Advertisement

ಕೊಪ್ಪಲಂಗಡಿ-ಕೋಟೆ-ಮಲ್ಲಾರು ರಸ್ತೆ ದುರವಸ್ಥೆ

06:00 AM Aug 12, 2018 | Team Udayavani |

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಕೊಪ್ಪಲಂಗಡಿ -ಕೋಟೆ -ಮಲ್ಲಾರು ರಸ್ತೆ ಅಲ್ಲಲ್ಲಿ ಹೊಂಡ ಬಿದ್ದಿದ್ದು,ಅದರೊಂದಿಗೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್‌ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಅಲ್ಲಲ್ಲಿ ಕಿತ್ತು ಹೋಗಿದೆ.

Advertisement

ರಸ್ತೆ ದುರಸ್ತಿ, ಡಾಮರೀಕರಣ ಕಾಮಗಾರಿ ಮತ್ತು ಇಂಟರ್‌ಲಾಕ್‌ ಅಳವಡಿಕೆಗಾಗಿ 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಇಂಟರ್‌ಲಾಕ್‌ ಅಳವಡಿಕೆ ಕಾಮಗಾರಿ ಮಾತ್ರ ಅಲ್ಲಿ ನಡೆದಿದೆ. ಮಾರ್ಚ್‌ ತಿಂಗಳಲ್ಲಿ ಚಾಲನೆ ದೊರಕಿದ್ದ ಡಾಮರೀಕರಣ ಇನ್ನೂ ಪ್ರಾರಂಭಗೊಂಡಿಲ್ಲ. ಇಂಟರ್‌ಲಾಕ್‌ ಮಳೆಗಾಲಕ್ಕೆ ಮೊದಲೇ ಕಿತ್ತು ಹೋಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಅವಗಣನೆ 
ಕೊಪ್ಪಲಂಗಡಿ – ಕೋಟೆ – ಮಲ್ಲಾರು ರಸ್ತೆ ಕಳೆದ ಹಲವಾರು ವರ್ಷಗಳಿಂದ ಅವಗಣನೆಗೆ ತುತ್ತಾಗಿದೆ. ಹಿಂದೆ ಶಾಸಕರಿಗೆ ನಿರಂತರ ಮನವಿ ಸಲ್ಲಿಸಿದ ಬಳಿಕ ಪುರಸಭೆ ಮೂಲಕ ಕಾಮಗಾರಿ ನಡೆಸಲು ಚಾಲನೆ ನೀಡಲಾಗಿತ್ತು. ನಂತರ ಚುನಾವಣೆ, ಮಳೆ ಇತ್ಯಾದಿ ಕಾರಣವೊಡ್ಡಿ ಕಾಮಗಾರಿ ವಿಳಂಬವಾಗಿದೆ. ಇದೇ ರಸ್ತೆಯ ಒಂದು ಕಿ. ಮೀ. ಉದ್ದದವರೆಗೆ ಇಂಟರ್‌ಲಾಕ್‌ ಅಳವಡಿಕೆ ಕಾಮಗಾರಿ ನಡೆದಿದೆ. ಇದಕ್ಕೆ ಹಾಕಿದ ಸಿಮೆಂಟ್‌ ಕಿತ್ತು ಹೋಗಿದೆ. ಇಂಟರ್‌ಲಾಕ್‌ಗಳೂ ಸಮತಟ್ಟಾಗಿರದೇ ಅಲ್ಲಲ್ಲಿ ಮಳೆ ನೀರು ನಿಂತು ಪಾದಚಾರಿಗಳಿಗೂ ನಡೆದು ಹೋಗಲು ಅಸಾಧ್ಯವಾಗಿದೆ. ಸಮಸ್ಯೆ ಬಗ್ಗೆ ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಸ್ಪಂದನೆ ದೊರಕಿಲ್ಲ.  

ಕಳಪೆ ಕಾಮಗಾರಿಯ ವಾಸನೆ
ಕೊಪ್ಪಲಂಗಡಿ – ಕೋಟೆ – ಮಲ್ಲಾರು ರಸ್ತೆಯ ಅಗಲೀಕರಣ ಕಾಮಗಾರಿಗೆ ಮಾಚ್‌ನಲ್ಲಿ ಚಾಲನೆ ನೀಡಲಾಗಿತ್ತು. ಆದರೆ ಬಳಿಕ ಕುಂಟುತ್ತಾ ಸಾಗಿ ಬಂದ ಕಾಮಗಾರಿ ಈ ತನಕವೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಂಟರ್‌ಲಾಕ್‌ ಮತ್ತು ಅದರ ಬದಿಗೆ ಹಾಕಲಾಗಿರುವ ದಂಡೆ ಅಲ್ಲಲ್ಲಿ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿ ಶಂಕೆ ಮೂಡಿದೆ.  
-ಅಕ್ಬರ್‌ ಆಲಿ ಮಲ್ಲಾರು

ಮಳೆ ಮುಗಿದ ಕೂಡಲೇ ಕಾಮಗಾರಿ
ಇಂಟರ್‌ಲಾಕ್‌ ಅಳವಡಿಕೆ ಮತ್ತು ಡಾಮರೀಕರಣ ನಡೆಸಲು 48 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ.  ಭಾರೀ ಮಳೆಯ ಕಾರಣದಿಂದಾಗಿ ಕೆಲವೆಡೆಗಳಲ್ಲಿ ಇಂಟರ್‌ಲಾಕ್‌ ಕಿತ್ತು ಹೋಗಿ ಹೊಂಡ ಬಿದ್ದಿದೆ. ಇದನ್ನು ಸಂಪೂರ್ಣವಾಗಿ ತೆಗೆದು ಮರು ಕಾಮಗಾರಿ ನಡೆಸಿಕೊಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದ್ದು ಯೋಜನಾ ಬದ್ಧವಾಗಿ ಮುಂದುವರಿಯಲಿದೆ.  
– ರಾಯಪ್ಪ
ಮುಖ್ಯಾಧಿಕಾರಿ, ಕಾಪು ಪುರಸಭೆ

Advertisement

ನೀತಿ ಸಂಹಿತೆ ಬಳಿಕ ಮಳೆ ಅಡ್ಡಿ
ಕಾಮಗಾರಿಗೆ ಆರಂಭದಲ್ಲಿ ಚುನಾವಣಾ ನೀತಿ ಸಂಹಿತೆ ಬಳಿಕ ಮಳೆ ಅಡ್ಡಿಯಾಗಿತ್ತು. ಆದರೂ ಒಂದು ಬದಿ ಇಂಟರ್‌ಲಾಕ್‌ ಹಾಕಿದ್ದರೂ ಮಳೆಯಿಂದ ಕಿತ್ತುಹೋಗಿದೆ. ಅದನ್ನೂ ಸೇರಿದಂತೆ ಪೂರ್ಣ ಕಾಮಗಾರಿಯನ್ನು ಮಳೆಗಾಲ ಮುಗಿದ ಕೂಡಲೇ ಪೂರ್ಣಗೊಳಿಸಿ ಕೊಡುವುದಾಗಿ ಜಿಲ್ಲಾಧಿಕಾರಿಗಳು ಮತ್ತು ಪುರಸಭಾ ಮುಖ್ಯಾಧಿಕಾರಿಗೆ ಪತ್ರ ಮುಖೇನ ತಿಳಿಸಲಾಗಿದೆ. 
– ಕಿಶೋರ್‌ ಕುಮಾರ್‌ ಗುರ್ಮೆ
ಗುತ್ತಿಗೆದಾರರು,ಕಾಪು

Advertisement

Udayavani is now on Telegram. Click here to join our channel and stay updated with the latest news.

Next