Advertisement

Koratagere: ಗೊರವನಹಳ್ಳಿ ಶ್ರೀಕ್ಷೇತ್ರದಲ್ಲಿ ವರಮಹಾಲಕ್ಷ್ಮೀ ಸಂಭ್ರಮ

01:09 PM Aug 25, 2023 | Team Udayavani |

ಕೊರಟಗೆರೆ: ಕಲ್ಪತರು ನಾಡಿನ ಸುಪ್ರಸಿದ್ದ ಪುಣ್ಯಕ್ಷೇತ್ರ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ಸನ್ನಿಧಾನ ಸಿರಿದೇವಿಗೆ ಮೀಸಲಾದ ಕರುನಾಡಿನ ಏಕೈಕ ಧಾರ್ಮಿಕ ಕ್ಷೇತ್ರ. ಶ್ರಾವಣ ಮಾಸದ ಮೊದಲನೇ ಶುಭ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಶ್ರೀಮಹಾಲಕ್ಷ್ಮೀ ಪುಣ್ಯಕ್ಷೇತ್ರದಲ್ಲಿ ಹಬ್ಬದ ಸಡಗರ ಸಂಭ್ರಮ.. ಹಬ್ಬದ ದಿನವೇ ಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಟ್ರಸ್ಟ್ ನಿಂದ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಕಲ್ಪತರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಸನ್ನಿಧಾನಕ್ಕೆ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಭಾರತ ದೇಶ ಮತ್ತು ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಪ್ರಯಾಣ ಇರುವ ಹಿನ್ನಲೆಯಲ್ಲಿ ಪ್ರತಿವರ್ಷಕ್ಕಿಂತ ಭಕ್ತರ ಆಗಮನದ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆ ಕಾಣಲಿದೆ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿಯ ಸಿರಿದೇವಿಯ ಸನ್ನಿಧಾನದಲ್ಲಿ ಶುಕ್ರವಾರ ಮುಂಜಾನೆಯಿಂದ ಸಂಜೆಯವರೆಗೆ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಗ್ರಾಮದೇವತೆ, ಗಣ, ಮಹಾಲಕ್ಷ್ಮೀ ಹೋಮ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮ ಜರುಗಲಿವೆ. ಗುರುವಾರದಿಂದಲೇ ದೇವಾಲಯ ಮತ್ತು ದೇವಿಗೆ ವಿಶೇಷವಾಗಿ ಹೂವು-ವಿದ್ಯುತ್‍ದೀಪ ಅಲಂಕಾರದ ವ್ಯವಸ್ಥೆ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಟ್ರಸ್ಟ್ ನಿಂದ ಏರ್ಪಡಿಸಲಾಗಿದೆ.

ಶ್ರಾವಣ ಮಾಸದ ಮೊದಲನೇ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬ ಆಚರಣೆ ಮಾಡುವ ಭಕ್ತರು ಮೊದಲು ಗಣಪತಿ ಮತ್ತು ಗಂಗಾಪೂಜೆಯ ನಂತರ ಮಹಾಲಕ್ಷ್ಮೀ ಕಳಸಕ್ಕೆ ಹಲಸು, ಅರಳಿ, ಆಲ, ಹತ್ತಿಯ ಚಿಗುರು ಮತ್ತು ಹೊಂಬಾಳೆ-ಕಮಲದ ಹೂವಿನ ಪೂಜಾ ವ್ರತ ಮಾಡಿ ನಂತರ ಗೊರವನಹಳ್ಳಿ ಕ್ಷೇತ್ರದ ಮಹಾಲಕ್ಷೀ ದರ್ಶನ ಪಡೆದರೇ ಭಕ್ತರ ಇಷ್ಟಾರ್ಥಗಳು ನೇರವೇರುತ್ತವೆ ಎಂಬುದು ಮಹಾಲಕ್ಷ್ಮೀ ದೇವಿಯ ಭಕ್ತರ ಮತ್ತು ಕಲಿಯುಗದ ದೇವತೆ ಕಮಲಮ್ಮನವರ ನಂಬಿಕೆಯಾಗಿದೆ.

ಭಕ್ತರ ಸೆಳೆಯುವ ಪುಣ್ಯಕ್ಷೇತ್ರದ ಮಹಿಮೆ

Advertisement

ಮಹಾಲಕ್ಷ್ಮೀ ದೇವಾಲಯದ ಬಲಭಾಗದಲ್ಲಿ ತೀತಾ ಜಲಾಶಯ ಹಾಗೂ ಶ್ರೀಲಕ್ಷ್ಮೀ ಮೂಡಿಬಂದ ಅಬ್ಬಯ್ಯನ ಕೆರೆಯಿದೆ. ಎಡಭಾಗದಲ್ಲಿ ನಾಗಪ್ಪನ ಹುತ್ತ ಮತ್ತು ಕಲಿಯುಗದ ದೇವತೆ ಕಮಲಮ್ಮ ಅಜ್ಜಿಯ ದಿವ್ಯಾ ಬೃಂದಾವನ ಇದೆ.  ದೇವಾಲಯದ ಹಿಂಭಾಗದಲ್ಲಿ ಆದಿಶಕ್ತಿ ಮಾರಮ್ಮ ದೇವಾಲಯ ಹಾಗೂ ದಕ್ಷಿಣದಲ್ಲಿ ಓಣಿನಾಗನ ಶಿಲೆ ಮತ್ತು ದೇವಿಯ ಕಮಲ ಪಾದವಿದೆ. ತೀತಾ ಜಲಾಶಯದ ಸಮೀಪದ ಹುಣಸೆ ಮರದಲ್ಲಿ ಗಣಪತಿ ಶಿಲೆಯು ಭಕ್ತರಿಗೆ ಕಾಣಸಿಗಲಿದೆ.

ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್

ಗೊರವನಹಳ್ಳಿ ಶ್ರೀಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಬಿ.ಜಿ.ವಾಸುದೇವ, ಕಾರ್ಯದರ್ಶಿ ಮುರುಳಿಕೃಷ್ಣ.ಆರ್, ಖಜಾಂಚಿ ಆರ್.ಜಗದೀಶ್, ಧರ್ಮದರ್ಶಿ ಡಾ.ಲಕ್ಷ್ಮೀಕಾಂತ, ನಟರಾಜು, ಶ್ರೀಪ್ರಸಾದ್, ರವಿರಾಜ ಅರಸ್, ಮಂಜುನಾಥ, ಓಂಕಾರೇಶ್, ಚಿಕ್ಕನರಸಯ್ಯ, ಬಾಲಕೃಷ್ಣ, ನರಸರಾಜು, ಲಕ್ಷ್ಮೀನರಸಯ್ಯ, ನಾಗರಾಜು, ಕಾರ್ಯ ನಿರ್ವಹಣಾ ಅಧಿಕಾರಿ ಕೇಶವಮೂರ್ತಿ ನೇತೃತ್ವದಲ್ಲಿ ಶ್ರೀಮಹಾಲಕ್ಷ್ಮೀ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಅಭಿವೃದ್ದಿಯತ್ತಾ ಶ್ರೀಮಹಾಲಕ್ಷ್ಮೀ ಕ್ಷೇತ್ರ

12ಕೋಟಿ ವೆಚ್ಚದಲ್ಲಿ ಶ್ರೀಮಹಾಲಕ್ಷ್ಮೀ ದಾಸೋಹ ಭವನ, 1ಸಾವಿರಕ್ಕೂ ಅಧಿಕ ಭಕ್ತರಿಗೆ ಊಟಕ್ಕೆ ಸ್ಥಳಾವಕಾಶ. ಭಕ್ತರಿಂದ ಮಹಾಲಕ್ಷ್ಮೀ ಗರ್ಭಗುಡಿಗೆ ಪಂಚಲೋಹದ ಚಿನ್ನದ ಲೇಪನ, ಗೋಪುರಕ್ಕೆ ಚಿನ್ನದ ಕಳಸ, ದೇವಾಲಯ ಸುತ್ತಲು ಸುಸಜ್ಜಿತ ಸಿಸಿರಸ್ತೆ ಮತ್ತು ಸುಂದರ ಪರಿಸರ, ಹೈಟೆಕ್ ಶೌಚಾಲಯ, 24ಗಂಟೆ ಸಿಸಿಟಿವಿ ಅಳವಡಿಕೆ, ಪ್ರತಿತಿಂಗಳು ಆರೋಗ್ಯ ಮತ್ತು ಕಣ್ಣಿನ ತಪಾಸಣೆ ಶಿಭಿರ ಸೇರಿದಂತೆ ಹತ್ತಾರು ಕೆಲಸಗಳು ಭಕ್ತರ ಸಹಕಾರದಿಂದ ನಡೆಯುತ್ತಿದ್ದು ಶ್ರೀಕ್ಷೇತ್ರವು ಅಭಿವೃದ್ದಿಯ ಪಥದತ್ತಾ ಮುನ್ನುಗ್ಗುತ್ತಿದೆ.

ಟ್ರಸ್ಟ್ ನಿಂದ ಭಕ್ತರಿಗೆ ಸಕಲ ಸೌಲಭ್ಯ

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶ್ರೀಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ 3ಕಡೆ ವಾಹನದ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಾರ್ಕಿಂಗ್‍ನಿಂದ ದೇವಾಲಯಕ್ಕೆ ಉಚಿತ ಆಟೋ ವ್ಯವಸ್ಥೆ ಕೂಡ ಇದೆ. ಪ್ರೇಂಡ್ಸ್ ಗ್ರೂಪ್‍ನಿಂದ ಭಕ್ತರಿಗೆ ದಾಸೋಹದ ಸಿದ್ದತೆ ನಡೆದಿದೆ. ವಿಶೇಷ ಚೇತನ ಮತ್ತು ಹಿರಿಯ ನಾಗರೀಕರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ದೇವಾಲಯಕ್ಕೆ ಆಗಮಿಸುವ ಮಹಿಳೆಯರಿಗೆ ಅರಿಸಿನ ಕುಂಕುಮ, ಬಳೆಯ ಜೊತೆ ಲಡ್ಡು ಪ್ರಸಾದ ವಿತರಣೆಗೆ ಮಹಾಲಕ್ಷ್ಮೀ ಟ್ರಸ್ಟ್ ಸಜ್ಜಾಗಿದೆ.

ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಗೊರವನಹಳ್ಳಿ ಶ್ರೀಮಹಾಲಕ್ಷ್ಮೀಗೆ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರಾವಣ ಮಾಸದ ಶುಭ ಶುಕ್ರವಾರ ಮಹಾಲಕ್ಷ್ಮೀ ದೇವಿಗೆ ವಿದ್ಯುತ್‍ದೀಪ ಮತ್ತು ಹೂವಿನ ಅಲಂಕಾರ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಆಗಮಿಸುವ ಮಹಿಳೆಯರಿಗೆ ಅರಿಸಿನ-ಕುಂಕುಮ, ಬಳೆ ಮತ್ತು ಲಡ್ಡು ಪ್ರಸಾದ ಸೀಗಲಿದೆ. ಮಹಾಲಕ್ಷ್ಮೀ ಟ್ರಸ್ಟ್‍ನಿಂದ ದೇವಾಲಯಕ್ಕೆ ಬರುವ ಭಕ್ತರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. –ಸುಬ್ರಮಣ್ಯಶರ್ಮ. ಪ್ರಧಾನ ಅರ್ಚಕ. ಮಹಾಲಕ್ಷ್ಮೀ ದೇವಾಲಯ

ಮಹಾಲಕ್ಷ್ಮೀ ದೇವಾಲಯಕ್ಕೆ ವಿದ್ಯುತ್ ಅಲಂಕಾರ ಮತ್ತು ದೇವಿಗೆ ಹೂವಿನ ಅಲಂಕಾರ ಮಾಡಲಾಗಿದೆ. ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರಿಗೆ ವಿಶೇಷ ದರ್ಶನದ ವ್ಯವಸ್ಥೆಯಿದೆ. ದಾಸೋಹ ಭವನದಲ್ಲಿ ಭಕ್ತರಿಗೆ ದಾಸೋಹದ ಜೊತೆ 3ಕಡೆಗಳಲ್ಲಿ ವಾಹನ ನಿಲ್ಲಿಸಲು ಪಾರ್ಕಿಂಗ್ ಇದೆ. ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು ಎಲ್ಲಾ ಇಲಾಖೆ ಅಧಿಕಾರಿವರ್ಗ ಮತ್ತು ಭಕ್ತರ ಸಹಕಾರವು ಅತ್ಯಗತ್ಯ.- ಬಿ.ಜಿ.ವಾಸುದೇವ. ಅಧ್ಯಕ್ಷ. ಮಹಾಲಕ್ಷ್ಮೀ ಟ್ರಸ್ಟ್. ಗೊರವನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next