Advertisement

ಕೋಟ ಜೋಡಿ ಕೊಲೆ ಪ್ರಕರಣ ಜಿ.ಪಂ. ಸದಸ್ಯ ಸಹಿತ ಆರು ಮಂದಿ ಬಂಧನ

12:01 AM Feb 09, 2019 | |

ಉಡುಪಿ/ ಕೋಟ: ಕೋಟದ ಮಣೂರು ಚಿಕ್ಕನಕೆರೆಯಲ್ಲಿ ಜ.26ರಂದು ನಡೆದಿದ್ದ ಯತೀಶ್‌ ಕಾಂಚನ್‌ ಮತ್ತು ಭರತ್‌ ಶ್ರೀಯಾನ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿ.ಪಂ. ಕೋಟ ಕ್ಷೇತ್ರದ ಸದಸ್ಯ ಬಾರಿಕೆರೆ ರಾಘವೇಂದ್ರ ಕಾಂಚನ್‌ ಸಹಿತ 6 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರಿಗೆ 8 ದಿನಗಳ ಪೊಲೀಸ್‌ ಕಸ್ಟಡಿ ವಿಧಿಸಲಾಗಿದೆ,

Advertisement

ಆರೋಪಿಗಳ ವಿವರ

ಕೋಟದ ರಾಜಶೇಖರ ರೆಡ್ಡಿ(44) ಮತ್ತು ಮೆಡಿಕಲ್‌ ರವಿ (42)ಯನ್ನು ಫೆ.7ರಂದು ಮಡಿಕೇರಿಯಲ್ಲಿ ಹಾಗೂ ಹರೀಶ್‌ ರೆಡ್ಡಿ (40), ಕೊಡವೂರಿನ ಮಹೇಶ್‌ ಗಾಣಿಗ (38) ,ಲಕ್ಷ್ಮೀನಗರದ ರವಿಚಂದ್ರ ಪೂಜಾರಿ ಯಾನೆ ರವಿ (28)ಯನ್ನು ಹೊಸನಗರದಲ್ಲಿ ಫೆ.8 ರಂದು ಬಂಧಿಸಲಾಗಿದೆ. ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ (38)ನನ್ನು ಫೆ.7ರಂದು ಮನೆ ಯಲ್ಲಿ ವಶಕ್ಕೆ ತೆಗೆದುಕೊಂಡು ಮರುದಿನ ಬಂಧಿಸಿದ್ದೇವೆ. ಉಳಿದ ಆರೋಪಿಗಳ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಎಸ್‌ಪಿ ಲಕ್ಷ್ಮಣ್‌ ಬಿ.ನಿಂಬರಗಿ ತಿಳಿಸಿದ್ದಾರೆ.

ಕೋರ್ಟ್‌ನಲ್ಲಿ ಜನಸಂದಣಿ

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಬಿಗಿಭದ್ರತೆ ಏರ್ಪಡಿಸಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಕುತೂಹಲಿಗರ ಸಂಖ್ಯೆಯೂ ಸಾಕಷ್ಟಿತ್ತು. ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ ಮತ್ತು ಮೆಡಿಕಲ್‌ ರವಿ ಮುಖಕ್ಕೆ ಕಪ್ಪು ಮುಸುಕು ಹಾಕಲಾಗಿತ್ತು.

Advertisement

ತಲವಾರು ಪತ್ತೆ

ಶುಕ್ರವಾರ ನ್ಯಾಯಾಲಯಕ್ಕೆ ಹಾಜ ರುಪಡಿಸುವ ಮುನ್ನ ಪ್ರಮುಖ ಆರೋಪಿಗಳಾದ ರಾಜಶೇಖರ ರೆಡ್ಡಿ ಹಾಗೂ ರವಿಯನ್ನು ಘಟನಾ ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾ ಯಿತು. ಕೃತ್ಯಕ್ಕೆ ಬಳಸಿದ್ದ ತಲವಾರನ್ನು ಬಾಳೆಬೆಟ್ಟು ತಿರುವಿನ ಪೊದೆಯೊಂದರಲ್ಲಿ ಪತ್ತೆ ಹಚ್ಚಿ ವಶಪಡಿಸಿಕೊಳ್ಳಲಾಯಿತು.

ಪಿಟ್ ವಿವಾದ ಮಾತ್ರ ಕಾರಣವಲ್ಲ

ಕೊಲೆಗೆ ಕೇವಲ ಶೌಚಾಲಯದ ಗುಂಡಿ ವಿವಾದ ಮಾತ್ರ ಕಾರಣವಲ್ಲ. ಇನ್ನಷ್ಟು ವಿವಾದಗಳು ಈ ಕೃತ್ಯದ ಹಿಂದಿರುವ ಸಾಧ್ಯತೆಗಳಿದ್ದು, ಅವುಗಳು ಮುಂದಿನ ತನಿಖೆಯಿಂದಷ್ಟೆ ತಿಳಿದು ಬರಬೇಕಾಗಿದೆ ಎಂದು ಉನ್ನತ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪಾತಕ ಹಿನ್ನೆಲೆ

ರಾಜಶೇಖರ ರೆಡ್ಡಿ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿವೆ. ಹರೀಶ್‌ ರೆಡ್ಡಿ ವಿರುದ್ಧ ನಗರ ಠಾಣೆಯಲ್ಲಿ 2005ರ ಕೊಲೆ ಪ್ರಕರಣ ಸಹಿತ ಸುಮಾರು 7 ಪ್ರಕರಣಗಳಿವೆ. ಇವರು ಸಹೋದರರಾಗಿದ್ದು ಭೂ ಹಾಗೂ ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಮಹೇಶ್‌ ಕುಮಾರ್‌ ವಿರುದ್ಧ ಮಣಿಪಾಲ ಠಾಣೆ ಯಲ್ಲಿ 1 ಪ್ರಕರಣವಿದೆ ಹಾಗೂ ರಾಘವೇಂದ್ರ ಕಾಂಚನ್‌ ವಿರುದ್ಧ ಕೂಡ ಕೋಟ ಠಾಣೆಯಲ್ಲಿ ಹಿಂದೆ ಪ್ರಕರಣಗಳು ದಾಖಲಾಗಿದ್ದವು.

ಬಂಧನಕ್ಕೆ ಬಾಕಿ

ಪ್ರಕರಣಕ್ಕೆ ಸಂಬಂಧಿಸಿ ಚಂದ್ರಶೇಖರ್‌ ರೆಡ್ಡಿ, ಸುಜಯ್‌ ಸಹಿತ ಇನ್ನೂ ಹಲವರ ಬಂಧನವಾಗಬೇಕಿದೆ.

5 ತಂಡದಿಂದ ಕಾರ್ಯಾಚರಣೆ

ಡಿವೈಎಸ್‌ಪಿ ಜೈಶಂಕರ್‌ ನೇತೃತ್ವದಲ್ಲಿ ಡಿಸಿಐಬಿ ಇನ್‌ಸ್ಪೆಕ್ಟರ್‌ ಕಿರಣ್‌, ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್‌, ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಮತ್ತು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ ಸಂಪತ್‌ ಕುಮಾರ್‌ ಅವರ ನೇತೃತ್ವದಲ್ಲಿ ಒಟ್ಟು 5 ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದೆ.

ಪ್ರತಿಭಟನೆಯಲ್ಲೂ ಭಾಗಿಯಾಗಿದ್ದ !

ಪ್ರಮುಖ ಆರೋಪಿ ರಾಜಶೇಖರ್‌ ರೆಡ್ಡಿ ಮತ್ತು ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌ ನಡುವೆ ಜ.23ರಿಂದ ನಿರಂತರ ಮೊಬೈಲ್‌ ಸಂಭಾಷಣೆ ನಡೆದಿತ್ತು. ಅನುಮಾನಗೊಂಡು ತನಿಖೆ ನಡೆಸಿದಾಗ ಕೃತ್ಯದಲ್ಲಿ ಕಾಂಚನ್‌ ಭಾಗಿಯಾಗಿರುವುದು ತಿಳಿದು ಬಂದಿದೆ. ಆದರೆ ಕಾಂಚನ್‌ ಪಾತ್ರ ಎಂಥದ್ದು ಎಂಬುದು ಸ್ಪಷ್ಟವಾಗಿಲ್ಲ. ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿನ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಫೆ.3ರಂದು ಕೋಟ ಬಸ್ಸು ನಿಲ್ದಾಣದ ಬಳಿ ನಡೆದಿದ್ದ ಪ್ರತಿಭಟನೆಯಲ್ಲಿ ಆರೋಪಿ ರಾಘವೇಂದ್ರ ಕಾಂಚನ್‌ ಭಾಗವಹಿಸಿದ್ದ.

ಗುಂಪು ಚದುರಿಸಲು ಸಾಕ್ಷಿ ಅಸ್ತ್ರ !

ಶುಕ್ರವಾರ ಕೋಟದಲ್ಲಿ ಮಹಜರು ನಡೆಸುವ ವಿಚಾರವನ್ನು ಗೌಪ್ಯವಾಗಿಡ ಲಾಗಿತ್ತು. ಆದರೆ ಆರೋಪಿಗಳನ್ನು ಸ್ಥಳಕ್ಕೆ ಕರೆ ತರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ನೆರೆದರು. ಜನದಟ್ಟಣೆ ಹೆಚ್ಚುತ್ತಿದ್ದಂತೆ ಅವರನ್ನು ಚದುರಿಸುವ ಸಲುವಾಗಿ ಪೊಲೀಸರು, ಘಟನೆಯ ಕುರಿತು ಸಾಕ್ಷಿ ಬೇಕಿದೆ. ಯಾರಿಗಾದರೂ ಮಾಹಿತಿ ಇದ್ದರೆ ಬಂದು ಸಾಕ್ಷಿ ಹೇಳಿ ಎಂದು ಕೂಗಿ ಹೇಳಿದರು. ಆಗ ಗುಂಪು ಸೇರಿದವರು ಒಬ್ಬೊಬ್ಬರಾಗಿ ಸ್ಥಳದಿಂದ ಕಾಲ್ಕಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next