Advertisement
ಅನಂತರ ಸುದ್ದಿಗಾರರ ಜತೆ ಮಾತನಾಡಿದ ಕೋಟ, ಜಿಲ್ಲಾ ಎಸ್‌ಪಿ ಅವರಿಗೆ ಕಾಲಾವಕಾಶ ನೀಡುತ್ತಿದ್ದೇನೆ. ರಾಜಕಾರಣ ಬದಿಗಿಟ್ಟು ತತ್‌ಕ್ಷಣ ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರಗಿಸಬೇಕು. ಇಲ್ಲದಿದ್ದರೆ ಗೃಹಸಚಿವರನ್ನು ಭೇಟಿಯಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತೇನೆ. ಗೃಹಮಂತ್ರಿಗಳಿಗೆ ದೂರು ಕೊಡಲು ಅವಕಾಶ ಕೊಡದೇ ಅದಕ್ಕೂ ಮುನ್ನ ಕ್ರಮ ಕೈಗೊಳ್ಳಿ. ಗಾಯಾಳುಗಳನ್ನು ಖುದ್ದು ಭೇಟಿ ಮಾಡಲಿ. ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನವರ ಅಟಾಟೋಪ ಹೆಚ್ಚಾಗಿದೆ. ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಯುತ್ತಿರುವುದು ಖಂಡನೀಯ ಎಂದರು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಶಂಕರ ಪೂಜಾರಿ, ತಾ. ಪಂ. ಸದಸ್ಯ ಮಹೇಂದ್ರ ಪೂಜಾರಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಶೆಟ್ಟಿ, ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಭದ್ರ ಶೆಟ್ಟಿ, ವಿಜಯ ಕುಮಾರ್ ಕಂಚಿಕಾನ ಮೊದಲಾದವರಿದ್ದರು.
ಕಂಬದಕೋಣೆಯಿಂದ ಎಂ.ಒ. ಹಣವನ್ನು ತರಲು ಕಂಬದಕೋಣೆಗೆ ರಿಕ್ಷಾದಲ್ಲಿ ಬಡಿಯ ಹಾಂಡ ಹಾಗೂ ಜನಾರ್ದನ ನಾಯಕ್ ಹೋಗುತ್ತಿದ್ದಾಗ ಹೆರಂಜಾಲು ಗ್ರಾಮದ ಹೆರಂಜಾಲು ಮೊಬೈಲ್ ಟವರ್ ಎದುರು ಆರೋಪಿ ಎಚ್.ವಿಜಯ ಶೆಟ್ಟಿ ಮತ್ತು ಇತರ ಮೂವರು ಕಾರನ್ನು ರಿಕ್ಷಾಗೆ ಅಡ್ಡವಾಗಿಟ್ಟು ಜನಾರ್ಧನ ನಾಯಕ್ ಅವರಿಗೆ ಕೈ ತುಂಡಾಗುವ ರೀತಿಯಲ್ಲಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿದ್ದು ಜತೆಗಿದ್ದ ಬಡಿಯ ಹಾಂಡ ಅವರಿಗೆ ಹೊಡೆದು ತಲೆಗೆ ಗಂಭೀರ ಗಾಯವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಸೋಮವಾರ ರಾತ್ರಿಯೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.