Advertisement
ವಿವಿಧ ಜಾತಿಯ ಬಳ್ಳಿಗಳನ್ನು ಬಳಸಿ ಬುಟ್ಟಿ ಮಾಡುವ ಆದಿವಾಸಿ ಕೊರಗ ಸಮುದಾಯದವರು ಹಲವು ಕಾರಣಕ್ಕೆ ತಮ್ಮ ವೃತ್ತಿಯಿಂದ ಹಿಂದೆ ಸರಿಯುತ್ತಿದ್ದು, ಇಂತಹ ಪಸ್ಥಿತಿಯಲ್ಲಿ ನಾರಂಕೋಡಿಯ ಕೊರಗ ಕಾಲೊನಿಯ ಐದಾರು ಮನೆಯ ಬಹುತೇಕ ಮಂದಿ ಸಾಂಪ್ರದಾಯಿಕ ವೃತ್ತಿಯನ್ನೇ ಮುಂದುವರಿಸುತ್ತಿದೆ.
ಇಲ್ಲಿ ಪ್ರಮುಖವಾದ ವಿಚಾರವೆಂದರೆ ಕಾಲೊನಿಗೆ ಭೇಟಿ ಸಮರ್ಪಕವಾಗಿ ಪರಿಶೀಲನೆ ನಡೆಸಿದರೆ ಇಲ್ಲಿನ ಯಾವುದೇ ಮನೆಗಳು ಪೂರ್ಣ ಪ್ರಮಾಣದಲ್ಲಿ ಸುಸಜ್ಜಿತವಾಗಿಲ್ಲ. ಚಿಕ್ಕದಾದ ಮನೆಗಳಲ್ಲಿ ಅವರ ವಾಸ ಒಂದೆಡೆಯಾದರೆ ಇನ್ನು ಬುಟ್ಟಿ ಹೆಣೆಯುವುದು ಎಲ್ಲಿ ಎಂಬ ಪ್ರಶ್ನೆ ಕಾಡದೆ ಇರದು. ಬೇಸಗೆಯಲ್ಲಾದರೆ ಹೊರಗೆ ಕೂತು ಬುಟ್ಟಿ ಹೆಣೆಯಬಹುದಾಗಿದ್ದು, ಮಳೆಗಾಲದಲ್ಲಿ ಅದು ಸಾಧ್ಯವಿಲ್ಲ. ಕಾಡಿನಿಂದ ಹೊತ್ತು ತಂದ ಬಳ್ಳಿಗಳಿಗೆ ಸ್ವಲ್ಪ ನೀರು ಬಿದ್ದು ಕಪ್ಪಾದರೂ, ಮುಂದೆ ಅದರಿಂದ ಹೆಣೆದ ಬುಟ್ಟಿಗಳಿಗೆ ಬೇಡಿಕೆಯೇ ಇಲ್ಲ. ಹೀಗಾಗಿ ಎಲ್ಲಾ ಮನೆಯವರೂ ಜತೆ ಸೇರಿ ಬುಟ್ಟಿ ಹೆಣೆಯುವ ವೃತ್ತಿ ನಿರ್ವಹಿಸಲು ತಮಗೊಂದು ಶೆಡ್ ನಿರ್ಮಾಣವಾದರೆ ಬಳ್ಳಿಗಳನ್ನು ಸುರಕ್ಷಿತವಾಗಿ ರಕ್ಷಿಸುವ ಜತೆಗೆ ಹೆಣೆದ ಬುಟ್ಟಿಗಳನ್ನೂ ರಕ್ಷಿಸಬಹುದು ಎಂಬುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ.
Related Articles
Advertisement
ನಾಲ್ಕೈದು ಕಿ.ಮೀ. ಕಾಡುಹಾದಿ ಪಯಣನಾರಂಕೋಡಿ ಕೊರಗ ಕಾಲೊನಿಯಲ್ಲಿ ಕಳೆದ 20 ವರ್ಷಗಳಿಂದ ಕೊರಗರು ವಾಸವಾಗಿದ್ದು, ಒಟ್ಟು 6 ಮನೆಗಳಲ್ಲಿ 13 ಮಂದಿ ವಾಸಿಸುತ್ತಿದ್ದಾರೆ. ಕಾಲೊನಿಯ ನಿವಾಸಿಗಳಾದ ಮೈರೆ, ಬಲ್ಲು, ಅಂಗಾರೆ, ಸುಜಿತ್‌ಕುಮಾರ್ ಅವರ ಕುಟುಂಬಗಳು ಬುಟ್ಟಿ ಹೆಣೆಯುವ ಕಾಯಕವನ್ನೇ ಮಾಡುತ್ತಿದೆ. ಮನೆ ಮಂದಿ ಬಹುತೇಕ ಎಲ್ಲರೂ ಬುಟ್ಟಿ ಹೆಣೆಯುವ ಕಾಯಕದಲ್ಲಿ ತೊಡಗಿದ್ದು, ಬೆಳ್ಳಗೆದ್ದು ಒಂದು ಲೋಟ ಚಾಹಾ ಕುಡಿದು 7 ರ ಸುಮಾರಿಗೆ ಕಾಡಿಗೆ ಹೊರಡುತ್ತಾರೆ. ಪ್ರತಿನಿತ್ಯವೂ ಗುಂಡಿಮಜಲು, ಚನಿಲ, ಅಪ್ಪುಕೋಡಿ ಮೊದಲಾದ ಪ್ರದೇಶದ ನಾಲ್ಕೈದು ಕಿ.ಮೀ. ಕಾಡು ಹಾದಿಯಲ್ಲಿ ಸಂಚರಿಸಿ ಬಳ್ಳಿಗಳನ್ನು ಸಂಗ್ರಹಿಸುತ್ತಾರೆ. ಮಧ್ಯಾಹ್ನ 2.30 ರ ಸುಮಾರಿಗೆ ಮನೆಗೆ ಮರಳಿದರೆ ಊಟ ಮುಗಿಸಿ ಬಳಿಕ ಬುಟ್ಟಿ ಹೆಣೆಯಲು ಆರಂಭಿಸುತ್ತಾರೆ. ಕಾಡಿನಲ್ಲಿ ಸಿಗುವ ಎಂಜಿರ್, ಮಾದೇರ್, ಪೇರ್ ಎಂಬ ಬಳ್ಳಿಗಳಿಂದ ಬುಟ್ಟಿ, ಕಾಂಟ್ಯ, ಕುಡುಪು, ಕುರುವೆ, ತೊಟ್ಟೆ, ಕುತ್ತರಿ ಮೊದಲಾದ ಉತನ್ನಗಳನ್ನು ಹೆಣೆದು ಕಲ್ಲಡ್ಕ ಪ್ರದೇಶದಲ್ಲಿ ಮಾರಾಟ ಮಾಡುತ್ತಾರೆ.
ಕಳೆದ 20 ವರ್ಷಗಳಿಂದ ಈ ಕಾಲೊನಿಯಲ್ಲಿ ವಾಸಿಸುವ ಮಂದಿಗೆ ಕೃಷಿ ಭೂಮಿ ಹಂಚಿಕೆ ಮಾಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದ್ದು, ಈಗಾಗಲೇ 5 ಸೆಂಟ್ಸ್ ಮನೆ ಅಡಿ ಸ್ಥಳ ಈಗಾಗಲೇ ಅವರ ಹೆಸರಿಗಾಗಿದೆ. ಆದರೆ ತಮ್ಮ ಸ್ವಾಧೀನದಲ್ಲಿರುವ ಒಂದಷ್ಟು ಸರಕಾರಿ ಭೂಮಿಯನ್ನು ತಮಗೆ ನೀಡಬೇಕು ಎಂಬ ಬೇಡಿಕೆಯನ್ನು ಇಡುತ್ತಿದ್ದಾರೆ. ಕಾಲೊನಿ ನಿವಾಸಿ ಸುಜಿತ್‌ಕುಮಾರ್ ಅವರ ಮನೆ ಮುರುಕಲು ಸ್ಥಿತಿಯಲ್ಲಿದ್ದು, ಅದರ ಅಡಿ ಸ್ಥಳಕ್ಕೂ ದಾಖಲೆ ಇಲ್ಲ. ಯಾವುದೇ ಯೋಜನೆಯಲ್ಲಿ ಮನೆ ಮಂಜೂರಾಗಬೇಕಾದರೆ ಅಡಿ ಸ್ಥಳದ ದಾಖಲೆ ಕೇಳುತ್ತಿದ್ದಾರೆ. ಮನೆಗೆ ಶೌಚಾಲಯ, ವಿದ್ಯುತ್ ಸಂಪರ್ಕವೂ ಇಲ್ಲ ಎನ್ನುತ್ತಾರೆ ಕಾಲೊನಿ ವಾಸಿಗಳು. ಕಾಲೊನಿಯ ಮನೆಗಳಿಗೆ ಉಚಿತ ಗ್ಯಾಸ್ ಸಂಪರ್ಕ ಸಿಕ್ಕರೂ, ಬೆಲೆ ಏರಿಕೆಯ ಪರಿಣಾಮ ಕಳೆದ 6 ತಿಂಗಳಿನಿಂದ ಗ್ಯಾಸ್ ಉಪಯೋಗಿಸದೆ ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತಿದ್ದಾರೆ. ಪ್ರಸ್ತುತ ಕಾಲೊನಿಗೆ ಸರಿಯಾಗು ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ಐಟಿಡಿಪಿಯಿಂದ ನಮಗೆ ಮಂಜೂರಾದ ಕೊಳವೆಬಾವಿಯಿಂದಲೂ ಬೇರೆಯವರಿಗೆ ನೀರು ಕೊಡುತ್ತಾರೆ ಎಂಬುದು ಸ್ಥಳೀಯ ನಿವಾಸಿಗಳ ಆರೋಪವಾಗಿದೆ.
ಬುಟ್ಟಿ ಹೆಣೆಯುವ ಕಾರ್ಯ ನಿರ್ವಹಿಸಲು ಶೆಡ್ ಬೇಕು ಎಂಬುದು ನಮ್ಮ ಬೇಡಿಕೆಯಾಗಿದ್ದು, ಕೃಷಿ ಭೂಮಿ ಹಂಚಿಕೆಗೂ ಹೋರಾಟ ಮಾಡುತ್ತಾ ಬಂದಿದ್ದೇವೆ. ಮುಖ್ಯವಾಗಿ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಜತೆಗೆ ಕೃಷಿಗೂ ನೀರಿಗಾಗಿ ನೀಡಿದ ಕೊಳವೆಬಾವಿಯನ್ನು ಬೇರೆ ಕಡೆಗೆ ನೀರು ಪೂರೈಸಲು ಉಪಯೋಗಿಸುತ್ತಿದ್ದಾರೆ.
– ಮೈರೆ, ನಾರಂಕೋಡಿ ಕಾಲೊನಿವಾಸಿ ಶೆಡ್ ನಿರ್ಮಾಣಕ್ಕೆ ಪ್ರಯತ್ನ
ಪ್ರಸ್ತುತ ಸಮುದಾಯದವರ ಬೇಡಿಕೆಗೆ ತಕ್ಕಂತೆ ಬುಟ್ಟಿ ತಯಾರಿಸುವುದಕ್ಕೆ ಶೆಡ್ ಮಾಡಲು ಸ್ಥಳಾವಕಾಶ ಇದ್ದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡಿಸುತ್ತೇನೆ. ಕೊರಗ ಸಮುದಾಯಕ್ಕೆ ಕೃಷಿ ಭೂಮಿ ಹಂಚಿಕೆಯ ವಿಚಾರ ಈಗಾಗಲೇ ಜಿಲ್ಲಾಽಕಾರಿಗಳ ಮಟ್ಟದಲ್ಲಿ ಮಾತುಕತೆಯ ಹಂತದಲ್ಲಿದೆ.
– ಗಾಯತ್ರಿ, ಯೋಜನಾ ಸಮನ್ವಯಾಽಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ದ.ಕ.ಜಿಲ್ಲೆ – ಕಿರಣ್ ಸರಪಾಡಿ