ಬೆಂಗಳೂರು: “ಪತಿ ನಪುಂಸಕನಾಗಿದ್ದ. ಜತೆಗೆ ದೈಹಿಕ, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಈ ಕಾರಣಕ್ಕೆ ವಿವಾಹ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದೇನೆ. ಆದರೆ, ಅರ್ಜಿ ವಾಪಸ್ ಪಡೆದುಕೊಳ್ಳದಿದ್ದರೆ ಕೊಲೆಮಾಡುವುದಾಗಿ ನನ್ನ ಪತಿ ಬೆದರಿಕೆ ಹಾಕಿದ್ದಾರೆ,” ಹೀಗೆಂದು ಆರ್‌ಟಿ ನಗರದ ನಿವಾಸಿ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯು ಪತಿ ಹಾಗೂ ಅವರ ಇಬ್ಬರು ಸಂಬಂಧಿಗಳ ವಿರುದ್ಧ ಕಳೆದ 10 ದಿನಗಳ ಹಿಂದೆ ದೂರು ನೀಡಿದ್ದಾರೆ. ಈ ಸಂಬಂಧ ಮಹಿಳೆ ಪತಿ ಇಂದ್ರಜಿತ್, ಸಂಬಂಧಿಕರಾದ ವಿಶ್ವನಾಥ್, ಪುರುಷೋತ್ತಮ್ ಎಂಬುವವರ ವಿರುದ್ಧ ಕೊಲೆಬೆದರಿಕೆ ಆರೋಪದ ಅನ್ವಯ ಆರ್‌ಟಿ ನಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ದೂರುದಾರ ಮಹಿಳೆಯ ಪತಿ ಇಂದಜಿತ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ನಗರದ ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಇಬ್ಬರೂ ವಿವಾಹವಾಗಿದ್ದರು. “ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ನಪುಂಸಕ ಎಂದು ಗೊತ್ತಾಯಿತು. ಇಷ್ಟಾದರೂ ಮರ್ಯಾದೆಗೆ ಅಂಜಿ ಸುಮ್ಮನಿದ್ದೆ. ಆದರೆ ಪತಿ ಇಂದ್ರಜಿತ್, ಶೀಲ ಶಂಕಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ.
ಇದರ ಜತೆಗೆ ಸಂಬಂಧಿಕರಾದ ವಿಶ್ವನಾಥ್, ಪುರುಷೋತ್ತಮ್ ಸಹ ನಡೆತೆಯ ಬಗ್ಗೆ ಕುಟುಂಬದವರ ಮುಂದೆ ಕೆಟ್ಟದಾಗಿ ಬಿಂಬಿಸುತ್ತಿದ್ದರು. ಈ ವಿಚಾರಕ್ಕೆ ಆಗಾಗ್ಗೆ ನಮ್ಮಿಬ್ಬರ ನಡುವೆ ಜಗಳ ಉಂಟಾಗಿದೆ. ಹೀಗಾಗಿ ಒಂದು ವರ್ಷದ ಹಿಂದೆ ವಿವಾಹ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆ.
ಈ ಮಧ್ಯೆ ಫೆಬ್ರವರಿಯಲ್ಲಿ ನಾನು ಮನೆಯಲ್ಲಿ ಒಬ್ಬಳೇ ಇದ್ದಾಗ ಬಂದಿದ್ದ ಇಬ್ಬರು ಅಪರಿಚಿತರು ವಿಚ್ಛೇದನ ಅರ್ಜಿಧಿಯನ್ನು ವಾಪಸ್ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಕೊಲೆ ಮಾಡುತ್ತೇವೆ ಎಂದು ಹೆದರಿಸಿದರು. ರಾಜಕೀಯ ಪ್ರಭಾವಿ ವ್ಯಕ್ತಿಗಳ ಸಂಪರ್ಕವಿರುವ ಪತಿಯೇ ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ,” ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.