Advertisement

ಕೋರಂಟಿ ಗ್ಯಾರಂಟಿ ಹನುಮಾನ್‌ 

12:35 PM Jul 14, 2018 | |

 ವಾಯುಪುತ್ರ, ಹನುಮಂತ,  ಮಾರುತಿ, ಆಂಜನೇಯ, ಅಂಜನೀಪುತ್ರ ಹೀಗೆ  ನಾನಾ ಹೆಸರಿನಿಂದ ಕರೆಯಲ್ಪಡುವ ಹನುಮಂತನಿಗೆ ಮುಡಿಪಾದ  ಸಾಕಷ್ಟು  ದೇವಸ್ಥಾನಗಳು ನಮ್ಮ ರಾಜ್ಯದಲ್ಲಿವೆ.  ಇವುಗಳಲ್ಲಿ  ವಿಶಿಷ್ಟ ಎನಿಸುವ ದೇವಸ್ಥಾನವೊಂದು ಗುಲಬರ್ಗಾ  ನಗರದಲ್ಲಿದೆ. ಅದುವೇ  ಕೊರಂಟಿ  ಗ್ಯಾರಂಟಿ  ಹನುಮಾನ್‌  ಮಂದಿರ.

Advertisement

ನಗರದ ಪಿಡಿಎ ಕಾಲೇಜಿನ ಹತ್ತಿರ ಸ್ಥಾಪಿಸಲ್ಪಟ್ಟ  ಈ ದೇವಸ್ಥಾನಕ್ಕೆ ಈ  ಹೆಸರು ಬರಲು ಕಾರಣವಾಗಿರುವುದು  ಇಲ್ಲಿರುವ ಮೆಡಿಕಲ್‌ ಕಾಲೇಜು.  ಈ ಕಾಲೇಜಿನ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಪಾಸಾಗಲಿ ಎಂದು  ತುಂಬು ಭಕ್ತಿಯಿಂದ   ಹಾಗೂ  ಏಕಾಗ್ರಚಿತ್ತದಿಂದ  ಹನುಮಂತನನ್ನು ಪ್ರಾರ್ಥಿಸಿಕೊಳ್ಳುತ್ತಾರಂತೆ. ಅವರ  ಇಷ್ಟಾರ್ಥಗಳು  ಗ್ಯಾರಂಟಿಯಾಗಿ  ನೇರವೇರಿರುವುದಕ್ಕೆ ಇದಕ್ಕೆ  ಸಾಕಷ್ಟು  ಉದಾಹರಣೆಗಳಿವೆ. ಇತ್ತೀಚೆಗೆ  ಬರೀ ಈ  ಕಾಲೇಜು  ವಿದ್ಯಾರ್ಥಿಗಳು ಮಾತ್ರವಲ್ಲ   ಈ ದೇವಸ್ಥಾನಕ್ಕೆ   ಬರುವ   ಭಕ್ತಾದಿಗಳ  ಸಂಖ್ಯೆಯೂ ಹೆಚ್ಚಾಗಿದೆ.   ಇಲ್ಲಿನ   ಹನುಮಂತನ  ಎದುರಿಗೆ ಕುಳಿತು  ಅರ್ಧಗಂಟೆಯ ಕಾಲ  ಕಣ್ಣುಮುಚ್ಚಿ   ಏಕಾಗ್ರತೆಯಿಂದ  ಹನುಮಾನ್‌  ಚಾಲಿಸ  ಪಠಿಸಿದರೆ ಸಾಕು,  ನಿಮ್ಮ   ಇಷ್ಟಾರ್ಥಗಳು  ಈಡೇರುವುದು ಗ್ಯಾರಂಟಿ ಎನ್ನುತ್ತಾರೆ  ಭಕ್ತಾದಿಗಳು.

ಹಿಂದಿನ ಕಾಲದಲ್ಲಿ   ಸಾಮಾನ್ಯವಾಗಿ  ಎಲ್ಲಾ  ಊರುಗಳಲ್ಲಿ   ಹನುಮಂತನ  ದೇವಸ್ಥಾನವನ್ನು   ಊರ ಹೊರಗೆ  ನಿರ್ಮಿಸಲಾಗುತ್ತಿತ್ತು.   ಏಕೆಂದರೆ  ಯಾವುದೇ ದುಷ್ಟ ಶಕ್ತಿ ಊರನ್ನು  ಪ್ರವೇಶಿಸದಂತೆ  ಈ ಹನುಮಂತ ಊರನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ ಜನರಲ್ಲಿತ್ತು.   ಅದರಂತೆ  ಈ ಕೊರಂಟಿ ಹನುಮಾನ್‌  ದೇವಸ್ಥಾನವನ್ನೂ ಕೂಡ ಊರ ಹೊರಗೆ  ನಿರ್ಮಿಸಲಾಗಿತ್ತು.   ಆದರೆ ಇತ್ತೀಚೆಗೆ ಊರು ಬೆಳೆದಂತೆ ಹನುಮನ ದೇವಾಲಯವನ್ನೂ ದಾಟಿ ಮನೆಗಳು ಎದ್ದು ನಿಂತಿವೆ. ಪರಿಣಾಮ, ಹನುಮ ದೇವಾಲಯ  ನಗರದ ಒಳಗೆ ಪ್ರವೇಶಿಸಿಬಿಟ್ಟಿದೆ.  ಹಾಗೆಯೇ, ಆ ಕಾಲದಲ್ಲಿ ಬರುತ್ತಿದ್ದ   ಮಹಾಮಾರಿ ರೋಗಗಳು ಜನರಿಗೆ  ಹರಡದಂತೆ ಎಚ್ಚರಿಕೆ  ತೋರುವ  ನಿಟ್ಟಿನಲ್ಲಿ  ಮಹಾಮಾರಿ ರೋಗಕ್ಕೆ  ತುತ್ತಾದ  ಜನರನ್ನು  ಊರ  ಹೊರಗಿರುವ  ಆಸ್ಪತ್ರೆಯಲ್ಲಿಯೇ ಇರಿಸಿ ಅವರಿಗೆ ಚಿಕಿತ್ಸೆ  ನೀಡಲಾಗುತ್ತಿತ್ತಂತೆ.    ಹಾಗಾಗಿ, ಆಸ್ಪತ್ರೆಗೆ   ಬರುತ್ತಿದ್ದ  ರೋಗಿಗಳು  ರೋಗ  ವಾಸಿಯಾಗಲೆಂದು  ಹನುಮಂತನೆದುರು ಕುಳಿತು  ಏಕಾಗ್ರಚಿತ್ತದಿಂದ  ಪ್ರಾರ್ಥಿಸಿಕೊಳುತ್ತಿದ್ದರಂತೆ. ಅಂದಿನಿಂದ   ಇಂದಿನರವರೆಗೂ   ಈ  ಕೊರಂಟಿ ಹನುಮಾನ್‌ ದೇವಸ್ಥಾನಕ್ಕೆ  ಬಂದು ಬೇಡಿಕೊಂಡರೆ  ಅವರ   ಇಷ್ಟಾರ್ಥ ನೆರವೇರುತ್ತದೆ . ಅದೇ ಕಾರಣಕ್ಕಾಗಿ  ಈ ದೇವಸ್ಥಾನಕ್ಕೆ  ಕೊರಂಟಿ ಗ್ಯಾರಂಟಿ ಹನುಮಾನ್‌  ದೇವಸ್ಥಾನ  ಎಂಬ   ಹೆಸರು ಬಂದಿದೆ ಎನ್ನಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲೂ ಮರಗಿಡಗಳನ್ನು ಬೆಳೆಸಿದ್ದಾರೆ.  ಈ ದೇವಸ್ಥಾನದ ಪಕ್ಕದಲ್ಲಿಯೇ ಕುಳಿತಿರುವ ಭಂಗಿಯ ಹನುಮಾನ್‌ ವಿಗ್ರಹವನ್ನೂ ಸ್ಥಾಪಿಸಲಾಗಿದೆ. ಅದರ ಸುತ್ತಮುತ್ತಲೂ ಸುಂದರವಾದ  ಉದ್ಯಾನವನವನ್ನು  ನಿರ್ಮಿಸಲಾಗಿದೆ. ಸಂಜೆಯಾಗುತ್ತಿದ್ದಂತೆ ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತದೆ. 
 ಇನ್ನು  ಮದುವೆ  ವಿಳಂಬ,   ಮಕ್ಕಳಾಗದವರು, ವೃದ್ಧರು,  ರೋಗಿಗಳು  ಅಲ್ಲದೇ   ಎಲ್ಲಾ  ವರ್ಗದ  ಜನರೂ  ತಮ್ಮ  ತಮ್ಮ  ಇಷ್ಟಾರ್ಥ  ಸಿದ್ಧಿಗಾಗಿ ಇಲ್ಲಿ ಬರುತ್ತಿದ್ದಾರೆ. 
ತಲುಪುವ  ಮಾರ್ಗ : ಗುಲ್ಬರ್ಗಾ ನಗರಕ್ಕೆ  ಬಂದು ಅಲ್ಲಿಂದ  ಆಟೋ ಮೂಲಕ ದೇವಸ್ಥಾನ  ತಲುಪಬಹುದು.

ಈ ಹನುಮನ ಎದುರು ಕುಳಿತು ಅರ್ಧಗಂಟೆ ಶ್ರದ್ಧಾ ಭಕ್ತಿಯಿಂದ ಹನುಮಾನ್‌ ಚಾಲಿಸಾ ಪಠಿಸಿ, ನಂತರ ಮನದಾಸೆಯನ್ನು ಹೇಳಿಕೊಂಡರೆ ಅದು ಗ್ಯಾರಂಟಿ ಈಡೇರುತ್ತದಂತೆ. ಅದೇ ಕಾರಣಕ್ಕೆ ಈ ದೇವರಿಗೆ ಕೋರಂಟಿ ಗ್ಯಾರಂಟಿ ಹನುಮಾನ್‌ ಎಂಬ ಹೆಸರು ಬಂದಿದೆಯಂತೆ !

Advertisement

ಆಶಾ. ಎಸ್‌. ಕುಲಕರ್ಣಿ

Advertisement

Udayavani is now on Telegram. Click here to join our channel and stay updated with the latest news.

Next