Advertisement
ಹಾವೇರಿಯ ಶಿಗ್ಗಾವಿ ತಾಲೂಕಿನ ಶಂಕರಪ್ಪ-ಚೆನ್ನಪ್ಪ ಮತ್ತು ತಂಡದವರು ಈ ರೀತಿಯ ಕಲೆಯನ್ನು ವಂಶ ಪಾರಂಪರ್ಯವಾಗಿ ತಪ್ಪದೇ ಮುಂದುವರಿಸಿಕೊಂಡು ಬಂದಿದ್ದಾರೆ. ಅತ್ಯಂತ ಸುಶ್ರಾವ್ಯವಾಗಿ ಹಾಡುವ ಇವರಲ್ಲಿ ಬಹುತೇಕರು ಹಿರಿಯರು ಹಾಡುವುದನ್ನು ಕೇಳಿಕೊಂಡು, ಮನೆಯಲ್ಲಿರುವ ಹಾರ್ಮೋನಿಯಂ, ತಬಲಗಳನ್ನು ನುಡಿಸುತ್ತ ಹಾಡುಗಾರರಾಗಿದ್ದಾರೆ. ಇವರು ಹೇಳುವ ಪ್ರಕಾರ ಕೆಲವು ದಶಕದ ಹಿಂದೆ ಅಲ್ಲಿನ ಒಂದು ಗ್ರಾಮದಲ್ಲೇ ಹತ್ತಾರು ಈ ರೀತಿ ತಂಡಗಳಿದ್ದವು. ಈಗೀಗ ಯುವ ಪೀಳಿಗೆ ಶಿಕ್ಷಣ, ಉನ್ನತ ಉದ್ಯೋಗ ಆರಿಸಿಕೊಂಡಿದ್ದಾರೆ. ಊರೂರು ಅಲೆದು ಹಾಡು ಹೇಳುವುದರ ಬದಲಿಗೆ ಶಾಸ್ತ್ರೀಯವಾಗಿ ಕಲಿತು ಕಛೇರಿಗಳನ್ನು ನೀಡುತ್ತಾರೆ.
ನಾವು ಹಣಕ್ಕಾಗಿ ಈ ವೃತ್ತಿ ಮಾಡುತ್ತಿಲ್ಲ. ಮನೆಯಲ್ಲೂ ಈಗೀಗ ಬೇಡ ಅನ್ನುತ್ತಾರೆ. ಆದರೆ, ವಚನ, ಕಲೆಯ ಮೂಲಕ ಜನಜಾಗೃತಿ ಮೂಡಿಸುತ್ತಿದ್ದ ಬಹುರೂಪಿ ಚೌಡಯ್ಯನ ಪರಂಪರೆ ಮುಂದುವರಿಸುತ್ತಿದ್ದೇವೆ. ಹಿರಿಯರ ಪರಂಪರೆ ನಮ್ಮ ಕಾಲದ ತನಕವಾದ್ರು ಮುಂದುವರಿಸಬೇಕು ಎನ್ನುವ ಕಾರಣಕ್ಕೆ ನಾವಿದನ್ನ ಮಾಡುತ್ತೇವೆ ಎನ್ನುತ್ತಾರೆ ಹಾಡುಗಾರರು. ಉಡುಪಿ ಜತೆ ಉತ್ತಮ ನಂಟು
ಬೇರೆ-ಬೇರೆ ಜಿಲ್ಲೆಗಳಿಗೆ ತೆರಳಲು ಅವಕಾಶವಿದ್ದರೂ ಇವರಿಗೆ ಮಾತ್ರ ಕರಾವಳಿಯ ಮೇಲೆ ಇನ್ನಿಲ್ಲದ ಪ್ರೀತಿ. ಹೀಗಾಗಿ ಬೈಂದೂರಿನಿಂದ ಹಿಡಿದು ಕುಂದಾಪುರ, ಬ್ರಹ್ಮಾವರ, ಉಡುಪಿ ತನಕ ಮನೆ-ಮನೆಗೆ ಭೇಟಿ ನೀಡುತ್ತಾರೆ. ಮೊದಲೆಲ್ಲ ದೇಗುಲದ ಜಗಳಿಯಲ್ಲಿ ಮಲಗಿ, ಬೆಳಗ್ಗೆ ಎದ್ದು ಮನೆ-ಮನೆಗೆ ತಿರುಗುತ್ತಿದ್ದರು. ಆದರೆ ಈಗ ಕಾಲಬದಲಾಗಿದೆ. ಯಾವುದಾದರು ಒಂದು ಕಡೆ ರೂಮ್ ಬಾಡಿಗೆಗೆ ಪಡೆದು ವಾಸ್ತವ್ಯವಿರುತ್ತಾರೆ. ಇಲ್ಲಿನ ಚೌತಿ, ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಅವರಿಂದ ಹಾಡಿಸುವುದುಂಟು.
Related Articles
ನಾವು ಎಲ್ಲ ಅಂಗಡಿ, ಮನೆಗಳಿಗೆ ಹೋಗುವುದಿಲ್ಲ. ಗೌರವ ನೀಡುವವರನ್ನ, ನಮ್ಮೊಳಗಿರುವ ಸಂಗೀತ ಕಲೆಗೆ ಬೆಲೆ ಕೊಡುವವರನ್ನ ಆಯ್ಕೆ ಮಾಡಿಕೊಂಡು ಹಾಡು ಹೇಳುತ್ತೇವೆ. ಕೆಲವು ಮಂದಿ ಚಿಲ್ಲರೆ ಹಣ ಕೊಡುತ್ತಾರೆ. ಇನ್ನು ಕೆಲವರು ನೂರಾರು ರೂ. ಕೊಡುತ್ತಾರೆ. ಹಣ ಎಷ್ಟು ಕೊಡ್ತಾರೆ ಎನ್ನುವುದು ಮುಖ್ಯವಲ್ಲ. ನಮ್ಮನ್ನ ಗೌರವದಿಂದ ಕಂಡರೆ, ಚೆಂದದಿಂದ ಮಾತನಾಡಿದರೆ ಅದೇ ಖುಷಿ.
-ಚೆನ್ನಪ್ಪ, ಹಾವೇರಿ, ಹಾಡುಗಾರ ತಂಡದ ಸದಸ್ಯ
Advertisement
-ರಾಜೇಶ್ ಗಾಣಿಗ ಅಚ್ಲಾಡಿ