Advertisement

ಕೋಟ: ಕೋಡಿ ಬೆಂಗ್ರೆಗೆ ಸರಕಾರಿ ಬಸ್‌ ಓಡಿಸಲು ಮೀನಮೇಷ

06:17 PM May 15, 2024 | Team Udayavani |

ಕೋಟ: ಪರಿಶೀಲಿಸಿ ಕ್ರಮ ಕೋಡಿ ಗ್ರಾ.ಪಂ. ವ್ಯಾಪ್ತಿಯ ದ್ವೀಪ ಪ್ರದೇಶವಾದ ಕೋಡಿಬೆಂಗ್ರೆ ಭಾಗಕ್ಕೆ ಸರಕಾರಿ ಬಸ್ಸು ಸೌಲಭ್ಯ ಒದಗಿಸಬೇಕು ಎನ್ನುವ ಬೇಡಿಕೆ ಸ್ಥಳೀಯರಲ್ಲಿ ಹಲವು ವರ್ಷಗಳಿಂದ ಇದೆ. ಇಲ್ಲಿನ ನಿವಾಸಿಗಳು ಉದ್ಯೋಗ, ಮೀನು ಗಾರಿಕೆ ಮುಂತಾದ ಕಾರ್ಯ ಚಟುವಟಿಕೆಗಳಿಗಾಗಿ ಉಡುಪಿ, ಮಲ್ಪೆ, ಸಂತೆಕಟ್ಟೆಗೆ ತೆರಳಲು ಬಸ್ಸುಗಳನ್ನು ಅವಲಂಬಿಸಿಕೊಂಡಿದ್ದಾರೆ.ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಕೂಡ ದೂರದೂರಿಗೆ ತೆರಳಬೇಕಿದ್ದು ಬಸ್ಸು ಸಮಸ್ಯೆ ಇದೆ.

Advertisement

2 ಗಂಟೆಗೊಮ್ಮೆ ಬಸ್‌
ಇಲ್ಲಿನ ಕೆಮ್ಮಣ್ಣು ಹೂಡೆ ತನಕ ಸರಕಾರಿ ಬಸ್‌, ಖಾಸಗಿ ಬಸ್‌ ವ್ಯವಸ್ಥೆ ಇದೆ. ಆದರೆ ಪಡುತೋನ್ಸೆ ಬೆಂಗ್ರೆ, ಕೋಡಿ ಬೆಂಗ್ರೆಗೆ ಕೇವಲ ಎರಡು ಖಾಸಗಿ ಬಸ್‌ಗಳು ಎರಡು ಗಂಟೆಗೊಮ್ಮೆ ಸಂಚರಿಸುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ, ಮೀನುಗಾರರಿಗೆ, ಹಿರಿಯ ನಾಗರಿಕರಿಗೆ ಹಾಗೂ ಪ್ರವಾಸಿಗರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹೂಡೆ ತನಕ ಬರುವ ಸರಕಾರಿ ಬಸ್ಸನ್ನು ಪಡುತೋನ್ಸೆ ಬೆಂಗ್ರೆ ಮತ್ತು ಕೋಡಿ ಬೆಂಗ್ರೆಯವರೆಗೆ ವಿಸ್ತರಿಸಬೇಕು ಎನ್ನುವುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿತ್ತು.

ಜಿಲ್ಲಾಧಿಕಾರಿಗಳಿಗೆ ಮನವಿ
ಈ ಬಗ್ಗೆ ಸ್ಥಳೀಯರು ಬ್ರಹ್ಮಾವರದಲ್ಲಿ ಫೆ.7 2024ರಂದು ನಡೆದ ಜನತಾದರ್ಶನದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಇದು ಸಾರಿಗೆ ಇಲಾಖೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ತಲುಪಿ ಕೆಲವೇ ದಿನದಲ್ಲಿ ಕೆಮ್ಮಣ್ಣು ಹೂಡೆ ನಡುವೆ
ಸಂಚಾರವಿರುವ ಸರಕಾರಿ ಬಸ್ಸನ್ನು ಪಡುತೋನ್ಸೆ ಬೆಂಗ್ರೆ, ಕೋಡಿ ಬೆಂಗ್ರೆ ತನಕ ವಿಸ್ತರಿಸುವುದಾಗಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ ಆದೇಶ ಇದುವರೆಗೂ ಅನುಷ್ಠಾನವಾಗಿಲ್ಲ.

ಶೀಘ್ರ ಅನುಷ್ಠಾನವಾಗಲಿ
ಕೋಡಿ ಬೆಂಗ್ರೆ ಭಾಗಕ್ಕೆ ಸರಕಾರಿ ಬಸ್‌ ಸೇವೆ ಅಗತ್ಯವಾಗಿ ಬೇಕಿದ್ದು ಈ ಹಿಂದೆ ಗ್ರಾಮಸ್ಥರು ಸಲ್ಲಿಸಿದ ಮನವಿಯಂತೆ ಬಸ್ಸು ಸಂಚಾರಕ್ಕೆ ಆದೇಶವಾಗಿದೆ. ಆದರೆ ಇದುವರೆಗೂ ಅನುಷ್ಠಾನ ನಡೆದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ತುರ್ತು ಕ್ರಮಕೈಗೊಳ್ಳಬೇಕಿದೆ.
*ಪ್ರಸಾದ್‌ ತಿಂಗಳಾಯ
ಕೋಡಿಬೆಂಗ್ರೆ, ಸ್ಥಳೀಯರು

ಪರಿಶೀಲಿಸಿ ಕ್ರಮ
ಗ್ರಾಮಸ್ಥರ ಮನವಿಯಂತೆ ಪರಿಶೀಲಿಸಿ ಮಾರ್ಗ ವಿಸ್ತರಣೆಗೆ ಲಿಖಿತವಾಗಿ ಭರವಸೆ ನೀಡಲಾಗಿದೆ. ಚುನಾವಣೆ ಘೋಷಣೆಯಾದ್ದರಿಂದ ಸ್ವಲ್ಪ ಹಿನ್ನಡೆಯಾಗಿದ್ದು, ಶೀಘ್ರ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು.
*ಕಮಲ್‌ ಕುಮಾರ್‌, ಡಿ.ಟಿ.ಒ.,
ಕೆ.ಎಸ್‌.ಆರ್‌.ಟಿ.ಸಿ. ಮಂಗಳೂರು ವಿಭಾಗ

Advertisement
Advertisement

Udayavani is now on Telegram. Click here to join our channel and stay updated with the latest news.

Next