Advertisement

24 ಮಂದಿ ವಶಕ್ಕೆ ನಗದು ಸಹಿತ 8.27 ಲಕ್ಷ ರೂ. ಮೌಲ್ಯದ ಸೊತ್ತು ವಶ

10:45 PM Aug 06, 2023 | Team Udayavani |

ತೆಕ್ಕಟ್ಟೆ: ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಗುಡ್ಡೆಯಂಗಡಿ ಕ್ರಾಸ್‌ ಬಳಿ ಇರುವ ವಿನಾಯಕ ಸಭಾಂಗಣದಲ್ಲಿ ಇಸ್ಪೀಟು ಜುಗಾರಿ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಆ. 5ರಂದು ರಾತ್ರಿಯ ವೇಳೆ ಕೋಟ ಪೊಲೀಸ್‌ ಠಾಣೆಯ ಉಪನಿರೀಕ್ಷಕ ಶಂಭುಲಿಂಗಯ್ಯ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿ ಒಟ್ಟು ನಗದು 1,49,680 ಲಕ್ಷ ರೂ. ನಗದು ಸಹಿತ 8.27 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಈ ದಾಳಿಯಲ್ಲಿ 24 ಮಂದಿ ಪೊಲೀಸರ ಅತಿಥಿಯಾಗಿದ್ದಾರೆ. ಮೂರು ಕಾರು, ನಾಲ್ಕು ದ್ವಿಚಕ್ರ ವಾಹನಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಸ್ಪೀಟು ಜುಗಾರಿ ಆಟದಲ್ಲಿ ನಿರತರಾದ ಅಬ್ದುಲ್‌ ಮುನೀರ್‌, ಸಲ್ಮಾನ್‌, ಬಸವರಾಜ, ವಿಷ್ಣು ಕೆ.ವಿ., ದಿನೇಶ್‌, ಕೆ. ವಿನಾಯಕ, ಸಂದೀಪ, ಕೃಷ್ಣ, ಸುಧಾಕರ, ನಾಗರಾಜ, ಸುಬ್ರಹ್ಮಣ್ಯ, ಶ್ರೀಧರ, ಇ. ಆ್ಯಂಟನಿ ಮಸ್ಕರೇನಸ್‌, ಶೃತಿರಾಜ್‌, ರಘು, ಹುಸೇನ್‌, ಸಂದೇಶ್‌, ರಾಜು ಮೊಗೇರ, ಗೋಪಾಲ, ಗಣೇಶ್‌, ಮಿಥುನ್‌, ಸುಧರ್ಮ, ಕಮಲಾಕ್ಷ ಹಾಗೂ ಸುಧಾಕರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಗಾರಿ ಆಟಕ್ಕೆ ಬಳಸಿದ ಇಸ್ಪೀಟು ಎಲೆಗಳು 52, ಸ್ಟೀಲ್‌ ಟೇಬಲ್‌ಗ‌ಳು ಮೂರು, ಪ್ಲಾಸ್ಟಿಕ್‌ ಕುರ್ಚಿಗಳು 24, ನೀಲಿ, ಹಸುರು ಹಾಗೂ ಹಳದಿ ಬಣ್ಣಗಳ ಟೇಬಲ್‌ ಕ್ಲಾತ್‌ 1, ಒಟ್ಟು ನಗದು 1,49,680 ರೂ., ಟೊಯೊಟಾ ಈಟಿಯಾಸ್‌ ಕಾರು, ಆಮ್ನಿ ಕಾರು, ರಿಡ್ಜ್ ಕಾರು, ಟಿವಿಎಸ್‌ ಸ್ಟಾರ್‌ ಸಿಟಿ ಮೋಟಾರ್‌ ಸೈಕಲ್‌, ಫ್ಯಾಶನ್‌ ಪ್ರೋ ಮೋಟಾರ್‌ ಸೈಕಲ್‌, ಸುಜುಕಿ ಏಸಸ್‌ ಸ್ಕೂಟಿ, ಹೋಂಡಾ ಡಿಯೋ ಸ್ಕೂಟಿ ಸೇರಿದಂತೆ ಒಟ್ಟು 8,27,580 ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಕಲಂ 79, 80 ಕರ್ನಾಟಕ ಪೊಲೀಸ್‌ ಕಾಯ್ದೆಯ ಪ್ರಕಾರ ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಂತಹ ವಿಶೇಷ ಕಾರ್ಯಾಚರಣೆ ಅಗತ್ಯ
ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ಗಾಂಜಾ, ಮಟ್ಕಾ, ಇಸ್ಪೀಟು ಜುಗಾರಿ ಅಡ್ಡೆಗಳು ಮತ್ತಿತರ ಅಕ್ರಮ ದಂಧೆಗಳು ವಿಸ್ತರಿಸುತ್ತಲೇ ಹೋಗುತ್ತಲಿವೆ. ಅಲ್ಲಲ್ಲಿ ಕೆಲವು ದಾಳಿಗಳು, ಕೇಸಿಗಾಗಿ ಠಾಣೆಗಳಿಗೆ ದಂಧೆಕೋರರನ್ನು ಕರೆಯಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಪೊಲೀಸರೇ ಅಕ್ರಮ ಅಡ್ಡೆಗಳಿಗೆ ಸಾಥ್‌ ನೀಡುತ್ತಿದ್ದಾರೆ ಎನ್ನುವ ಮಾತುಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಲೇ ಇದೆ. ಮೊಳಹಳ್ಳಿ ಗ್ರಾಮದಲ್ಲಿ ಅಕ್ರಮ ಇಸ್ಪೀಟು ಜುಗಾರಿ ಅಡ್ಡೆಗೆ ಕೋಟ ಪೊಲೀಸರಿಂದ ನಡೆದ ಬೃಹತ್‌ ದಾಳಿಯಂತೆಯೇ ಹೆಚ್ಚಿನ ಪ್ರಮಾಣದ ದಾಳಿಗಳು ಕರಾವಳಿಯಾದ್ಯಂತ ನಡೆಯಬೇಕಿದೆ. ಮಂಗಳೂರು, ಉಡುಪಿ ಪೊಲೀಸರು ಗಾಂಜಾ ಪ್ರಕರಣಗಳ ಬೆನ್ನು ಬಿದ್ದು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವಂತೆಯೇ ವೇಶ್ಯಾವಾಟಿಕೆ, ಮಟ್ಕಾ, ಇಸ್ಪೀಟು ಅಡ್ಡೆಗಳ ಮೇಲೂ ನಿರಂತರ ದಾಳಿಗಳಾಗಬೇಕಿದೆ. ಬೇರುಮಟ್ಟದಿಂದ ಈ ದಂಧೆಗಳನ್ನು ಮಟ್ಟ ಹಾಕಲು ಅಸಾಧ್ಯವಾದರೂ, ನಿರಂತರ ದಾಳಿಯಾದರೆ ಅಕ್ರಮ ಚಟುವಟಿಕೆಗಳು ರಾಜಾರೋಷವಾಗಿ ವಿಸ್ತರಣೆಯಾಗಿ ಸಮಾಜಕ್ಕೆ ಕಂಠಕವಾಗುವುದಂತು ತಪ್ಪುತ್ತದೆ. ಈ ಬಗ್ಗೆ ಸುದೀರ್ಘ‌ ವಿಶೇಷ ಕಾರ್ಯಾಚರಣೆ ನಡೆಸುವತ್ತ ಹಿರಿಯ ಪೊಲೀಸ್‌ ಅಧಿಕಾರಿಗಳು ಗಮನಹರಿಸಿದರೆ ಉತ್ತಮ ಎನ್ನುವುದು ಸಾರ್ವಜನಿಕ ವಲಯದ ಅಭಿಮತ.

Advertisement

Udayavani is now on Telegram. Click here to join our channel and stay updated with the latest news.

Next