Advertisement

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್‌ ತಲುಪಿದ ಪಿ. ಕಶ್ಯಪ್‌

09:55 AM Sep 29, 2019 | keerthan |

ಇಂಚೆಯಾನ್‌ (ಕೊರಿಯಾ): “ಕೊರಿಯಾ ಓಪನ್‌ ವರ್ಲ್ಡ್ ಟೂರ್‌ ಸೂಪರ್‌ 500′ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಾರುಪಳ್ಳಿ ಕಶ್ಯಪ್‌ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಕೂಟದಲ್ಲಿ ಉಳಿದಿರುವ ಭಾರತದ ಏಕೈಕ ಸ್ಪರ್ಧಿಯಾಗಿರುವ ಅವರು ಡೆನ್ಮಾರ್ಕ್‌ನ ಮಾಜಿ ನಂ.2 ಆಟಗಾರ ಜಾನ್‌ ಒ ಜೊರ್ಗೆನ್ಸೆನ್‌ ವಿರುದ್ಧ ಅಮೋಘ ಪ್ರದರ್ಶನ ನೀಡಿ 24-22, 21-8 ಅಂತರದ ಗೆಲುವು ಸಾಧಿಸಿದರು.

Advertisement

ಇದು ಪಿ. ಕಶ್ಯಪ್‌ ಪ್ರಸಕ್ತ ಋತುವಿನಲ್ಲಿ ಕಾಣುತ್ತಿರುವ ಸತತ 2ನೇ ಸೆಮಿಫೈನಲ್‌ ಆಗಿದೆ. ಇದಕ್ಕೂ ಮೊದಲು “ಇಂಡಿಯಾ ಓಪನ್‌ ಸೂಪರ್‌ 500′ ಟೂರ್ನಿಯಲ್ಲೂ ಉಪಾಂತ್ಯ ಪ್ರವೇಶಿಸಿದ್ದರು.

2014ರ ಕಾಮನ್‌ವೆಲ್ತ್‌ ಗೇಮ್ಸ್‌ ಬಂಗಾರ ವಿಜೇತ ಪಿ. ಕಶ್ಯಪ್‌ ಸೆಮಿಫೈನಲ್‌ನಲ್ಲಿ ವಿಶ್ವದ ನಂ.1 ಆಟಗಾರ, 2 ಬಾರಿಯ ವಿಶ್ವ ಚಾಂಪಿಯನ್‌ ಆಗಿರುವ ಜಪಾನಿನ ಕೆಂಟೊ ಮೊಮೊಟ ಅವರನ್ನು ಎದುರಿಸಲಿದ್ದಾರೆ.

ಕಶ್ಯಪ್‌-ಜೊರ್ಗೆನ್ಸೆನ್‌ ನಡುವಿನ ಮೊದಲ ಗೇಮ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಸಣ್ಣ ಸಣ್ಣ ರ್ಯಾಲಿಗಳು ಈ ಗೇಮ್‌ನ ವಿಶೇಷವಾಗಿದ್ದವು. 14-14, 18-18, ಬಳಿಕ 19-19… ಹೀಗೆ ಇಬ್ಬರೂ ಸಮಬಲದಲ್ಲೇ ಸಾಗಿದರು. ಬಳಿಕ ಡ್ಯಾನಿಶ್‌ ಶಟ್ಲರ್‌ ಮುಂದೆ ಗೇಮ್‌ ಪಾಯಿಂಟ್‌ ಅವಕಾಶವಿದ್ದರೂ ಕಶ್ಯಪ್‌ “ಜಂಪ್‌ ಸ್ಮ್ಯಾಶ್‌’ ಮೂಲಕ ಪಂದ್ಯವನ್ನು 20-20ಕ್ಕೆ ತಂದು ನಿಲ್ಲಿಸಿದರು.
ಅನಂತರ ಲಭಿಸಿದ ಮೊದಲ ಗೇಮ್‌ ಪಾಯಿಂಟ್‌ ಅವಕಾಶವನ್ನು ಕಶ್ಯಪ್‌ ಕೈಚೆಲ್ಲಿದರು. ಆದರೆ ದ್ವಿತೀಯ ಅವಕಾಶದಲ್ಲಿ ಅದೃಷ್ಟ ಕೈ ಹಿಡಿಯಿತು.
ದ್ವಿತೀಯ ಗೇಮ್‌ ಕೂಡ ಪೈಪೋಟಿ ಯಿಂದಲೇ ಆರಂಭವಾಗಿತ್ತು. ಆದರೆ ಪಂದ್ಯ ಮುಂದುವರಿದಂತೆಲ್ಲ ಭಾರತೀಯನ ಹಿಡಿತ ಬಿಗಿಗೊಳ್ಳುತ್ತಲೇ ಹೋಯಿತು. ನಿರೀಕ್ಷೆಗಿಂತಲೂ ಸುಲಭದಲ್ಲಿ ಈ ಗೇಮನ್ನು ಕಶ್ಯಪ್‌ ವಶಪಡಿಸಿಕೊಂಡರು. ಒಟ್ಟು 37 ನಿಮಿಷಗಳ ತನಕ ಈ ಪಂದ್ಯ ಸಾಗಿತು.

5 ವರ್ಷದ ಬಳಿಕ ಮುಖಾಮುಖೀ
ಜೊರ್ಗೆನ್ಸೆನ್‌ ವಿರುದ್ಧ 5 ವರ್ಷಗಳ ಬಳಿಕ ಕಶ್ಯಪ್‌ ಆಡಿದ ಮೊದಲ ಪಂದ್ಯ ಇದಾಗಿತ್ತು. ಅಂದು “ಡೆನ್ಮಾರ್ಕ್‌ ಓಪನ್‌’ನಲ್ಲಿ ಪರಸ್ಪರ ಮುಖಾ ಮುಖೀಯಾಗಿದ್ದರು. ಹಾಗೆಯೇ ಇದು ಜೊರ್ಗೆನ್ಸೆನ್‌ ವಿರುದ್ಧ ಆಡಿದ 7 ಪಂದ್ಯ ಗಳಲ್ಲಿ ಕಶ್ಯಪ್‌ ಸಾಧಿಸಿದ 3ನೇ ಗೆಲುವು.

Advertisement
Advertisement

Udayavani is now on Telegram. Click here to join our channel and stay updated with the latest news.

Next