Advertisement

Koratagere: ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಿಢೀರ್ ದಾಳಿ

06:04 PM Sep 15, 2023 | Team Udayavani |

ಕೊರಟಗೆರೆ: ಜಯಮಂಗಲಿ ನದಿಯ ತೀತಾ ಜಲಾಶಯದ ಒಡಲಿಗೆ ಕನ್ನ ಹಾಕಲು ಯತ್ನಿಸುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಯ ಮೇಲೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನ ವಶಕ್ಕೆ ಪಡೆದಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.

Advertisement

ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ವಜ್ಜನಕುರಿಕೆ ಗ್ರಾಪಂ ವ್ಯಾಪ್ತಿಯ ಮೋರಗಾನಹಳ್ಳಿಯ ಸಮೀಪದ ತೀತಾ ಜಲಾಶಯದ ಹಿಂಭಾಗದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ಕೊರಟಗೆರೆ ತಹಶೀಲ್ದಾರ್ ಮುನಿಶಾಮಿರೆಡ್ಡಿ ದಿಢೀರ್ ದಾಳಿಸಿ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಸೇರಿದಂತೆ ಹತ್ತಾರು ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಜಯಮಂಗಲಿ ನದಿ ಮರಳಿಗೆ ಕನ್ನ
ಗರುಡಾಚಲ ಮತ್ತು ಜಯಮಂಗಲಿ ನದಿಯ ತೀತಾ ಜಲಾಶಯ ಮತ್ತು ಮಾವತ್ತೂರು ಕೆರೆಯ ಹಿಂಭಾಗ ಸಂಜೆಯಾದ್ರೇ ಸಾಕು ಜೆಸಿಬಿ ಮತ್ತು ಟ್ರಾಕ್ಟರ್ ಗಳ ಆರ್ಭಟ ಪ್ರಾರಂಭವಾಗಿದೆ. ಕೋಳಾಲ ಪೊಲೀಸರಿಗೆ ಮಾಹಿತಿ ಲಭ್ಯವಿದ್ದರೂ ಹೊಂದಾಣಿಕೆಯ ಕಾರಣದಿಂದ ಮೌನ ವಹಿಸುತ್ತಾರೆ. ಸ್ಥಳೀಯರು ಮಾಹಿತಿ ನೀಡಿದರೆ ಅವರ ಮೇಲೆ ಮರಳು ದಂಧೆಕೋರರಿಂದ ಧಮ್ಕಿ ಹಾಕಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ.

ಲಾರಿ ಮೂಲಕ ಬೆಂಗಳೂರಿಗೆ ರವಾನೆ
ತೀತಾ ಜಲಾಶಯದ ಮರಳನ್ನು ಟ್ರ್ಯಾಕ್ಟರ್ ಮೂಲಕ ರಾತ್ರೋರಾತ್ರಿ ಹೊರಗಡೆ ಸಾಗಿಸಲಾಗುತ್ತದೆ. ಗ್ರಾಮದ ಹೊರಗಡೆ ಐದಾರು ಕಡೆಯಲ್ಲಿ ಮರಳಿನ ರಾಶಿಯನ್ನೇ ಮಾಡಿ ನಂತರ ಲಾರಿಗೆ ರಾತ್ರೋರಾತ್ರಿ ತುಂಬಿ ಬೆಂಗಳೂರು ನಗರಕ್ಕೆ ರವಾನಿಸಲಾಗುತ್ತದೆ. ಕೋಳಾಲ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಅಕ್ರಮ ಮರಳು ದಂಧೆಯು ಕಳೆದ 2 ತಿಂಗಳಿಂದ ನಡೆಯುತ್ತಿದೆ.

ಜಯಮಂಗಲಿ ನದಿಯಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದ ಟ್ರ್ಯಾಕ್ಟರ್ ಮತ್ತು ದ್ವಿಚಕ್ರ ವಾಹನವನ್ನು ಕೊರಟಗೆರೆ ತಹಶೀಲ್ದಾರ್ ಕೋಳಾಲ ಪಿ.ಎಸೈ ರೇಣುಕಾ ಅವರಿಗೆ ತಡರಾತ್ರಿಯೇ ಹಸ್ತಾಂತರ ಮಾಡಿ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದಾರೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next