ಕೊರಟಗೆರೆ: ಪಿಡಬ್ಲ್ಯೂ ಡಿ ಇಲಾಖೆಯ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್ ಕೊರಟಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುವ ಉದ್ದೇಶದಿಂದ ರಾಜಕೀಯ ಪಕ್ಷದ ನಾಯಕರಂತೆ 10 ತಿಂಗಳಿಂದ ಕೆಲಸ ಮಾಡಿದ್ದಾರೆ. ಕೇಂದ್ರ ಸರಕಾರದ ಸೇವಾ ನಿಯಮವನ್ನು ಉಲ್ಲಂಘಿಸಿ ಗುತ್ತಿಗೆದಾರರಿಗೆ ತುಂಡು ಗುತ್ತಿಗೆಯನ್ನು ನೀಡಿದ್ದಾರೆ ಎಂದು ತುಮಕೂರು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಡಾ.ವಿಶ್ವನಾಥ್ ಆರೋಪ ಮಾಡಿದರು.
ಕೊರಟಗೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಮ್ ಆದ್ಮಿ ಪಾರ್ಟಿಯ ತುಮಕೂರು ಘಟಕದಿಂದ ಭಾನುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ಪಿಡಬ್ಲ್ಯೂ ಡಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‌ಕುಮಾರ್ ಅಧಿಕಾರ ದುರುಪಯೋಗ ಮತ್ತು ಸೇವಾ ನಿಯಮವನ್ನು ಉಲ್ಲಂಘನೆ ಮಾಡಿ ಕೊರಟಗೆರೆ ಕ್ಷೇತ್ರದಲ್ಲಿ ಹತ್ತಾರು ಖಾಸಗಿ ಕಾರ್ಯಕ್ರಮ ರೂಪಿಸಿದ್ದಾರೆ. ರಾಜ್ಯ ಚುನಾವಣಾ ಆಯೋಗವು ಕೊರಟಗೆರೆ ಮೀಸಲು ಕ್ಷೇತ್ರದಿಂದ ಸ್ಪರ್ಧಿಸದಂತೆ ಕನಿಷ್ಟ 2 ವರ್ಷ ನಿರ್ಬಂಧ ಹೇರಬೇಕಿದೆ ಎಂದು ಒತ್ತಾಯ ಮಾಡಿದರು.
ಮಧುಗಿರಿ ಜಿಲ್ಲಾ ಆಮ್ ಆದ್ಮಿ ಪಾರ್ಟಿಯ ಉಸ್ತುವಾರಿ ಪ್ರೇಮಕುಮಾರ್ ಮಾತನಾಡಿ ಸರಕಾರಿ ಸೇವೆಯಲ್ಲಿ ೩೫ವರ್ಷ ಕೆಲಸ ಮಾಡಿರುವ ಅನಿಲ್‌ಕುಮಾರ್ ಕೊರಟಗೆರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಂತೆ. ಬಿಜೆಪಿ ಪಕ್ಷಕ್ಕೆ ಕೊರಟಗೆರೆ ಕ್ಷೇತ್ರದಲ್ಲಿ ಯಾರು ಸ್ಥಳೀಯ ಅಭ್ಯರ್ಥಿಯೇ ಸಿಗಲಿಲ್ಲವೇ. ಉನ್ನತ ಹುದ್ದೆಯ ಸುಖವನ್ನು ಅನುಭವಿಸಿ ಈಗ ಸಾರ್ವಜನಿಕರ ಕೆಲಸ ಮಾಡಲು ಸಾಧ್ಯವೇ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೊರಟಗೆರೆ ಮೀಸಲು ಕ್ಷೇತ್ರದ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ತಿಪಟೂರು ನರಸಿಂಹಮೂರ್ತಿ ಮಾತನಾಡಿ ಕೊರಟಗೆರೆ ಕ್ಷೇತ್ರದಲ್ಲಿ 7 ಸಾವಿರಕ್ಕೂ ಅಧಿಕ ಜನರ ಪರಿಚಯ ನನಗಿದೆ. ಛಲವಾದಿ ಸಂಘದ ರಾಜ್ಯ ಕಾರ್ಯದರ್ಶಿಯಾಗಿ 15 ವರ್ಷ ಕೆಲಸ ಮಾಡಿದ್ದಾರೆ. ಈಗ ಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿಯಾಗಿ ಕೊರಟಗೆರೆ ಮೀಸಲು ಕ್ಷೇತ್ರದಲ್ಲಿ ಸಾರ್ವಜನಿಕ ಜೀವನವನ್ನು ಪ್ರಾರಂಭ ಮಾಡಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಆಮ್‌ಆದ್ಮಿ ಪಾರ್ಟಿಯ ಜಿಲ್ಲಾ ಯುವ ಅಧ್ಯಕ್ಷ ವಿಮಲ್‌ಪಾಂಡೆ, ತಿಪಟೂರು ಅಧ್ಯಕ್ಷ ಚಿಕ್ಕಸ್ವಾಮಿಗೌಡ, ಕೊರಟಗೆರೆ ಕಾರ್ಯದರ್ಶಿ ಅನಂತಕುಮಾರ್, ಮುಖಂಡರಾದ ನಂಜುಂಡಪ್ಪ, ಪ್ರಜ್ವಲ್, ನಟರಾಜು, ನಾಗರಾಜು, ಹುಸೇನ್‌ಪಾಷ, ಚಿದಾನಂದ ಸೇರಿದಂತೆ ಇತರರು ಇದ್ದರು.