ಲಿ ಆಗ್ತಿರೋ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ನಮ್ಮ ಗುರಿ. ಅಸ್ಪೃಶ್ಯತೆ ಕಡಿವಾಣ ಹಾಕುವುದು ನನ್ನ ಗುರಿ. ಆರ್ಥಿಕ ಕಾರಣದಿಂದ ಕೆಲ ಕಾಲ ಹಣ ಬಿಡುಗಡೆಗೆ ಸಮಸ್ಯೆ ಆಗಿದೆ ಈ ಕುರಿತು ಸಿಎಂ ಸಭೆ ಮಾಡಿ ವಿಶ್ವಾಸ ಮೂಡಿಸಿ, ಒಟ್ಟಿಗೆ ಕೆಲಸ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ :ಟೆಲಿಕಾಂ ವಲಯದಲ್ಲಿ ಕ್ರಾಂತಿ ಮಾಡಿದ ‘ಜಿಯೋ’ಗೆ ಈಗ ಐದು ವರ್ಷ!
ಜಾತಿ ಜನಗಣತಿ ವಿಚಾರವಾಗಿ ಮಾತನಾಡಿದ ಸಚಿವರು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜನಗಣತಿ ಮಾಡಿಸಿದ್ದರು ಇದಕ್ಕೆ ಅವರನ್ನು ನಾನು ಅಭಿನಂದಿಸುತ್ತೇನೆ, ಹಿಂದುಳಿದ ವರ್ಗದವರ ಪರ ಸಿದ್ದರಾಮಯ್ಯನವರು ಧ್ವನಿ ಎತ್ತಿದ್ದರು, ಅಲ್ಲದೆ ಜನಗಣತಿಗಾಗಿ 162 ಕೋಟಿ ಖರ್ಚು ಮಾಡಿದ್ದರು, ಆದರೆ ಯಾಕೆ ಬಿಡುಗಡೆ ಮಾಡಲಿಲ್ಲ ಎನ್ನುವುದು ಗೊತ್ತಾಗಲಿಲ್ಲ ಎಂದಿದ್ದಾರೆ.
ಪ್ರಸ್ತುತ ಹಿಂದುಳಿದ ವರ್ಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ಸಮಯಾವಕಾಶ ಕೇಳಿದ್ದು ಅವರ ವರದಿ ಬಂದ ಬಳಿಕ ಈ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.