ಕೋಟ: ಸಾವಿರಾರು ವರ್ಷ ಇತಿಹಾಸವಿರುವ ಕೋಟ ಶ್ರೀ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿಯಲ್ಲಿ ಹೂಳು ತುಂಬಿ ನೀರು ಕಲುಷಿತವಾಗುವ ಹಂತ ತಲುಪಿದ್ದು ಹೀಗಾಗಿ ಮೇ 26ರಂದು ಸ್ಥಳೀಯ ನೂರಾರು ಮಂದಿ ಕರಸೇವಕರು ಶ್ರಮದಾನದ ಮೂಲಕ ಇದನ್ನು ಸ್ವತ್ಛಗೊಳಿಸಿದರು.
ಈ ಸಂದರ್ಭ ಸ್ಥಳೀಯ ಹತ್ತಾರು ಸಂಘಟನೆಗಳ ಸುಮಾರು 250ಕ್ಕೂ ಹೆಚ್ಚು ಸ್ವಯಂ ಸೇವಕರು ಜಾತಿ, ಧರ್ಮ, ಪಕ್ಷ, ಸಂಘಟನೆ ಬೇಧವಿಲ್ಲದೆ ಐತಿಹಾಸಿಕ ರೀತಿಯಲ್ಲಿ ಶ್ರಮದಾನ ನಡೆಸಿ ಪುಷ್ಕರಣಿಯ ಹೂಳನ್ನು ಮೇಲೆತ್ತಿದರು.
ಸ್ಥಳೀಯ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಭಟ್ ಮುಂತಾದ ಗಣ್ಯರು ನೇತೃತ್ವ ವಹಿಸಿದ್ದರು.
ಸುಮಾರು ನಲವತ್ತು ವರ್ಷದ ಹಿಂದೆ ಈ ಇತಿಹಾಸ ಪ್ರಸಿದ್ಧ ಕಲ್ಯಾಣಿಯ ಹೂಳು ತೆಗೆಯುವ ಕೆಲಸ ನಡೆದಿತ್ತು. ಇದೀಗ ಹಲವು ವರ್ಷಗಳ ಅನಂತರ ಮತ್ತೆ ಐತಿಹಾಸಿಕ ಕಾರ್ಯ ನಡೆದಿದೆ.