Advertisement

ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಸಿಂಧು ಪತನ

11:34 PM Sep 25, 2019 | mahesh |

ಇಂಚೆಯಾನ್‌ (ಕೊರಿಯಾ): ವಿಶ್ವ ಚಾಂಪಿಯನ್‌ ಪಿ.ವಿ. ಸಿಂಧು “ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌’ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಇನ್ನೊಂದೆಡೆ ಭರವಸೆಯ ಆಟಗಾರರಾದ ಸೈನಾ ನೆಹ್ವಾಲ್‌ ಅನಾರೋಗ್ಯದಿಂದ, ಬಿ. ಸಾಯಿಪ್ರಣೀತ್‌ ಗಾಯಾಳಾಗಿ ಕೂಟದಿಂದ ನಿರ್ಗಮಿಸುವ ಸಂಕಟಕ್ಕೆ ಸಿಲುಕಿದರು. ಮುನ್ನಡೆದ ಏಕೈಕ ಭಾರತೀಯನೆಂದರೆ ಪಾರುಪಳ್ಳಿ ಕಶ್ಯಪ್‌.

Advertisement

ಬುಧವಾರದ ಪಂದ್ಯದಲ್ಲಿ ಸಿಂಧು ಅವರನ್ನು ಚೀನೀ ಮೂಲದ ಅಮೆರಿಕನ್‌ ಆಟಗಾರ್ತಿ ಬೀವೆನ್‌ ಚಾಂಗ್‌ 3 ಗೇಮ್‌ಗಳ ಹೋರಾಟದ ಬಳಿಕ 21-7, 22-24, 21-15 ಅಂತರದಿಂದ ಹಿಮ್ಮೆಟ್ಟಿಸಿದರು. ಇವರಿಬ್ಬರ ಹೋರಾಟ 56 ನಿಮಿಷಗಳ ತನಕ ಸಾಗಿತು.

ವಿಶ್ವ ಚಾಂಪಿಯನ್‌ ಎನಿಸಿದ ಬಳಿಕ ಸಿಂಧು ಆಟದಲ್ಲೇನೋ ಸಮಸ್ಯೆ ಕಾಡುತ್ತಿರುವುದು ಈ ಕೂಟದಲ್ಲೂ ಸಾಬೀತಾಯಿತು. ಇದಕ್ಕೂ ಹಿಂದಿನ ಚೀನ ಓಪನ್‌ ಪಂದ್ಯಾವಳಿಯಲ್ಲಿ ಅವರು ದ್ವಿತೀಯ ಸುತ್ತಿನಲ್ಲೇ ಹೊರಬಿದ್ದಿದ್ದರು. ಸ್ವಾರಸ್ಯವೆಂದರೆ, ಕಳೆದ ವಿಶ್ವ ಚಾಂಪಿಯನ್‌ಶಿಪ್‌ ಪ್ರಶಸ್ತಿ ಎತ್ತುವ ವೇಳೆ ಬೀವೆನ್‌ ಚಾಂಗ್‌ ಅವರನ್ನು ಸೋಲಿಸಿಯೇ ಸಿಂಧು ಮುನ್ನಡೆದಿದ್ದರು. ಆದರಿಲ್ಲಿ ಚಾಂಗ್‌ ಸೇಡು ತೀರಿಸಿಕೊಂಡರು.

ಪ್ರಣೀತ್‌ಗೆ ಪಾದದ ನೋವು
ಡೆನ್ಮಾರ್ಕ್‌ನ 5ನೇ ಶ್ರೇಯಾಂಕದ ಆ್ಯಂಡ್ರೆಸ್‌ ಆ್ಯಂಟನ್ಸೆನ್‌ ವಿರುದ್ಧ ಸೆಣಸಾಡುತ್ತಿದ್ದ ಬಿ. ಸಾಯಿ ಪ್ರಣೀತ್‌ 9-21, 7-11ರ ಹಿನ್ನಡೆಯಲ್ಲಿರುವಾಗ ಪಾದದ ನೋವಿನಿಂದ ಪಂದ್ಯ ತ್ಯಜಿಸಿದರು.

2ನೇ ಸುತ್ತಿಗೆ ಪಿ. ಕಶ್ಯಪ್‌
ಪಾರುಪಳ್ಳಿ ಕಶ್ಯಪ್‌ ಚೈನೀಸ್‌ ತೈಪೆಯ ಲು ಚಿಯ ಹಂಗ್‌ ಅವರನ್ನು 42 ನಿಮಿಷಗಳ ಹೋರಾಟದ ಬಳಿಕ 21-16, 21-16 ಅಂಕಗಳಿಂದ ಪರಾಭವಗೊಳಿಸಿದರು.

Advertisement

ಸೈನಾಗೆ ಅನಾರೋಗ್ಯ ಸಮಸ್ಯೆ
ಸೈನಾ ನೆಹ್ವಾಲ್‌ ದಕ್ಷಿಣ ಕೊರಿಯಾದ ಕಿಮ್‌ ಗಾ ಇಯುನ್‌ ವಿರುದ್ಧ 21-19, 18-21 ಸಮಬಲದ ಬಳಿಕ ನಿರ್ಣಾಯಕ 3ನೇ ಗೇಮ್‌ನಲ್ಲಿ 1-8ರ ಹಿನ್ನಡೆಯಲ್ಲಿದ್ದಾಗ ಅನಾರೋಗ್ಯದ ಸಮಸ್ಯೆಗೆ ಸಿಲುಕಿದರು. ಇದರಿಂದ ಸ್ಪರ್ಧೆಯಿಂದ ಹಿಂದೆ ಸರಿಯುವುದು ಅನಿವಾರ್ಯವಾಯಿತು.

ಸೈನಾ ಗ್ಯಾಸ್ಟ್ರಿಕ್‌ ಸಮಸ್ಯೆಗೆ ಸಿಲುಕಿದರು ಎಂಬುದಾಗಿ ಅವರ ಪತಿ ಕಶ್ಯಪ್‌ ತಿಳಿಸಿದರು. “ಇದರಿಂದ ನಿನ್ನೆ ಸೈನಾ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ನೇರವಾಗಿ ಆಸ್ಪತ್ರೆಯಿಂದ ಸ್ಟೇಡಿಯಂಗೆ ಆಗಮಿಸಿದರು. ಇಲ್ಲಿ ಅವರಿಗೆ ಪಂದ್ಯ ಮುಂದುವರಿಸಲಾಗಲಿಲ್ಲ’ ಎಂದರು. ಕಿಮ್‌ ಗಾ ಇಯುನ್‌ ವಿರುದ್ಧ ಸೈನಾ ಆಡುತ್ತಿದ್ದ 3ನೇ ಪಂದ್ಯ ಇದಾಗಿತ್ತು. ಹಿಂದಿನೆರಡೂ ಪಂದ್ಯಗಳಲ್ಲಿ ಸೈನಾ ಜಯ ಸಾಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next