Advertisement

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

09:33 PM Jan 03, 2025 | Team Udayavani |

ಕೊರಟಗೆರೆ: ಮಿನಿ ಲಾಲ್‌ಬಾಗ್‌ಗೆ ವನಭೇಟಿ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಮುಖ್ಯ ರಸ್ತೆ ತಿರುವಿನಲ್ಲಿ ಟಾಟಾ ಎಸ್‌ ಪಲ್ಪಿ ಹೊಡೆದು ವಾಹನದಲ್ಲಿದ್ದ 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿ 20ಕ್ಕೂ ಅಧಿಕ ಮಕ್ಕಳ ಜತೆ ಶಿಕ್ಷಕರು ಅಪಾಯದಿಂದ ಪಾರಾಗಿರುವ ಘಟನೆ ಗುರುವಾರ ನಡೆದಿದೆ.

Advertisement

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ, ಮಾವತ್ತೂರು ಮುಖ್ಯರಸ್ತೆ ಗೌಡನಕುಂಟೆ ಕ್ರಾಸಿನ ಬಳಿ ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಎಸ್‌ ಪಲ್ಟಿಹೊಡೆದಿದ್ದರಿಂದ 15 ಮಕ್ಕಳ ಕೈಕಾಲು, ತಲೆ, ಹೊಟ್ಟೆ ಮತ್ತು ಮೂಗಿಗೆ ಗಂಭೀರ ಗಾಯಗಳಾಗಿವೆ. ಎಲ್ಲರೂ ದೊಡ್ಡಸಾಗ್ಗೆರೆ, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಂಪುಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಿಂದ ಹೊರ ಸಂಚಾರದ ರೂಪದಲ್ಲಿ 5ಜನ ಶಿಕ್ಷಕರ ಜತೆ 99 ಮಕ್ಕಳನ್ನು ದೊಡ್ಡಸಾಗ್ಗೆರೆ ಬಳಿ ಮಿನಿ ಲಾಲ್‌ಬಾಗ್‌ ವೀಕ್ಷಣೆಗೆ ಟಾಟಾ ಏಸ್‌ನಲ್ಲಿ ಒಮ್ಮೆಗೆ 35 ಮಕ್ಕಳಂತೆ ಕುರಿಗಳ ಹಾಗೇ ತುಂಬಿಕೊಂಡು ಹೋಗಿದ್ದ ಶಾಲೆ ಆಡಳಿತ ಮತ್ತು ಶಿಕ್ಷಣ ಇಲಾಖೆ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ಭದ್ರತೆಯೇ ಇಲ್ಲದ ಟಾಟಾ ಎಸ್‌ನಲ್ಲಿ ಸರ್ಕಾರಿ ಶಾಲೆ ಮಕ್ಕಳನ್ನು ಕರೆದುಕೊಂಡು ಹೋಗಲು ಕೊರಟಗೆರೆ ಬಿಇಒ ನಟರಾಜ್‌, ಮುಖ್ಯ ಶಿಕ್ಷಕ ಹನುಮಂತರಾಯಪ್ಪ ಅನುಮತಿ ನೀಡಿದ್ದಾದರೂ ಏಕೆ. ಟಾಟಾ ಏಸ್‌ ವಾಹನ ಚಾಲಕ ಹಿಂದಿ ಶಿಕ್ಷಕ ಅನಂತರಾಮು ಆಗಿದ್ದರು ಎನ್ನಲಾಗಿದೆ.

ಮಕ್ಕಳಿಗೆ ಆಸರೆಯಾದ ಪಿಎಸ್‌ಐ
ಗೌಡನಕೆರೆ ಸಮೀಪ ಟಾಟಾಎಸ್‌ ಪಲ್ಟಿ ಹೊಡೆದ ಮರು ಕ್ಷಣವೇ ಸ್ಥಳಕ್ಕೆ ಧಾವಿಸಿದ ಕೋಳಾಲ ಪಿಎಸ್‌ಐ ಯೋಗೀಶ್‌, ಸ್ಥಳೀಯರ ಸಹಾಯದಿಂದ 35 ಮಕ್ಕಳನ್ನು ವಾಹನದಿಂದ ಹೊರತೆಗೆದು ತನ್ನ ಖಾಸಗಿ ವಾಹನದಲ್ಲಿ 1 ಮಕ್ಕಳನ್ನು ದೊಡ್ಡಸಾಗ್ಗೆರೆ, ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

Advertisement

ತುರ್ತು ಚಿಕಿತ್ಸೆಗೆ ಗೃಹ ಸಚಿವರ ಸೂಚನೆ
ವಾಹನ ಪಲ್ಟಿಯಿಂದ ತೀವ್ರವಾಗಿ ಗಾಯಗೊಂಡ ಮಿಥುನ್‌, ಹೇಮಂತ್‌, ಪ್ರಭಾಸ್‌, ಜಿತೇಂದ್ರ ಎಂಬ ನಾಲ್ಕು ಜನ ಮಕ್ಕಳನ್ನು ಗೃಹ ಸಚಿವರ ಸೂಚನೆಯಂತೆ ತುರ್ತಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿ ಉತ್ತಮ ಚಿಕಿತ್ಸೆಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಶುಭಾಕಲ್ಯಾಣ, ತಹಶೀಲ್ದಾರ್‌ ಮಂಜುನಾಥ ಮತ್ತಿತರರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ವನಭೇಟಿ ಮುಗಿಸಿಕೊಂಡು ಬರುವಾಗ ಟಾಟಾ ಏಸ್‌ ಪಲ್ಟಿಯಾಗಿದ್ದು ಗೃಹ ಸಚಿವರ ಸೂಚನೆಯಂತೆ ಎಲ್ಲಾ ಮಕ್ಕಳಿಗೂ ದೊಡ್ಡಸಾಗ್ಗೆರೆ, ಕೊರಟಗೆರೆ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಕೊಡಿಸಲಾಗಿದೆ. ನಾಲ್ವರನ್ನು ತುಮಕೂರು ಆಸ್ಪತ್ರೆಗೆ ರವಾನಿಸಲಾಗಿದೆ. ಮಕ್ಕಳ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ ಆಗುತ್ತೆ.
-ಕೆ.ಮಂಜುನಾಥ, ತಹಶೀಲ್ದಾರ್‌

Advertisement

Udayavani is now on Telegram. Click here to join our channel and stay updated with the latest news.

Next