Advertisement

ಕೊರಗಜ್ಜ ದೈವದ ವೇಷ ಧರಿಸಿದ್ದ ಮುಸ್ಲಿಂ ವರನಿಂದ ಕ್ಷಮೆ ಯಾಚನೆ

09:16 PM Jan 08, 2022 | Team Udayavani |

ವಿಟ್ಲ: ಮದುವೆ ಸಮಾರಂಭದಲ್ಲಿ ಕೊರಗಜ್ಜ ದೈವದ ವೇಷ ಧರಿಸಿ ಅವಹೇಳನ ಮಾಡಿದ್ದ ಮುಸ್ಲಿಂ ವರ ಕ್ಷಮೆ ಯಾಚಿಸುವ ವಿಡಿಯೋ ಬಹಿರಂಗವಾಗಿದೆ.

Advertisement

ತನ್ನ ಮತ್ತು ಇತರರ ವಿರುದ್ಧ ಪೊಲೀಸ್ ದೂರು ದಾಖಲಾದಾಗಿನಿಂದ ತಲೆಮರೆಸಿಕೊಂಡಿರುವ ಉಮರುಲ್ ಬಾಸಿತ್ ಕೇರಳದ ಅಜ್ಞಾತ ಸ್ಥಳದಿಂದ ಕ್ಷಮೆಯಾಚಿಸಿದ್ದು, ತನ್ನ ವರ್ತನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

“ನಾನು ಮತ್ತು ನನ್ನ ಸ್ನೇಹಿತರು ಉತ್ಸಾಹದಲ್ಲಿ ಕೇವಲ ಮೋಜಿಗಾಗಿ ಆ ವೇಷ ಧರಿಸಿದ್ದೇವೆ. ನಮಗೆ ಯಾವುದೇ ಸಮುದಾಯ, ದೇವರು ಅಥವಾ ಯಾರೊಬ್ಬರ ನಂಬಿಕೆಯನ್ನು ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ವಿರಲಿಲ್ಲ. ಮುಸ್ಲಿಂ ಸಮುದಾಯವನ್ನು ಅವಮಾನಿಸುವ ಉದ್ದೇಶ ನನಗಿರಲಿಲ್ಲ ಎಂದು ಬಸಿತ್ ವಿಡಿಯೋದಲ್ಲಿ ಹೇಳಿದ್ದಾನೆ.

“ನನಗೆ ಮತ್ತು ನನ್ನ ಸ್ನೇಹಿತರಿಗೆ ಎಲ್ಲಾ ಧರ್ಮಗಳ ಬಗ್ಗೆ ಗೌರವವಿದೆ. ಯಾವುದೇ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಹೇಳಿದ್ದಾನೆ.

ನಡು ರಸ್ತೆಯಲ್ಲಿ ನಿಲ್ಲಿಸಿ ಹುಚ್ಚು ಕಟ್ಟಿಸುತ್ತೇನೆ

Advertisement

ಇನ್ನೊಂದೆಡೆ ಮಂಗಳೂರಿನ ಅತ್ತಾವರದಲ್ಲಿ ಶುಕ್ರವಾರ ರಾತ್ರಿ ನಡೆದ ಕೊರಗಜ್ಜ ದೈವದ ಕೋಲ ಸೇವೆಯಲ್ಲಿ ದೈವದ ಆರಾಧನೆಯ ವೇಳೆ ಕೊರಗಜ್ಜ ವೇಷಧಾರಿ ನುಡಿ ನೀಡಿದ್ದು, ಈ ಮಣ್ಣಿನಲ್ಲಿ ನನ್ನ ಸಾನಿಧ್ಯ ಇರುವುದು ಹೌದಾದದ್ದೇ ಆದರೆ ನನ್ನನ್ನು ಅವಮಾನಿಸಿದವರನ್ನು ಹುಚ್ಚು ಕಟ್ಟಿಸಿ ರಸ್ತೆಯಲ್ಲಿ ತಂದು ನಿಲ್ಲಿಸುತ್ತೇನೆ ಎಂದು ಕಾರ್ಣಿಕ ನುಡಿದಿದ್ದಾರೆ.

ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಕೊಳ್ನಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬಸಿತ್ ಕೊರಗಜ್ಜ ದೈವದ ವೇಷ ಧರಿಸಿದ್ದ ವೀಡಿಯೊ ವೈರಲ್ ಆಗಿದ್ದು, ತುಳುನಾಡಿನ ಅತ್ಯಂತ ಪೂಜ್ಯ ದೈವಗಳಲ್ಲಿ ಒಬ್ಬನಾದ ಕೊರಗಜ್ಜನನ್ನು ಅವಮಾನಿಸಿದ್ದಕ್ಕಾಗಿ ಹಲವಾರು ತೀವ್ರ ಆಕ್ರೋಶ ಹೊರ ಹಾಕಿದ್ದರು. ವರನ ಕಡೆಯವರು ರಸ್ತೆಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದು, ವರನಿಗೆ ‘ಕೊರಗಜ್ಜ ದೈವ’ ವೇಷ ಹಾಕಲಾಗಿತ್ತು. ಅಡಿಕೆ ಎಲೆಯ ಟೋಪಿ ಧರಿಸಿ ಮುಖಕ್ಕೆ ಕಪ್ಪು ಮಸಿ ಬಳಿಯಲಾಗಿತ್ತು.

ಘಟನೆಯನ್ನು ಹಿಂದೂ ಸಂಘಟನೆಗಳು ಮಾತ್ರವಲ್ಲದೆ ಹಲವಾರು ಮುಸ್ಲಿಂ ಸಂಘಟನೆಗಳು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next