ವಿಟ್ಲ: ಮದುವೆ ಸಮಾರಂಭದಲ್ಲಿ ಮದುಮಗನಿಗೆ ಕೊರಗಜ್ಜನ ವೇಷ ಹಾಕಿ ಕುಣಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೊಳ್ನಾಡು ಗ್ರಾಮದ ಅಝೀಝ್ ಅವರ ಪುತ್ರಿಯ ಮದುವೆ ದಿನ ಈ ಘಟನೆ ನಡೆದಿದೆ.
ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ಅಝೀಝ್ ಪುತ್ರಿಯ ವಿವಾಹ ಮಧ್ಯಾಹ್ನ ನಡೆದಿದ್ದು, ಸಾವಿರಾರು ಮಂದಿಗೆ ಔತಣ ಕೂಟವನ್ನು ಏರ್ಪಡಿಸಿದ್ದರು. ಅದೇ ದಿನ ರಾತ್ರಿ ಮುಸ್ಲಿಂ ಸಂಪ್ರದಾಯದಂತೆ ವರ ತನ್ನ 50ಕ್ಕೂ ಹೆಚ್ಚು ಸ್ನೇಹಿತರೊಂದಿಗೆ ವಧುವಿನ ಮನೆಗೆ ಆಗಮಿಸಿದ್ದಾರೆ. ತಡರಾತ್ರಿ ಆಗಮಿಸಿದ ವರನ ಬಳಗ ವಧುವಿನ ಮನೆ ಮುಂದಿನ ರಸ್ತೆಯಲ್ಲಿ ಹಾಡು ಹೇಳಿ ಕುಣಿಯುತ್ತಾ ಬಂದಿದ್ದಾರೆ. ತುಳುನಾಡಿನ ಆರಾಧ್ಯ ದೈವವಾದ ಕೊರಗಜ್ಜನ ವೇಷ ಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿದುಕೊಂಡು ವರ ಆಗಮಿಸಿದ್ದಾರೆ ಎನ್ನಲಾಗಿದೆ.
ಕೊರಗಜ್ಜನ ವೇಷಭೂಷಣ ಧರಿಸಿ ತಲೆಗೆ ಅಡಿಕೆ ಹಾಳೆಯ ಟೋಪಿ ಹಾಕಿ ಮುಖಕ್ಕೆ ಮಸಿ ಬಳಿಕೊಂಡ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡುವಂತಿದೆ ಎಂದು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇಂತಹ ಕೃತ್ಯವನ್ನೆಸಗಿ ಹಿಂದೂಗಳ ನಂಬಿಕೆಯನ್ನು ಟೀಕಿಸಿದ್ದಾರೆ, ಅಷ್ಟೇ ಅಲ್ಲದೇ ಕೊರಗ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಸ್ವತ: ಮುಸ್ಲಿಂ ಸಮುದಾಯದವರೇ ಟೀಕಿಸಿದ್ದಲ್ಲದೇ ಹುಚ್ಚಾಟ ಪ್ರದರ್ಶಿಸಿದ ವರ ಮತ್ತು ಆತನ ಸಂಗಡಿಗರ ವಿರುದ್ಧ ಕಾನೂನು ಕ್ರಮ ಜರುಗಿಸುವ ಮೂಲಕ ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕೆಂದು ಎನ್ನುವಂತಹ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕೃತ್ಯವೆಸಗಿದ ವರ ಮತ್ತು ಆತನ ಸಂಗಡಿಗರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಈ ಬಗ್ಗೆ ಈ ಘಟನೆಯನ್ನು ಖಂಡಿಸುತ್ತೇವೆ. ಇದರ ವಿರುದ್ಧ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದರು.