ಕೊಪ್ಪಳ: ತುಂಗಭದ್ರಾ ಜಲಾಶಯದ ಎಡದಂಡೆ ಮೇಲ್ಮಟ್ಟದ ಗೇಟ್ ಕಿತ್ತು ಹೋಗಿದ್ದರಿಂದ ಅದರ ಸ್ಥಿತಿ ತಿಳಿಯಲು ನೀರಾವರಿ ಅಧಿಕಾರಿಗಳು ಬೆಳಗಾವಿ ಅಕ್ಷತಾ ಅಂಡರ್ ವಾಟರ್ ಸರ್ವಿಸ್ ತಂಡವನ್ನು ಕರೆಯಿಸಿದ್ದಾರೆ. ಈ ತಂಡದಲ್ಲಿದ್ದ ಚನ್ನಪ್ಪ ಅವರು ಡ್ಯಾಂ ಒಡಲಾಳದಲ್ಲಿ 20 ಅಡಿ ಇಳಿದು ಧೈರ್ಯ ತೋರುವ ಮೂಲಕ ಅಲ್ಲಿನ ಸ್ಥಿತಿ ಅವಲೋಕಿಸಿ ತಜ್ಞರಿಗೆ ಮಾಹಿತಿ ನೀಡಿದ್ದಾರೆ.
ನಿಜಕ್ಕೂ ಇವರ ಧೈರ್ಯ, ಸಾಹಸ ಮೆಚ್ಚುವಂತಹದ್ದು, ಅತ್ಯಂತ ಕಷ್ಟಕರ ಪರಿಸ್ಥಿತಿಯಲ್ಲೂ ಚನ್ನಪ್ಪ ಅವರು ಆಮ್ಲಜನಕದ ಸಹಾಯದಿಂದ ಡ್ಯಾಂನ ಗೇಟ್‌ನ ಒಡಲಾಳದಲ್ಲಿ ರಕ್ಷಾ ಕವಚವನ್ನು ಅಳವಡಿಕೆ ಮಾಡಿಕೊಂಡು ಇಳಿದು ಅಲ್ಲಿನ ಪರಿಸ್ಥಿತಿ ಅವಲೋಕನ ಮಾಡಿದ್ದರು.
ಡ್ಯಾಂ ಒಳಗಿರುವ ನೀರಿನ ಒತ್ತಡ, ಯಾವ ಹಂತದಲ್ಲಿ ಗೇಟ್ ತುಂಡಾಗಿದೆ ಎನ್ನುವ ಕುರಿತು ಅಲ್ಲಿಂದಲೇ ಸಂವಹನ ನಡೆಸಿ ಮೇಲ್ಭಾಗದ ಇಂಜನಿಯರ್ ತಂಡಕ್ಕೆ ಮಾಹಿತಿ ರವಾನೆ ಮಾಡುತ್ತಿದ್ದರು. ಅಲ್ಲಿಂದ 28 ಅಡಿ ಕೆಳಗೆ ಡ್ಯಾಂನಿಂದ ನೀರು ಹರಿಯುತ್ತಿದ್ದು ಆ ನೀರಿನ ರಭಸಕ್ಕೆ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ. ನೀರಿನ ಒತ್ತಡವೇ ಅಷ್ಟೊಂದು ಪ್ರಮಾಣದಲ್ಲಿತ್ತು. ಅದೆಲ್ಲವನ್ನೂ ಅರಿತು 20 ನಿಮಿಷ ಅಂತರಾಳದ ಪರಿಸ್ಥಿತಿ ರವಾನಿಸಿದರು. ಅವರ ಕಾರ್ಯ, ಧೈರ್ಯ ಮೆಚ್ಚಿ ಸ್ಥಳೀಯರು ಅವರ ಗುಣಗಾನ ಮಾಡಿದರು. ಈ ಕುರಿತು ಉದಯವಾಣಿ ಜೊತೆ ಮಾತನಾಡಿದ ಅವರು, ರಾಜ್ಯದ ಹಲವು ಜಲಾಶಯಗಳಲ್ಲಿ ನಾನು ಇಳಿದಿದ್ದೇನೆ. ಆದರೆ ಈ ಡ್ಯಾಂನಲ್ಲಿ ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿ ಇತ್ತು. ಇಂತಹ ಸನ್ನಿವೇಶ ನೋಡಿರಲಿಲ್ಲ. ಒಳಗಡೆ ಗೇಟ್ ತುಂಡಾಗಿ ನೀರು ರಭಸದಿಂದ ಹರಿಯುತ್ತಿದೆ. 20 ಅಡಿಯಷ್ಟು ಕೆಳ ಭಾಗಕ್ಕೆ ಇಳಿದಿದ್ದೆ. ನೀರಿನ ಒತ್ತಡ ಇದ್ದ ಕಾರಣ ಇನ್ನೂ ಕೆಳಗೆ ಇಳಿಯಲು ಸಾಧ್ಯವಾಗಲಿಲ್ಲ. ಕೆಳಗೆ ಗೇಟ್ ತುಂಡಾಗಿದ್ದು, ಅದನ್ನು ಮೇಲೆತ್ತಿ ಹೊಸ ಗೇಟ್ ಅಳವಡಿಕೆ ಮಾಡುವುದೊಂದೇ ಪರ್ಯಾಯ ಮಾರ್ಗವೆಂದರು.