Advertisement

ಶಿಷ್ಯನ ಬಯಸುತ್ತ ಬಂದ ಕೌಶಿಕ ಮುನಿ 

06:00 AM Aug 05, 2018 | |

ಇಲ್ಲಿಯವರೆಗೆ…
ವಿಶ್ವಾಮಿತ್ರರೇ ಹಾಗೆ, ಅದೃಷ್ಟ ತನಗೆ ಒಲಿದು ಬರಲಿ ಎಂದು ಕಾದು ಕುಳಿತವರೇ ಅಲ್ಲ ಅವರು. ಅದೃಷ್ಟವನ್ನೇ ಕಾಯಿಸಿ ಕರಗಿಸಿ, ಅದು ತನ್ನತ್ತ ಹರಿದು ಬರುವಂತೆ ಮಾಡಬಲ್ಲ ಅಸಾಧಾರಣ ಕತೃìತ್ವ ಶಕ್ತಿಯುಳ್ಳ ಮನುಷ್ಯ ಅವರು. ಹಾಗೆಂದೇ “ವಿಶ್ವಾಮಿತ್ರ ಸೃಷ್ಟಿ’ ಎಂಬ ಜನಪ್ರಿಯ ಪರಿಕಲ್ಪನೆ ಈ ಜಗತ್ತಿನಲ್ಲಿ ಪ್ರಚಲಿತವಿರುವುದು. ಅವರು ರಾಮನನ್ನು ಅರಸುತ್ತ ಬಂದರು. ಅವನಲ್ಲಿರುವ ಅಸಾಧಾರಣ ಸಾಧ್ಯತೆಗಳನ್ನು ಗುರುತಿಸಿ, ಅವನಿಗೆ ಪುರುಷಪ್ರಯತ್ನದ ಪ್ರಾಥಮಿಕ ತರಬೇತಿ ನೀಡಿದರು.

Advertisement

ವಿಚಿತ್ರ ಧೈರ್ಯ ವಿಶ್ವಾಮಿತ್ರರದ್ದು! ಬದುಕಿನ ಒಂದು ಘಟ್ಟದಲ್ಲಿ ಅವರಿಗನ್ನಿಸಿಬಿಟ್ಟಿತು, ತನ್ನ  ಕತೃತ್ವಶಕ್ತಿಯೇ ತನ್ನ ಅಹಂಕಾರವೂ ಹೌದು ಎಂದು. ಸರಿ, ಹಠ ಹಿಡಿದರು. ದೀರ್ಘ‌ಕಾಲ ತಪಸ್ಸು ಮಾಡಿದರು. ಮತ್ತೆ ಮತ್ತೆ ಸೋತರು. ಆದರೆ, ಅಹಂಕಾರ ಮೀರುವಲ್ಲಿ, ಕಡೆಗೂ ಗೆದ್ದರು. ಅದನ್ನು  ಬುಡಸಹಿತ ಕಿತ್ತೆಸೆದರು. ಈಗವರು ಕತೃìತ್ವಶಾಲಿಯೂ ಹೌದು, ಒಬ್ಬ ಸನ್ಯಾಸಿಯೂ ಹೌದು! ಹಾಗೆಂದೇ ಯುವಕರಿಗೆ ಮುಂದಾಳು ಮಹರ್ಷಿ ವಿಶ್ವಾಮಿತ್ರರು.

ಆಗಿನ್ನೂ ಅವರು ಮಹರ್ಷಿಗಳಾಗಿರಲಿಲ್ಲ. ಕೇವಲ ಮಹಾರಾಜರಾಗಿ ದ್ದರು. ಮಹಾರಾಜ ವಿಶ್ವಾಮಿತ್ರರು, ಒಮ್ಮೆ ಪ್ರವಾಸದಲ್ಲಿರುವಾಗ, ಒಂದು ದಿನ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಸೌಜನ್ಯದ ಭೇಟಿ ನೀಡಿದರು. ವಸಿಷ್ಠರೂ, ಅಷ್ಟೇ ಸೌಜನ್ಯದಿಂದ, ವಿಶ್ವಾಮಿತ್ರರನ್ನು ಬರಮಾಡಿಕೊಂಡರು. ಸೌಜನ್ಯದ ಮಾತುಗಳು ಮುಗಿದ ನಂತರ, “ಊಟ ಮಾಡಿಕೊಂಡು ಹೋಗಿ’ ಎಂದು ಆಮಂತ್ರಿಸಿದರು. ಬಡ ಸನ್ಯಾಸಿಯ ಮೇಲೆ ಭಾರಿ ಪರಿವಾರದ ಭಾರ ಹೇರುವುದು ಉಚಿತವಲ್ಲ ಅನ್ನಿಸಿ ವಿಶ್ವಾಮಿತ್ರರು, “ಬೇಡ ವಸಿಷ್ಠರೇ, ತೊಂದರೆ ತೆಗೆದುಕೊಳ್ಳಬೇಡಿ. ನಾವು ಸ್ಥೂಲ ಕಾಯರಿದ್ದಂತೆ. ನಮ್ಮದು ದೊಡ್ಡ ಪರಿವಾರ. ನೂರಾರು ಜನ ಕಾಲಾಳುಗಳು ಸೈನಿಕರು ನನ್ನ ಜೊತೆಗಿದ್ದಾರೆ’ ಅಂದರು. ವಸಿಷ್ಠರು, ಒಂದು ಚೂರೂ ವಿಚಲಿತರಾಗದೆ, “ಚಿಂತೆಯಿಲ್ಲ, ಅವರೆಲ್ಲರೂ ಊಟ ಮಾಡಿಕೊಂಡು ಹೋಗಲಿ’ ಅಂದುಬಿಟ್ಟರು. ಅಂದದ್ದು ಮಾತ್ರವಲ್ಲ, ಕ್ಷಣಮಾತ್ರದಲ್ಲಿ, ಭೂರಿಬೋಜನವನ್ನು ಸಿದ್ಧಗೊಳಿಸಿ ಎಲ್ಲರಿಗೂ ತೃಪ್ತಿಯಾಗುವಂತೆ ಬಡಿಸಿಯೂ ಬಿಟ್ಟರು.

“ಎಲಾ ಇವನಾ! ಹೇಗಾಯಿತು ಈ ಪವಾಡ’ ಎಂದು ಹುಡುಕಿದರು ವಿಶ್ವಾಮಿತ್ರರು! ವಸಿಷ್ಠರ ಕೊಟ್ಟಿಗೆಯಲ್ಲಿತ್ತು ಪವಾಡ ಸದೃಶವಾದ ಹಸು, ಕಾಮಧೇನು. ವಿಶ್ವಾಮಿತ್ರರಿಗೆ ಕಾಮಧೇನುವಿನ ಮೇಲೆ ಮನಸ್ಸಾಯಿತು. ಕೇಳಿದರು. “ಪ್ರತಿಯಾಗಿ ಏನು ಬೇಕಾದರೂ ಕೇಳಿರಿ ವಶಿಷ್ಠರೇ, ಕೊಡುವೆ, ಕಾಮಧೇನುವನ್ನು ನನಗೆ ಕೊಡಿರಿ’ ಅಂದರು. “ಕಾಮಧೇನು ಬರಲಾರಳು’ ಎಂದು ಸಂಕ್ಷಿಪ್ತ ಉತ್ತರ ನೀಡಿದರು ವಶಿಷ್ಠರು. ಆಗದು ಎಂಬ ಮಾತೇ ತಿಳಿಯದ ವಿಶ್ವಾಮಿತ್ರರಿಗೆ ಹಟಬಂತು. ಅದು ಹೇಗೆ ಬರಲಾರಳು, ತಾನು ಕರೆದರೆ, ಎಂಬ ಅಹಂಕಾರ ಮೂಡಿಬಂತು. ವಶಿಷ್ಟರೊಟ್ಟಿಗಿನ ಮಾತಿನ ಜಗ್ಗಾಟ ಫ‌ಲ ನೀಡದಿದ್ದಾಗ, ಹಸುವನ್ನು ಬಲವಂತದಿಂದ ಎಳೆದೊಯ್ಯು ವಂತೆ ಸೈನಿಕರಿಗೆ ಆಜ್ಞೆ ಮಾಡಿದರು. ಯುದ್ಧವಾಯಿತು. ಒಂದೇ ಒಂದು ಬಾಣಬಿಡದೆ, ಒಮ್ಮೆಯೂ ಕತ್ತಿ ಬೀಸದೆ, ಯುದ್ಧದಲ್ಲಿ ಗೆದ್ದರು ಬಡಪಾಯಿ ವಸಿಷ್ಠರು. ಅದು ಸಾಧ್ಯವಾದದ್ದು ಕಾಮಧೇನುವಿನಿಂದಲೇ.

ಹಟಕ್ಕೆ ಬಿದ್ದ ವಿಶ್ವಾಮಿತ್ರರು, ಹಟದ ದಾರಿ ಹಿಡಿದೇ ವೈರಾಗ್ಯ ಸಾಧಿಸಿದ ಕತೆ ತುಂಬ ಸ್ವಾರಸ್ಯಕರವಾದದ್ದು. ಮತ್ತೆಮತ್ತೆ ಸೋತದ್ದು, ಪ್ರತಿಬಾರಿ ಸೋತಾಗಲೂ ಸೋಲಿನಿಂದ ಕಲಿತದ್ದು, ಕಡೆಗೊಮ್ಮೆ ಅವರು ಪರಿಪೂರ್ಣ ಅರಿವನ್ನು ಸಾಧಿಸಿದ್ದು ನಿಜಕ್ಕೂ ಅಸಾಧಾರಣ. ಒಮ್ಮೆ ಅವರ ಸೋಲಿಗೆ ಕಾರಣರಾದವರ ಪಟ್ಟಿಯಲ್ಲಿ ದೇವಕನ್ನಿಕೆ ಮೇನಕೆಯೂ ಒಬ್ಬಳು. ಅಪ್ರತಿಮ ಸುಂದರಿ ಆಕೆ. ಅವಳೊಂದಿಗೆ ಸಂಸಾರ ಮಾಡಿದರು, ಶಾಕುಂತಲೆಯನ್ನು ಮಗಳನ್ನಾಗಿ ಪಡೆದರು. ಎರಡನೆಯ ಬಾರಿ ಅವರನ್ನು ವಿಚಲಿತರನ್ನಾಗಿ ಮಾಡಲು ಬಂದ ರಂಭೆಗೆ ಶಾಪವಿತ್ತರು. ಆದರೆ, ಈ ಬಾರಿ ತಪಸ್ಸನ್ನು ಸಿಟ್ಟಿಗೆ ಬಲಿಯಿತ್ತರು. ಆದರೆ, ಬಿಡದೆ ಗೆದ್ದರು.

Advertisement

ವಶಿಷ್ಠ ಹಾಗೂ ವಿಶ್ವಾಮಿತ್ರರ ನಡುವಿನ ಸ್ಪರ್ಧೆ ಕೂಡ ವಿಶೇಷವಾದದ್ದು. ಕಟ್ಟುವ ಸ್ಪರ್ಧೆಯಾಗಿರಲಿಲ್ಲ ಅದು, ಕಳಚುವ ಸ್ಪರ್ಧೆಯಾಗಿತ್ತು. ಕಳಚಲಿಕ್ಕೆ ಧಾರಾಳವಾಗಿ ಇದ್ದವರು ವಿಶ್ವಾಮಿತ್ರರು. ಹಾಗಾಗಿ, ವಸಿಷ್ಟರು ಅರಿವಿಗೆ ರೂಪಕವಾದರೆ, ವಿಶ್ವಾಮಿತ್ರರು ಪುರುಷಪ್ರಯತ್ನಕ್ಕೆ ರೂಪಕವಾದರು. 

ಕಾಮಧೇನುವೂ ಒಂದು ರೂಪಕವೇ. ಭಾರತೀಯ ಕೃಷಿಪದ್ಧತಿಯಲ್ಲಿ ಹಸು ಹಾಗೂ ಎತ್ತುಗಳಿಗೆ ಇರುವ ಪ್ರಾಮುಖ್ಯಕ್ಕೆ ರೂಪಕಳು ಇವಳು. ಭಾರತದ ಕೃಷಿಪದ್ಧತಿ ಹೈನುಗಾರಿಕೆ ಹಾಗೂ ಗ್ರಾಮೀಣ ಜೀವನಶೈಲಿಗಳು ಈಕೆಯ ಸುತ್ತ ಸುತ್ತುತ್ತ ಬಂದಿವೆ. ಬಲಾತ್ಕಾರದಿಂದ ಪಡೆಯುವುದೇ ಆದರೆ, ಭಾರತೀಯರ ಮಟ್ಟಿಗೆ ಚಿನ್ನಕ್ಕಿಂತ ಮಿಗಿಲಾದ ಆಸ್ತಿ ಈಕೆ. ಇರಲಿ, ವಿಶ್ವಾಮಿತ್ರ ಗಾಥೆ ಮುಂದುವರೆಸೋಣ. ವಿಶ್ವಾಮಿತ್ರರು, ತಾನೇ ತಾನಾಗಿ, ರಾಮನತ್ತ ಹರಿದು ಬಂದರು ಎಂದೆ. ತ‌ಣ್ಣನೆಯ ನೀರಿನಂತೆ ಬರಲಿಲ್ಲ ಅವರು. ಬೆಂಕಿಯ ರಸದಂತೆ ಹರಿದು ಬಂದರು. ದಶರಥ ಹೆದರಿ ನಡುಗಿ ಬಿಟ್ಟ ಲಾವಾರಸದಂತಹ ಮುನಿವರನನ್ನು ಕಂಡು. ಅದು ಹೀಗಾಯಿತು.
.
ಅಂದು ಮಧ್ಯಾಹ್ನ ಅಯೋಧ್ಯೆ: ಉಂಡ ಊಟದ ಪರಿಣಾಮವೋ ಅಥವಾ ಕೈಗೆತ್ತಿಕೊಂಡಿದ್ದ ಸಮಸ್ಯೆ ಅಂತಹಧ್ದೋ, ಅಂತೂ, ಮಧ್ಯಾಹ್ನದ ರಾಜಸಭೆ ನೀರಸವಾಗಿ ತೆವಳುತ್ತಿತ್ತು. ದಶರಥ ಮಹಾರಾಜ ಸಿಂಹಾಸನದಲ್ಲಿ ಕುಳಿತು ಆಕಳಿಕೆಗಳನ್ನು ತಡೆಹಿಡಿಯುವ ಪ್ರಯತ್ನ ನಡೆಸಿದ್ದ. ಹೆಚ್ಚಿನ ಸಭಾಸದರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನಿರಲಿಲ್ಲ. ಆಗ ಬಡಿದೆಬ್ಬಿಸಿದಂತೆ ಬಂದಿತು, ವಿಶ್ವಾಮಿತ್ರರ ಆಗಮನದ ಸುದ್ದಿ. ಯಾವ ಪೂರ್ವಸೂಚನೆಯೂ ಇರದೇ ಬಂದಿದ್ದರು ವಿಶ್ವಾಮಿತ್ರರು. 

ದ್ವಾರಪಾಲಕರು ಸಾಮಾನ್ಯವಾಗಿ, ಸಾಮಾನ್ಯರನ್ನು ತಡೆಹಿಡಿದು, ನಿಧಾನಗತಿಯ ತಂತ್ರ ಅನುಸರಿಸಿ ಗೋಳುಹುಯ್ದುಕೊಳ್ಳುತ್ತಾರೆ. ಇಂದು ಮಾತ್ರ, ಬಿಟ್ಟಬಾಣದಂತೆ, ಸಭೆಯ ಶಿಷ್ಟಾಚಾರಗಳನ್ನೆಲ್ಲ ಬದಿಗೊತ್ತಿ ಓಡಿಬಂದಿದ್ದ ದ್ವಾರಪಾಲಕ. ಏದುಸಿರು ಬಿಡುತ್ತಿದ್ದ ಅವನು. ಅವನ ಭಾÅಂತ ಮುಖದಲ್ಲಿ ಆಶ್ಚರ್ಯ-ಉದ್ವೇಗ-ಆತಂಕ ಇತ್ಯಾದಿ, ತದ್ವಿರುದ್ಧದ ಹಲವು ಭಾವನೆಗಳು ಮನೆಮಾಡಿ ಮುಖವನ್ನು ವಿರೂಪಗೊಳಿಸಿತ್ತು.

“ಪ್ರಭುಗಳೇ! ಗಾಧಿ ಪುತ್ರ ಕೌಶಿಕರು, ಅಂದರೆ ಸಾûಾತ್‌ ವಿಶ್ವಾಮಿತ್ರರು ಬಂದಿದ್ದಾರೆ. ಬಂದಿದ್ದಾರೆ ಮಾತ್ರವಲ್ಲ, ಬಂದಿದ್ದೇನೆ ಎಂದು ತಿಳಿಸು, ಈಗಿಂದೀಗಲೇ ತಿಳಿಸು ಎಂದು ಸಾರಿ ಬಾಗಿಲ ಬಳಿ ಕಾಯುತ್ತ, ಶತಪಥ ತಿರುಗುತ್ತ, ನಿಂತಿದ್ದಾರೆ. ಏನು ಹೇಳಲಿ ಪ್ರಭು’-“ಏನೂ ಹೇಳಬೇಡ! ಅತ್ತ ಸರಿ ಸಾಕು’ದಶರಥ ಮಹಾರಾಜ ಗದರಿ, ಗಡಬಡಿಸಿ, ಸಿಂಹಾಸನದಿಂದ ಮೇಲೆದ್ದು ಬಾಗಿಲಿನತ್ತ ಧಾವಿಸಿದ. ಹೋಗುವ ದಾರಿಯಲ್ಲಿ, “ಬನ್ನಿ ವಶಿಷ್ಟರೇ, ಅಷ್ಟೂ ತಿಳಿಯುವುದಿಲ್ಲವೆ ನಿಮಗೆ’ ಎಂದು ಅನಗತ್ಯವಾಗಿ, ಈಗಾಗಲೇ ತನ್ನನ್ನು ಹಿಂಬಾಲಿಸಿದ್ದ ವಶಿಷ್ಟರನ್ನು, ಅವಸರಿಸಿದ್ದ. ಆದರೆ, ವಿಶ್ವಾಮಿತ್ರರು ಕೋಪದಲ್ಲಿರಲಿಲ್ಲ, ಉತ್ಸಾಹದಲ್ಲಿದ್ದರು. ಶತಪಥ ತಿರುಗುತ್ತಿದ್ದವರು ದಶರಥನನ್ನು ಕಂಡದ್ದೇ ನಿಂತರು. ನಗುಮುಖದಿಂದ ರಾಜನನ್ನು ಮಾತನಾಡಿಸಿದರು. ಆರೋಗ್ಯ, ಆಡಳಿತ, ಮಳೆಬೆಳೆ, ಶತ್ರುಧಾಳಿ- ಇತ್ಯಾದಿ ಎಲ್ಲ ವಿಷಯಗಳನ್ನೂ ಕೂಲಂಕಶವಾಗಿ ವಿಚಾರಿಸಿದರು. ನಂತರ ವಶಿಷ್ಟರತ್ತ ತಿರುಗಿ, ಅವರನ್ನು ಮಾತನಾಡಿಸಿದರು. ಇಂದಿನ ಅವರಿಬ್ಬರ ಆತ್ಮೀಯತೆಯನ್ನು ಕಂಡವರಿಗೆ, ಅಷ್ಟೆಲ್ಲ ಹಗೆಸಾಧಿಸಿದವರು ಇವರೇ ಎಂಬ ಅನುಮಾನ ಬರುವಂತಿತ್ತು. ಮುನಿಗಳು ಮಾತು ಮುಗಿಸುವುದನ್ನೇ ಕಾದಿದ್ದ ದಶರಥ, “ಬನ್ನಿ ಬನ್ನಿ’ ಎನ್ನುತ್ತ, ತಗ್ಗಿಬಗ್ಗಿ ನಡೆಯುತ್ತ, ವಿಶ್ವಾಮಿತ್ರರನ್ನು ಒಳಕ್ಕೆ ಕರೆದೊಯ್ದ. ಈಗಾಗಲೇ ಕಾದು ನಿಂತೇ ಇದ್ದ ರಾಜಸಭೆ, ನಿಂತಲ್ಲಿಂದಲೇ ನಮಸ್ಕರಿಸಿ ಸ್ವಾಗತಿಸಿತು. ವಿಶ್ವಾಮಿತ್ರರು ಕುಳಿತ ನಂತರ ಮಿಕ್ಕವರು ಕುಳಿತರು. ದಶರಥ ಮುನಿಗಳನ್ನು ಹೊಗಳತೊಡಗಿದ.

“ಮಹಾಮುನಿಯೇ, ತಾವು ಬಂದದ್ದು, ಮರ್ತ್ಯನಿಗೆ ಅಮೃತ ಸಿಕ್ಕಂತಾಗಿದೆ. ಮರುಭೂಮಿಯಲ್ಲಿ ಮಳೆಯಾದಂತಾಗಿದೆ. ಸಂತಾನಹೀನನ ಪತ್ನಿಗೆ ಪುತ್ರಸಂತಾನವಾದಂತಾಗಿದೆ, ಎಂದೋ ಕಳೆದುಹೋಗಿದ್ದ ನಿಧಿಯು ಇಂದು ಮರಳಿಸಿಕ್ಕಂತಾಗಿದೆ’ ಎಂಬಿತ್ಯಾದಿಯಾಗಿ ವಿಶ್ವಾಮಿತ್ರರನ್ನು ಸ್ತುತಿಸಿ ಹೇಳಿ, “ಯಾವ ಕಾರಣಕ್ಕಾಗಿ ನೀವಿತ್ತ ಬಂದಿರಿ? ಅದಾವ ಕಾಮನೆ ಪೂರ್ತಿಗೊಳ್ಳದೆ ಉಳಿದಿದೆ ನಿಮ್ಮ ಮನದಲ್ಲಿ? ಸಂಕೋಚವಿಲ್ಲದೆ ಹೇಳಿ. ಶಿರಾಸಾವಹಿಸಿ ನಡೆಸಿಕೊಡಲಿಕ್ಕೆ ಬದ್ಧವಾಗಿದ್ದೇನೆ ನಾನು. ತಾವೋ ರಾಜರ್ಷಿಯಾಗಿದ್ದವರು, ನಂತರದಲ್ಲಿ ಬ್ರಹ್ಮರ್ಷಿಯಾದವರು. ತಮ್ಮ ಆಗಮನದ ಉದ್ದೇಶ ತಿಳಿಸಿರಿ ಸಾಕು, ಕಾರ್ಯ ಸಿದ್ಧಿಸುವುದೋ ಇಲ್ಲವೋ ಎಂಬ ಶಂಕೆ ಕಿತ್ತೂಗೆಯಿರಿ’ ಎಂದು ಕೇಳುವುದಕ್ಕೂ ಮುಂಚೆಯೆ ಆಶ್ವಾಸನೆ ನೀಡತೊಡಗಿದನು.

ಪೂರ್ವಾಪರಗಳನ್ನು ಯೋಚಿಸದೆ ಆಶ್ವಾಸನೆಗಳನ್ನು ನೀಡುವುದು ದಶರಥನ ಒಂದು ದೌರ್ಬಲ್ಯ. ಈ ದೌರ್ಬಲ್ಯದಿಂದಾಗಿ ಅವನು ಅನೇಕ ಬಾರಿ ಪೇಚಿಗೆ ಸಿಲುಕಿದ್ದಾನೆ. ಈಗಲೂ ಹಾಗೆಯೇ ಆಯಿತು. ವಿಶ್ವಾಮಿತ್ರರು ತಣ್ಣನೆ, “ನಿನ್ನ ಮಗನನ್ನು ನನ್ನೊಟ್ಟಿಗೆ ಕಳುಹಿಸು’ ಎಂದರು. ದಶರಥನ ಎದೆ “ಧಸಕ್‌’ ಎಂದಿತು. “ಏನಂದಿರಿ!’ ದಶರಥ ಗಾಬರಿಯಿಂದ ಕೇಳಿದ.

“ದಶರಥ ಮಹಾರಾಜ, ನಾನು ಯಜ್ಞವೊಂದನ್ನು ನಡೆಸುತ್ತಿದ್ದೇನೆ. ರಾಕ್ಷಸರು ಯಜ್ಞಕ್ಕೆ ವಿಘ್ನ ತಂದೊಡ್ಡುತ್ತಿದ್ದಾರೆ. ಶಾಪನೀಡಿ ನಿವಾರಿಸಬಲ್ಲೆ ರಾಕ್ಷಸಬಾಧೆಯನ್ನು, ಆದರೆ, ಹಾಗೆ ಮಾಡಲಾರೆ. ಕೋಪಗೊಳ್ಳದೆ ಉಳಿಯುವುದು ಈ ಯಜ್ಞದ ಒಂದು ದೀಕ್ಷೆಯಾಗಿದೆ. ಹಾಗಾಗಿ, ಕಳುಹಿಸು, ನಿನ್ನ ಹಿರಿಯ ಮಗನನ್ನು ನನ್ನೊಟ್ಟಿಗೆ’ ಅಂದರು. ಮಹಾರಾಜ ತೊದಲತೊಡಗಿದ.

“ವಿಶ್ವಾಮಿತ್ರರೇ, ನನ್ನ ಪ್ರಾಣವನ್ನು ಬೇಕಾದರೂ ಕೊಟ್ಟೇನು, ಆದರೆ-‘”ನಿನ್ನ ಮಗ ಮಧ್ಯಬೈತಲೆ ತೆಗೆದು ಜಡೆ ಹೆಣೆದುಕೊಳ್ಳುವ ಬಾಲಕನೆಂಬ ಹೆದರಿಕೆ ನಿನಗೆ. ಹಾಗೆ ಹೆದರದಿರು. ಅವನು ಈ ಕೆಲಸವನ್ನು ಖಂಡಿತವಾಗಿ ಮಾಡಬಲ್ಲನು. ಇಷ್ಟಕ್ಕೂ ಅವನ ಬೆನ್ನಿಗೆ ನಾನಿರುತ್ತೇನೆ, ನನ್ನಲ್ಲಿರುವ ಅಸಾಧಾರಣ ಅಸ್ತ್ರಗಳು ಇರುತ್ತವೆ’

“ಬೇಡ ವಿಶ್ವಾಮಿತ್ರರೇ, ಬೇಡ! ಇಡೀ ಸೈನ್ಯ ಕೊಂಡೊಯ್ಯಿರಿ ಬೇಕಾದರೆ, ನನ್ನನ್ನೂ ಕೊಂಡೊಯ್ಯಿರಿ ಬೇಕಿದ್ದರೆ…’ 
“ಆದರೆ-‘ ವಿಶ್ವಾಮಿತ್ರರು ತಲೆಯಾಡಿಸಿದರು. “ಪೌಲಸ್ತ ಕುಲದ ರಾವಣನ ರಾಕ್ಷಸ ಪ್ರವೃತ್ತಿಯ ಪ್ರಸಿದ್ಧಿಯು ನಿನ್ನವರೆಗೂ ತಲುಪಿರಬಹುದು. ಕುಬೇರನ ತಮ್ಮ ಅವನು. ತಾನೇ ನಿಂತು ಯಜ್ಞಯಾಗಾದಿಗಳನ್ನು ಹಾಳುಮಾಡುವುದಿಲ್ಲ. ಅವನು ಬೇರೆಯವರಿಂದ ಮಾಡಿಸುತ್ತಾನೆ. ತೀರ ತುತ್ಛ ಕೆಲಸ ಅದು ಅವನಿಗೆ. ತಾನು ಅದರ ಲಾಭ ಮಾತ್ರ ಉಣ್ಣುತ್ತಾನೆ. ನೂರಾರು ಸಹಚರರಿದ್ದಾರೆ ರಾವಣನಿಗೆ. ಮಾರೀಚ ಹಾಗೂ ಸುಬಾಹು ಅವನ ಇಬ್ಬರು ಸಹಚರರು. ಇವರು ಮಾಯಾವಿಗಳು, ಚಾಣಾಕ್ಷರು. ಇವರನ್ನು ಸಂಹರಿಸಬೇಕಾಗಿದೆ’

“ಏನಂದಿರಿ, ರಾವಣ! ಮಾರೀಚ! ಸುಬಾಹು!’

“ದಶರಥ, ನನ್ನ ಮಾತನ್ನು ನಂಬು, ನಂಬಲಿಕ್ಕಾಗದಿದ್ದರೆ ವಶಿಷ್ಟರನ್ನು ಕೇಳು. ಈ ಮಹತ್ಕಾರ್ಯದಲ್ಲಿ ನಿನ್ನ ಮಗ ಪಾಲ್ಗೊಳ್ಳುವುದು ಅಗತ್ಯ, ಅವನ ಬೆಳವಣಿಗೆಗೆ ಅಗತ್ಯ’

“ಇಲ್ಲ ವಿಶ್ವಾಮಿತ್ರರೇ, ಆಗುವುದಿಲ್ಲ. ಮಕ್ಕಳೇ ಇರದ ಮುದುಕ ನಾನು. ಈಗ ಇಳಿವಯಸ್ಸಿನಲ್ಲಿ ಮಕ್ಕಳಾಗಿವೆ. ಹಿರಿಯ ಮಗ ರಾಮನೆಂದರೆ ನನಗೆ ಜೀವ. ರಾಮನೋ, ಇನ್ನೂ ಮಗು. ಮಾರೀಚ-ಸುಬಾಹುಗಳು ಭಯಾನಕ ರಾಕ್ಷಸರು. ಅವರ ಮುಂದೆ, ರಾಮನಿರಲಿ, ನಾನೂ ನಿಲ್ಲಲಾರೆ. ನನ್ನ ಇಡೀ ಸೈನ್ಯವೂ ನಿಲ್ಲಲಾರದು. ಹೀಗಿರುವಾಗ, ಹಾಲುಗಲ್ಲದ ಹಸುಗೂಸನ್ನು ಕಳುಹಿಸು ಯುದ್ಧಕ್ಕೆ ಎನ್ನುತ್ತೀರಲ್ಲ, ವಿಶ್ವಾಮಿತ್ರರೆ… ಕ್ಷಮಿಸಿ’ ಇಷ್ಟು ಹೇಳುವಷ್ಟರಲ್ಲಿ ಸಾಕುಬೇಕಾಗಿತ್ತು ಅವನಿಗೆ. ಅವನು ನಡುಗುತ್ತಿದ್ದ. ಒಂದೆಡೆ ಪುತ್ರವಾತ್ಸಲ್ಯ, ಮತ್ತೂಂದೆಡೆ ಶಾಪಭೀತಿ. ದಶರಥ ಕುಳಿತಲ್ಲಿ ಕುಳಿತಿರಲಾರದೆ, ಕಣ್ಣು ಕೈಕಾಲು ಕಳೆದುಕೊಂಡವರಂತೆ ಚಡಪಡಿಸಿದ. 

ವಿಶ್ವಾಮಿತ್ರರೋ, ಕಾರ್ಯ ಸಾಧಿಸಿಕೊಂಡೇ ಬರುವೆ ಎಂಬ ಹುಮ್ಮಸ್ಸಿನಿಂದ ಇಲ್ಲಿಗೆ ಬಂದಿದ್ದರು. ದಶರಥನ ಮೇಲೆ ಇನ್ನಿಲ್ಲದ ಕೋಪ ಬಂದಿತು. ಕೋಪವನ್ನು ಅದುಮಿಕೊಂಡು ಹೇಳಿದರು,

“ಆಯ್ತು ಮಹಾರಾಜ, ಕೊಟ್ಟಮಾತಿಗೆ ತಪ್ಪುವುದು ನಿನ್ನ ವಂಶಕ್ಕೆ ಶೋಭೆ ತರುವುದಾದರೆ, ಹಾಗೇ ಮಾಡು. ಗಂಡು ಮಕ್ಕಳನ್ನು ಮನೆಯಲ್ಲಿಟ್ಟುಕೊಂಡು ಸುಖವಾಗಿರು. ಬಂದ ಹಾದಿಗೆ ಸುಂಕವಿಲ್ಲವೆಂದು ತಿಳಿದು ನಾನು ಹಿಂದಕ್ಕೆ ಮರಳುತ್ತೇನೆ’

ವಿಶ್ವಾಮಿತ್ರರು ಕೋಪ ಸಿಡಿದಿದ್ದರಾದರೂ ವಾಸಿಯಿತ್ತು. ಹೊಗೆಯುಗುಳುತ್ತ ನಿಂತಿರುವ ಅಗ್ನಿಪರ್ವತದಂತೆ ಕಂಡರು ಅವರು. ಸಭಾಸದರು ನಡುಗಿಹೋದರು. ಪರಿಸ್ಥಿತಿ ಮಿತಿಮೀರೀತೆಂದು ವಸಿಷ್ಠರು ಮಧ್ಯಪ್ರವೇಶ ಮಾಡಿದರು.
“ದಶರಥ ಮಹಾರಾಜ, ಕೊಟ್ಟ ಮಾತನ್ನು ಮುರಿಯುವುದು ರಘುಕುಲದ ಘನತೆಗೆ ತಕ್ಕುದಲ್ಲ. ಇಷ್ಟಕ್ಕೂ ಇಷ್ಟೆಲ್ಲ ಹೆದರುವ ಆವಶ್ಯಕತೆಯಿಲ್ಲ ನಿನಗೆ. ಅವರು ವಿಶ್ವಾಮಿತ್ರರು. ತಾನೇನು ಮಾಡುತ್ತಿದ್ದೇನೆ, ತನ್ನಕಾರ್ಯದ ಸಾಧಕಬಾಧಕಗಳೇನು, ಎಂಬ ಅರಿವಿದೆ ಅವರಿಗೆ. ರಾಮ ಜಯಿಸುತ್ತಾನೆ ಎಂಬ ಅವರ ಆತ್ಮವಿಶ್ವಾಸವು ಪೊಳ್ಳಲ್ಲ ಮಹಾರಾಜ. ನಂಬು ನೀನು. ಮೂರು ಲೋಕಗಳಲ್ಲಿ ಮತ್ತಾರಲ್ಲಿಯೂ ಇಲ್ಲದ ಅಸಾಧಾರಣ ಅಸ್ತ್ರಗಳಿವೆ ವಿಶ್ವಾಮಿತ್ರರಲ್ಲಿ. ಅವುಗಳು ನಿನ್ನ ಮಗನ ಕೈಸೇರುವುದು ಇಷ್ಟವಿಲ್ಲವೆ ನಿನಗೆ? ಮಹತ್ಕಾರ್ಯ ಮಾಡಲೆಂದೇ ನಿನ್ನ ಮಗನನ್ನು ಆಯ್ಕೆ ಮಾಡಿದ್ದಾರೆ ಅವರು. ಕಣ್ಣುಮುಚ್ಚಿಕೊಂಡು ಕಳುಹಿಸಿಕೊಡು ರಾಮಲಕ್ಷ್ಮಣರನ್ನು. ಕಲ್ಯಾಣವಾಗುತ್ತದೆ’

ಹೀಗೆ, ವಶಿಷ್ಟರು ಬಗೆಬಗೆಯಾದ ಮಾತುಗಳಿಂದ ತಿಳಿ ಹೇಳಿದರು. 

ದಶರಥನನ್ನು ಆವರಿಸಿದ್ದ ಪುತ್ರವ್ಯಾಮೋಹವೆಂಬ ಜ್ವರದ ಬಾಧೆ ಶಮನಗೊಳ್ಳುವಂತೆ ಮಾಡಿದರು. ಅಂತೂ ಕಡೆಗೊಮ್ಮೆ, ದೊಡ್ಡದೊಂದು ನಿಟ್ಟುಸಿರು ತೆಗೆದು, “ಆಗಲಿ’ ಎಂದನು ದಶರಥ ಮಹಾರಾಜ. ರಾಮಲಕ್ಷ್ಮಣರನ್ನು ಸಭೆಗೇ ಕರೆಯಿಸಲಾಯಿತು.

ಮಗನ ಮುಖ ಕಂಡದ್ದೇ ದಶರಥನ ಕಣ್ಣಾಲಿಗಳು ಮತ್ತೂಮ್ಮೆ ತುಂಬಿ ಬಂದವು. ತುಳುಕಿಸಲೆ, ತುಳುಕಿಸದಿರಲೆ ನೀರಹನಿಗಳನ್ನು ಎಂದು ಜಿಜ್ಞಾಸೆ ಪಡುತ್ತಿರುವಂತೆ ಕಂಡವು ದಶರಥನ ಕಣ್ಣುಗಳು. ಮಗನನ್ನು ಬಿಗಿದಪ್ಪಿಕೊಂಡು ನೆತ್ತಿಯನ್ನು ಮೂಸಿ ಅಪ್ಪುಗೆ ಸಡಿಲಿಸಿ, ದೂರ ನಿಲ್ಲಿಸಿಕೊಂಡು ಮಮತೆಯಿಂದ ನೋಡಿ, ಅವನ ಎರಡೂ ಕೈಗಳನ್ನು ತನ್ನ ಕೈಗಳೊಳಗೆ ತೆಗೆದುಕೊಂಡು, ಕೊಂಚ ಗದ್ಗದಗೊಂಡಿದ್ದ ಸ್ವರದಲ್ಲಿ ನುಡಿದನು ತಂದೆ ದಶರಥ- 

“ಮಗು, ರಾಮಚಂದ್ರ. ತೀರ ಚಿಕ್ಕವನಾದ ನಿನ್ನಿಂದ ತೀರ ದೊಡ್ಡದಾದ ಒಂದು ಕಾರ್ಯ ಮಾಡಿಸಲು ಹೊರಟಿದ್ದಾರೆ ವಿಶ್ವಾಮಿತ್ರರು. ಅವರು ಮಹಾತ್ಮರು, ಹೇಳಿದಂತೆ ಮಾಡಬಲ್ಲವರು. ಅವರೊಟ್ಟಿಗೆ ಹೋಗಿ ಬಾ, ಲಕ್ಷ್ಮಣನೂ ಬರಲಿ ನಿನ್ನೊಟ್ಟಿಗೆ. ಅವರು ಹೇಳಿದಂತೆ ಕೇಳು. ಅದುವೆ ನಿನಗೆ ಶ್ರೇಯಸ್ಕರವು’
“ಚಿಂತಿಸಬೇಡ ತಂದೆ, ನಿನ್ನ ಮಾತನ್ನು ನಡೆಸಿಕೊಡುತ್ತೇನೆ’
“ಹೋಗಿ ಬಾ ಮಗನೆ’
ತಂದೆ ದಶರಥ ಹಾಗೂ ತಾಯಂದಿರು, ವಶಿಷ್ಟರು, ಆದಿಯಾಗಿ ಎಲ್ಲ ಹಿರಿಯರಿಗೂ ನಮಸ್ಕರಿಸಿ ಹೊರಟುನಿಂತರು ರಾಮಲಕ್ಷ್ಮಣರು. ವಿಶ್ವಾಮಿತ್ರರು ಮತ್ತೂಮ್ಮೆ ರಾಜನಿಗೆ ಧೈರ್ಯಹೇಳಿ ಕಾಡಿನತ್ತ ನಡೆದರು. ಹೀಗೆ ಜೀವನದಲ್ಲಿ ಮೊದಲ ಬಾರಿಗೆ, ಮನೆಯಿಂದ ಹೊರಹೊರಟರು ಮಕ್ಕಳು. ಮನೆಯವರಿಗೆ ವಂಶ ಉಳಿಸುವ ಚಿಂತೆಯಾದರೆ, ಮಕ್ಕಳಿಗೆ ಬೆಳೆಯುವ ಚಿಂತೆ. “ಅಲ್ಲಿ ಮಲಗು ಇಲ್ಲಿ ಏಳು ಇದು ತಿನ್ನು ಅದು ತಿನ್ನದಿರು’ ಎಂದೆಲ್ಲ ನಿರ್ಬಂಧಿಸುವ ತಾಯಿ-ತಂದೆಯರ ಮಮತೆಯೂ ಅತಿಯಾಗಬಲ್ಲದು. ಅರಿಯದ ಜಾಗಕ್ಕೆ, ಅರಿಯದ ಕಾರ್ಯಕ್ಕೆ, ಅರಿತವರೊಟ್ಟಿಗೆ ತೆರಳುವುದೂ ಸಹ ಒಂದು ಸಂಭ್ರಮ ಮಕ್ಕಳಿಗೆ. ಸಂಭ್ರಮಪಡುತ್ತಲೇ ಹೊರಟರು ರಾಮಲಕ್ಷ್ಮಣರು.

ಇನ್ನೂ ಹದಿನಾರು ತುಂಬಿಲ್ಲ. ಶ್ರೀಮಂತ‌ ಮಕ್ಕಳು, ಸುಂದರ ಮಕ್ಕಳು, ಸುಂದರ ಪೋಷಾಕು ಧರಿಸಿದ ಮಕ್ಕಳು. ಒಬ್ಬೊಬ್ಬರ ಹೆಗಲಿಗೆ ಒಂದು ಬಿಲ್ಲು ಮತ್ತೂಂದು ಹೆಗಲಿಗೆ ಒಂದು ಬತ್ತಳಿಕೆ ಧರಿಸಿ ಎದೆಯುಬ್ಬಿಸಿ ನಡೆದರು. ವಿಶ್ವಾಮಿತ್ರರಾದರೋ, ಮೂರೂ ಜಗತ್ತನ್ನು ಅಲೆದು ಬಂದವರು, ದೇವಮಾನವರಾಕ್ಷಸ ಮೂರನ್ನೂ ಮಣಿಸಿ ಬಂದವರು. ಸುಂದರಿಯರಸಂಗ ಮಾಡಿದವರು, ಸೌಂದರ್ಯೋಪಾಸನೆ ಮಾಡಿದವರು. ಹೆಚ್ಚಿನ ಸೌಂದರ್ಯ ಬರಿ ವಾಸನೆ ಎಂದು ಗ್ರಹಿಸಿ, ಈಗ, ಕಾಡು ಸೇರಿದವರು. ವರ್ಷಾನುಗಟ್ಟಲೆ ಕಾಡಂಚಿನಲ್ಲಿ ವಾಸಿಸಿದವರು, ಗ್ರಾಮವಾಸಿಗಳು, ಆಶ್ರಮವಾಸಿಗಳು, ಸಾಕುಪ್ರಾಣಿಗಳು, ಸಾಕಲಾರದ ಪ್ರಾಣಿಗಳು- ಇತ್ಯಾದಿ ಎಲ್ಲ ಜೀವಜಂತುಗಳ ಸಂಗಮಾಡಿ ಜ್ಞಾನಿಗಳಾದವರು ಅವರು. ಅವರಿಗಿಂತ ಮಿಗಿಲಾದ ತರಬೇತುದಾರ ಸಿಕ್ಕಾರೆಯೆ, ಈ ಬೆರಗುಗಣ್ಣಿನ ಯುವಕರಿಗೆ? 

– ಪ್ರಸನ್ನ ಹೆಗ್ಗೋಡು              

Advertisement

Udayavani is now on Telegram. Click here to join our channel and stay updated with the latest news.

Next