ಕೊರಟಗೆರೆ: ತಾಲೂಕಿನ ಕಸಬಾ ಹೋಬಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಯ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ಇದುವರೆಗೂ ಪಿಂಚಣಿ ಕಾಣದ ಒಂದೇ ಗ್ರಾಮದ 25 ವೃದ್ಧರಿಗೆ ಸ್ಥಳದಲ್ಲಿಯೇ ಪಿಂಚಣಿ ಪತ್ರ ಮಂಜೂರಾತಿ ಸ್ಥಳೀಯ ಸಾರ್ವಜನಿಕರ ಹತ್ತಾರು ಸಮಸ್ಯೆಗಳಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಮುಖೇನ ಸ್ಥಳದಲ್ಲಿಯೇ ಪರಿಹಾರ ಒದಗಿಸುವ ಕೆಲಸ ಮಾಡಲಾಯಿತು.
ಮೂರು ವರ್ಷಗಳ ಹಿಂದೆ ಶಾಲೆಗೆ ಕಾಂಪೌಂಡ್, ಶೌಚಾಲಯ ಹಾಗೂ ಅಡುಗೆ ಕೋಣೆ ನಿರ್ಮಿಸುವಂತೆ ಮೂರು 3ವರ್ಷಗಳ ಹಿಂದೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಇಲ್ಲಿವರೆಗೆ ಯಾವುದೇ ಕೆಲಸವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಬಿ.ಎಚ್. ಹರೀಶ್ ಬಾಬು ಆರೋಪ ಮಾಡಿದರು.
ತಾಲೂಕಿನ ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿನ್ನೆಪಾಳ್ಯ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ‍್ಯಕ್ರಮದಲ್ಲಿ ಬೋಡಬಂಡೇನಹಳ್ಳಿಯ ಶಾಲಾ ಕಾಂಪೌಂಡ್ ಇತರೆ ಸಮಸ್ಯೆಗಳ ಬಗ್ಗೆ ವೇಳೆ ಅವರು ಮಾತನಾಡಿದರು.
1 ರಿಂದ 7 ನೇ ತರಗತಿ ವರೆಗೆ 65 ಜನ ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಕೆಯಲ್ಲಿದ್ದಾರೆ. ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯ ಇಲ್ಲದ ಕಾರಣದಿಂದಾಗಿ ಅನೇಕ ವಿದ್ಯಾರ್ಥಿಗಳು ಬೇರೆ ಶಾಲೆಗೆ ದಾಖಲಾಗಿದ್ದಾರೆ. ಇದರಿಂದ ನಮ್ಮೂರಿನ ಶಾಲೆಯ ದಾಖಲಾತಿ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿದೆ. ಶೀಘ್ರವಾಗಿ ಮೂಲಭೂತ ಸೌಕರ್ಯ ಒದಗಿಸದಿದ್ದರೆ ಇನ್ನಷ್ಟು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲು ಮಾಡಲು ಮುಂದಾಗುತ್ತಾರೆ ಆಗ ಸರ್ಕಾರಿ ಶಾಲೆ ಮುಚ್ಚುವ ಪರಿಸ್ಥಿತಿ ನಿರ‍್ಮಾಣವಾಗಲಿದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ವತಿಯಿಂದ ನರೇಗಾ ಯೋಜನೆಯಡಿ ಕಾಮಗಾರಿ ಮಾಡಲು ಅನೇಕ ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಸಭೆಯಲ್ಲಿ ಆರೋಪ ಮಾಡಿದರು.
ನಮ್ಮ ಕುರಿ ರೊಪ್ಪದಲ್ಲಿ ಕೂಡಿದ್ದ ೧೩ ಕುರಿಗಳು ಕಳವಾಗಿ ಮೂರು ತಿಂಗಳು ಕಳೆದಿದೆ. ಪೊಲೀಸ್ ಇಲಾಖೆಗೆ ದೂರು ನಿಡಲಾಗಿದೆ. ಇಲ್ಲಿವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಕುರಿ ಸಾಕಾಣಿಕೆಯಿಂದ ಜೀವನ ನಡೆಸುತ್ತಿದ್ದ ನಮ್ಮ ಕುಟುಂಬ ಈಗ ಬೀದಿಗೆ ಬಿದ್ದಿದೆ ಎಂದು ಬೋಡಬಂಡೇನಹಳ್ಳಿ ಗ್ರಾಮದ ಬಿ.ಎನ್.ರಮೇಶ್ ತಹಶೀಲ್ದಾರ್ ನಹಿದಾ ಜಮ್ ಜಮ್ ಎದುರು ಅಲವತ್ತುಕೊಂಡರು.
ಕಾರ‍್ಯಕ್ರಮದಲ್ಲಿ 25 ನೂತನ ಪಿಂಚಣಿ ಆದೇಶ ಪತ್ರ ವಿತರಿಸಲಾಯಿತು. ವಿವಿಧ ಇಲಾಖೆಗೆ ಸಂಬಂಧಿಸಿದ 47 ಅರ್ಜಿಗಳನ್ನು ಸ್ವೀಕೃತವಾಗಿದ್ದವು. ತಹಶೀಲ್ದಾರ್ ನಹಿದಾ ಜಮ್ ಜಮ್, ತಾ.ಪಂ. ಇಓ ಡಾ. ಡಿ.ದೊಡ್ಡಸಿದ್ದಯ್ಯ, ಕೃಷಿ ಇಲಾಖೆ ಎಚ್.ನಾಗರಾಜ, ಅರಣ್ಯ ಇಲಾಖೆ ಎಚ್.ಎಂ.ಸುರೇಶ್, ಗ್ರಾಮೀಣಭಿವೃದ್ಧಿ ಇಲಾಖೆ ಎಇಇ ರವಿಕುಮಾರ್, ಪಶು ಇಲಾಖೆ ಸಿದ್ದನಗೌಡ ಇತರರು ಇದ್ದರು.
ತಡವಾಗಿ ಬಂದ ಪಿಡಿಓ
ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ‍್ಯಕ್ರಮಕ್ಕೆ ಹಂಚಿಹಳ್ಳಿ ಗ್ರಾ.ಪಂ. ಪಿಡಿಓ ಮಂಜುಳಾ ಅವರು ತಡವಾಗಿ ಬಂದಿರುವ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು ಸಾರ‍್ವಜನಿಕ ವಲಯದಲ್ಲಿ ಚರ್ಚೆಗೀಡಾಯಿತು. ಸರ್ಕಾರಿ ಕಾರ‍್ಯಕ್ರಮಕ್ಕೆ ಪಿಡಿಓ ಅವರು ತಡವಾಗಿ ಬರುವ ಮೂಲಕ ನಿರ್ಲಕ್ಷ ತೋರಿದ್ದಾರೆ. ಈ ಹಿಂದೆ ಜಟ್ಟಿಅಗ್ರಹಾರ ಗ್ರಾ.ಪಂ. ವ್ಯಾಪ್ತಿಯ ನವಿಲುಕುರಿಕೆಯಲ್ಲಿ ಕಳೆದ ತಿಂಗಳು ನಡೆದ ಕಾರ‍್ಯಕ್ರಮಕ್ಕೂ ಆಗ ಅಗ್ರಹಾರ ಪಂಚಾಯಿತಿ ಪಿಡಿಓ ಆಗಿದ್ದ ಮಂಜುಳ ಅವರು ತಡವಾಗಿ ಬರುವ ಮೂಲಕ ನಿರ್ಲಕ್ಷ ತೋರಿದ್ದರು ಎಂದೆಲ್ಲಾ ಮಾತುಗಳು ಕೇಳಿ ಬಂದವು. ಹಾಗೂ ಹಂಚಿಹಳ್ಳಿ ಗ್ರಾಮಪಂಚಾಯಿತಿ ಉಪಾಧ್ಯಕ್ಷ ರಂಗನಾಥ್, ಸದಸ್ಯ ರಾಜಶೇಖರ್ ಹೊರತುಪಡಿಸಿ ಅಧ್ಯಕ್ಷರು ಹಾಗೂ ಉಳಿದ ಸದಸ್ಯರ ಗೈರು ಹಾಜರಿ ಬಗ್ಗೆಯೂ ಆಕ್ರೋಶ ವ್ಯಕ್ತವಾಯಿತು.