Advertisement

Koratagere; ಮಹಿಳೆಯರ ಮೇಲೆ ಸರಕಾರಿ ಬಸ್ ಹತ್ತಿಸಲು ಯತ್ನ; ವ್ಯಾಪಕ ಆಕ್ರೋಶ

08:17 PM Jun 17, 2023 | Team Udayavani |

ಕೊರಟಗೆರೆ: ಗೊರವನಹಳ್ಳಿ ಮಹಾಲಕ್ಷ್ಮೀಯ ದರ್ಶನಕ್ಕೆ ಹತ್ತಾರು ಕಡೆಗಳಿಂದ ಮಹಿಳೆಯರು ಆಗಮಿಸುತ್ತಿದ್ದು, ರಾಜ್ಯ ಹೆದ್ದಾರಿಯಲ್ಲಿ ದಿನಪೂರ್ತಿ ಬಸ್‌ಗಾಗಿ ಕಾದರೂ ಬಸ್ ಸಿಗದೇ ಮಹಿಳೆಯರು ಪರದಾಡುತ್ತಿದ್ದಾರೆ. ಜಾಗವಿಲ್ಲದ ಕಾರಣ ಬಸ್ ನಿಲ್ಲಿಸಲು ಚಾಲಕ ಒಪ್ಪದಿದ್ದಾಗ ಮಹಿಳೆಯರು ತಡೆಯಲು ಪ್ರಯತ್ನಿಸಿದ್ದಾರೆ, ಈ ವೇಳೆ ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಪ್ರಯತ್ನಿಸಿದ್ದಾನೆ ಎಂದು ಚಾಲಕನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.

Advertisement

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂಯ ಜಿ.ನಾಗೇನಹಳ್ಳಿ ಬಳಿಯ ಪಾವಗಡ-ದಾಬಸ್‌ಪೇಟೆಯ ರಾಜ್ಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯ ಹತ್ತಾರು ಜಿಲ್ಲೆಗಳಿಂದ ಶುಕ್ರವಾರ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಆಗಮಿಸಿದ್ದಾರೆ. ಗೊರವನಹಳ್ಳಿ ಪ್ರವಾಸಿ ಕ್ಷೇತ್ರದಿಂದ ಮತ್ತೆ ತೆರಳಲು ಸಮರ್ಪಕ ಸರಕಾರಿ ಬಸ್ಸಿನ ವ್ಯವಸ್ಥೆ ಇಲ್ಲದೇ ಮಹಿಳೆಯರಿಗೆ ಸಂಕಷ್ಟ ಎದುರಾಗಿದೆ.

ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೆ ಸಮರ್ಪಕ ಸರಕಾರಿ ಬಸ್ಸಿನ ಸೌಲಭ್ಯವಿಲ್ಲ. ಕೊರಟಗೆರೆ ಮತ್ತು ಜಿ.ನಾಗೇನಹಳ್ಳಿ ಮಾರ್ಗವಾಗಿ ಬಂದು ಆಟೋ ಅಥವಾ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ತೆರಳ ಬೇಕಿದೆ. ಖಾಸಗಿ ವಾಹನ ಸಿಗದಿದ್ದರೆ ಪ್ರವಾಸಿಗರು ಮತ್ತು ಮಹಿಳೆಯರಿಗೆ ಇನ್ನಷ್ಟು ಸಮಸ್ಯೆ ಸೃಷ್ಟಿ ಆಗಲಿದೆ. ರಾಜ್ಯ ಸರಕಾರ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ತೆರಳಲು ಸಮರ್ಪಕ ಸರಕಾರಿ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕಿದೆ.

3 ಗಂಟೆ ಕಾದರೂ ನಿಲ್ಲಿಸದ ಸರಕಾರಿ ಬಸ್

ಮಹಾಲಕ್ಷ್ಮೀ ದೇವಿಯ ದರ್ಶನ ಮುಗಿಸಿಕೊಂಡು ಗೊರವನಹಳ್ಳಿಯಿಂದ ಜಿ.ನಾಗೇನಹಳ್ಳಿಗೆ ಆಟೋ ಮೂಲಕ ಮಹಿಳೆಯರು ಆಗಮಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ೩ಗಂಟೆಯಾದ್ರು ಚಾಲಕ ಸರಕಾರ ಬಸ್ಸನ್ನು ನಿಲ್ಲಿಸದೇ ಹಾಗೇ ಹೊರಟು ಹೋಗಿದ್ದಾರೆ. ರೊಚ್ಚಿಗೆದ್ದ ಮಹಿಳೆಯರು ಬಸ್ಸಿಗೆ ಅಡ್ಡ ನಿಂತುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಲಕ ಬಸ್ ನಿಲ್ಲಿಸದೇ ಮಹಿಳೆಯರ ಮೇಲೆ ಹತ್ತಿಸಲು ಪ್ರಯತ್ನ ಪಟ್ಟಿರುವ ಘಟನೆ ಜಿ.ನಾಗೇನಹಳ್ಳಿ ಬಳಿ ಶುಕ್ರವಾರ ನಡೆದಿದೆ.

Advertisement

ಸಾರಿಗೆ ಇಲಾಖೆ ಜತೆ ತಹಶೀಲ್ದಾರ್ ಸಭೆ

ತುಮಕೂರು, ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಶುಕ್ರವಾರ ವಿಶೇಷ ಸಭೆ ನಡೆಸಿದ್ದಾರೆ. ಶಕ್ತಿ ಯೋಜನೆಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗ್ರಾಮೀಣ ಪ್ರದೇಶ, ಪ್ರವಾಸಿ ಕ್ಷೇತ್ರ, ಬಸ್ ನಿಲ್ದಾಣ ಮತ್ತು ರಾಜ್ಯ ಹೆದ್ದಾರಿಯ ಕಡೆಯಲ್ಲಿ ವಿಶೇಷ ಗಮನ ಹರಿಸಿ ಬಸ್ಸುಗಳ ಕೊರತೆ ಆಗದಂತೆ ಕ್ರಮಕ್ಕೆ ಆದೇಶ ಮಾಡಲಾಗಿದೆ.

ಮಾರುವೇಷ ಹಾಕಿದ ತಹಶೀಲ್ದಾರ್

ಪ್ರಯಾಣಿಕರ ಮನವಿಗೆ ತಕ್ಷಣ ಸ್ಪಂಧಿಸಿದ ತಹಶೀಲ್ದಾರ್ ಮುನಿಶಾಮಿ ರೆಡ್ಡಿ ಸ್ಥಳಕ್ಕೆ ಧಾವಿಸಿದ್ದಾರೆ. ಜಿ.ನಾಗೇನಹಳ್ಳಿ ಬಸ್ ನಿಲ್ದಾಣದಿಂದ ತಮ್ಮ ಸರಕಾರಿ ವಾಹನ ಮುಂದಕ್ಕೆ ನಿಲ್ಲಿಸಿ ಪ್ರಯಾಣಿಕರ ವೇಷದಲ್ಲಿ ಸರಕಾರಿ ಬಸ್ ನಿಲ್ಲಿಸಲು ಪ್ರಯತ್ನಿಸಿದ್ದಾರೆ. 4 ಸರಕಾರಿ ಬಸ್‌ಗಳು ನಿಲ್ಲಿಸದೇ ಹಾಗೇ ಹೊರಟು ಹೋಗಿವೆ. ಸ್ವಲ್ಪ ಮುಂದೆ ತಹಶೀಲ್ದಾರ್ ವಾಹನ ಕಂಡು ಮತ್ತೆ ನಿಲ್ಲಿಸಿದ್ದಾರೆ. ಸರಕಾರಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಸ್ಥಳದಲ್ಲಿಯೇ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಗೊರವನಹಳ್ಳಿ ಮಹಾಲಕ್ಷ್ಮೀ ದರ್ಶನಕ್ಕೆ ಆಗಮಿಸಿದ್ದೇ ನಮ್ಮ ತಪ್ಪಾಗಿದೆ. 4 ಗಂಟೆ ಕಾದರೂ ರಾಜ್ಯ ಹೆದ್ದಾರಿಯಲ್ಲಿ ಸರಕಾರಿ ಬಸ್ ನಿಲ್ಲಿಸಲೇ ಇಲ್ಲ. ಗಂಡಸರಿಗೆ ತಬ್ಬಿಕೊಂಡೇ ಬಸ್ ಹತ್ತುವಂತೆ ಚಾಲಕ ಸೂಚನೆ ನೀಡ್ತಾರೇ. ಪುಟಾಣಿ ಮಕ್ಕಳ ಜತೆ ನಾವು ಸಂಚಾರ ಮಾಡೋದು ಹೇಗೆ. ಸರಕಾರಿ ಬಸ್ ಅಡ್ಡಹಾಕಲು ನಾವು ಯತ್ನಿಸಿದ್ರೇ ನಮ್ಮ ಮೇಲೆ ಹತ್ತಿಸಲು ಬರ್ತಾರೇ.- ಕಾಳಮ್ಮ. ನೊಂದ ಮಹಿಳೆ. ಕೊಳ್ಳೆಗಾಲ

4 ಗಂಟೆಯಿಂದ 7 ಗಂಟೆವರೆಗೆ ಬಸ್ ನಿಲ್ಲಿಸದೇ ಸಮಸ್ಯೆ ಆಗಿತ್ತು. ನಾನೇ ಖುದ್ದಾಗಿ ಬಸ್ ನಿಲ್ಲಿಸಿದರೂ ಚಾಲಕ ನಿಲ್ಲಿಸಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳ ಜತೆ ವಿಶೇಷ ಸಭೆ ನಡೆಸಿದ್ದೇನೆ. ರಾಜ್ಯ ಹೆದ್ದಾರಿಯ ಜಿ.ನಾಗೇನಹಳ್ಳಿ ಬಳಿ ಟಿಸಿ ಪಾಯಿಂಟ್ ಹಾಕಲಾಗಿದೆ. ಮಹಿಳೆಯರ ಮೇಲೆ ಬಸ್ ಹತ್ತಿಸಲು ಪ್ರಯತ್ನ ಪಟ್ಟ ಚಾಲಕನ ಪತ್ತೆಗೆ ಸೂಚನೆ ನೀಡಲಾಗಿದೆ. -ಮುನಿಶಾಮಿ ರೆಡ್ಡಿ. ತಹಶೀಲ್ದಾರ್, ಕೊರಟಗೆರೆ

ತಹಶೀಲ್ದಾರ್ ಮತ್ತು ಸಾರಿಗೆ ಇಲಾಖೆಯಿಂದ ಜಂಟಿ ಈಗಾಗಲೇ ಸ್ಥಳ ಪರಿಶೀಲನೆ ನಡೆದಿದೆ. ಪ್ರವಾಸಿಕ್ಷೇತ್ರಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಪರಿಣಾಮ ಸಮಸ್ಯೆ ಸೃಷ್ಟಿಯಾಗಿದೆ. ಸರಕಾರಿ ಬಸ್ಸಿನಲ್ಲಿ ೮೦ಜನ ಇದ್ದ ಪರಿಣಾಮ ಚಾಲಕ ಬಸ್ ನಿಲ್ಲಿಸಿಲ್ಲ ಅಷ್ಟೆ. ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ತುಮಕೂರು ಜಿಲ್ಲೆಯ ಎಲ್ಲಾ ಡಿಫೋ ವ್ಯವಸ್ಥಾಪಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. -ಗಜೇಂದ್ರಕುಮಾರ್. ವಿಭಾಗೀಯ ನಿಯಂತ್ರಣಾಧಿಕಾರಿ. ಸಾರಿಗೆ ಇಲಾಖೆ. ತುಮಕೂರು

Advertisement

Udayavani is now on Telegram. Click here to join our channel and stay updated with the latest news.

Next