Advertisement

ಕೊಪ್ಪಳ: ಹುಬ್ಬಳ್ಳಿ-ಕುಷ್ಟಗಿ ರೈಲು ಸಂಚಾರಕ್ಕೆ ಸಿದ್ಧತೆ

05:51 PM Feb 21, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ನೈಋತ್ಯ ರೈಲ್ವೆ ವಲಯದ ಕುಷ್ಟಗಿ ಪಟ್ಟಣಕ್ಕೆ ಗದಗ-ವಾಡಿ ರೈಲು ಮಾರ್ಗದ ಕುಷ್ಟಗಿ-ಹುಬ್ಬಳ್ಳಿ ರೈಲು ಸಂಚಾರ ಸೇವೆಗೆ ರೈಲ್ವೆ ಇಲಾಖೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಜಮೀನುಗಳಿಗೆ ಹೋಗಿ ಬರುವ ಸಂಪರ್ಕ ರಸ್ತೆಗೆ ಅಡಚಣೆಯಾಗಿರುವ ರೈಲು ಮಾರ್ಗದ ಅಡಚಣೆ ಸರಿದೂಗಿಸಲು ರೈತರ ತಕರಾರಿಗೆ ಮಣಿದ ರೈಲ್ವೆ ಇಲಾಖೆ, ಕೆಳಸೇತುವೆ ಬದಲಿಗೆ ಮೇಲ್ಸೇತುವೆ ನಿರ್ಮಿಸುವುದಕ್ಕೆ ತಾತ್ವಿಕವಾಗಿ ಸಮ್ಮತಿಸಿದೆ. ನೆರೆಬೆಂಚಿ ಸೀಮಾ ವ್ಯಾಪ್ತಿಯ ಹಳೆ ನಿಡಶೇಸಿ ರಸ್ತೆಯ ಜಮೀನು ಮೂಲ ಸಂಪರ್ಕ ರಸ್ತೆಯಾಗಿದೆ.

Advertisement

ಈ ಸಂಪರ್ಕ ರಸ್ತೆಯಲ್ಲಿ ತಮ್ಮ ಜಮೀನುಗಳಿಗೆ ಹೋಗಿ ಬರುವುದು ಈ ರೈಲು ಮಾರ್ಗ ಅಡ್ಡಿಯಾಗಿದೆ. ಕಾಮಗಾರಿ ಆರಂಭದಿಂದ ತಕರಾರು ಶುರುವಾಗಿತ್ತು. ಈಗ ರೈಲು ಹಳಿಗಳನ್ನು ಜೋಡಿಸಲಾಗಿದೆ. ಕಾಮಗಾರಿ ಮುಗಿಯುತ್ತಾ ಬಂದಾಗ್ಯೂ ಜಮೀನು ಸಂಪರ್ಕ ರಸ್ತೆಗೆ ಮೇಲ್ಸೇತುವೆ ನಿರ್ಮಾಣ ವೆಚ್ಚದಾಯಕ ಎಂದು ಬೇಡಿಕೆ ನಿರ್ಲಕ್ಷಿಸಿದ್ದರು.

ಆಗ ರೈತರು ಹೊಸ ಹಳಿಗಳ ಜೋಡಣೆಗೆ ಹಾಗೂ ಜಲ್ಲಿ ಕಲ್ಲು ಹಾಕುವ ಕೆಲಸಕ್ಕೆ ಅಡ್ಡಿಪಡಿಸಿದರು. ಆಗ ಪಿಎಸ್‌ಐ ಮುದ್ದುರಂಗಸ್ವಾಮಿ ಅವರು, ರೈಲ್ವೆ ಇಲಾಖೆ ಅಧಿಕಾರಿಗಳನ್ನು ತಹಶೀಲ್ದಾರ್‌ ರವಿ ಅಂಗಡಿ ಸಮ್ಮುಖದಲ್ಲಿ ಚರ್ಚಿಸಿ ಪರಿಹಾರ ಕಲ್ಪಿಸುವ ಭರವಸೆಗೆ ರೈತರು ಸಮ್ಮತಿಸಿದ್ದರು.

ಮಂಗಳವಾರ ಬೆಳಗ್ಗೆ ಹಳೆ ನಿಡಶೇಸಿ ರಸ್ತೆಯಲ್ಲಿ ಉದ್ದೇಶಿತ ಮೇಲ್ಸೇತುವೆ ಸ್ಥಳದಲ್ಲಿ ತಹಶೀಲ್ದಾರ್‌ ರವಿ ಅಂಗಡಿ, ಸಿಪಿಐ ಯಶವಂತ ಬಿಸನಲಳ್ಳಿ ಸಮ್ಮುಖದಲ್ಲಿ ರೈಲ್ವೆ ಇಲಾಖೆ ಮುಖ್ಯ ಎಂಜಿನಿಯರ್‌ ವೆಂಕಟೇಶ್ವರರಾವ್‌, ಉಪ ಮುಖ್ಯ ಎಂಜಿನಿಯರ್‌ ರವೀಂದ್ರ ಬಿರಾದಾರ, ಎಇಇ ಅಶೋಕ ಮುದಗೌಡ್ರು ರೈತರೊಂದಿಗೆ ಚರ್ಚಿಸಿದರು.

ಲಿಂಗಲಬಂಡಿ-ಕುಷ್ಟಗಿ ರೈಲು ನಿಲ್ದಾಣಗಳ ಮಧ್ಯೆ ಶಾಖಾಪೂರ ಮೇಲ್ಸೇತುವೆ ರಸ್ತೆಯಿಂದ 49.860 ಕಿ.ಮೀ. ಈಗಾಗಲೇ ಕೆಳ ಸೇತುವೆ ನಿರ್ಮಿಸಿರುವುದು ಅವೈಜ್ಞಾನಿಕವಾಗಿದೆ. ರೈತರ ಬೇಡಿಕೆ ಇದ್ದಲ್ಲಿ ಮೇಲ್ಸೇತುವೆ ನಿರ್ಮಿಸದೇ ಅವಶ್ಯಕತೆ ಇಲ್ಲದ ಸ್ಥಳದಲ್ಲಿ ಕೆಳಸೇತುವೆ ನಿರ್ಮಿಸಿದ್ದಾರೆ. ಇದರಲ್ಲಿ ಮೇವು, ಕೃಷಿ ಉತ್ಪನ್ನ ತುಂಬಿದ ಚಕ್ಕಡಿ, ಟ್ರಾಕ್ಟರ್‌ ಸಹ ಹೋಗದು.

Advertisement

ಮಳೆಯಾದರೆ ಮಳೆ ನೀರು ಅಲ್ಲಿ ಜಮಾಯಿಸಿ ಸಂಚಾರ ಅಡಚಣೆಯಾಗುತ್ತಿದ್ದು, ಹಳೆ ನಿಡಶೇಸಿ ರಸ್ತೆಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ನೆರೆಬೆಂಚಿ ಗ್ರಾಮದ ಬಸವರಾಜ ಗುರಿಕಾರ, ಹುಬ್ಬೇಶ ಆದೋನಿ, ಲಕ್ಷ್ಮವ್ವ ಟಕ್ಕಳಕಿ ಸೇರಿದಂತೆ ರೈತರು ಬಿಗಿಪಟ್ಟ ಹಿಡಿದರು.

ರೈಲ್ವೆ ಅಧಿಕಾರಿಗಳು ಹಳೆ ನಿಡಶೇಸಿ ಜಮೀನು  ಸಂಪರ್ಕ ರಸ್ತೆಗೆ ಮೇಲ್ಸೇತುವೆ ನಿರ್ಮಿಸುವುದಾದರೆ ಭೂ ಸ್ವಾಧೀನ ಮೊದಲಾದ ಪ್ರಕ್ರಿಯೆಗಳಿಗೆ ಸಮಯ ಹಿಡಿಯುತ್ತಿದ್ದು, ತುರ್ತಾಗಿ ರೈತರ ಬೇಡಿಕೆಗೆ ಅನಗುಣವಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಿ ಒಳ ಚರಂಡಿಯ ವ್ಯವಸ್ಥೆ ಬಗ್ಗೆ ಪ್ರಸ್ತಾಪಿಸಿದಾಗ ರೈತರು ತಕರಾರು ವ್ಯಕ್ತಪಡಿಸಿದರು. ಆಗ ರೈಲ್ವೆ ಅಧಿ ಕಾರಿಗಳೊಂದಿಗೆ ವಾಗ್ವಾದ ನಡೆಯಿತು.

ರೈತರ ಬಿಗಿ ನಿಲುವಿಗೆ ಸಮ್ಮತಿಸಿದ ರೈಲ್ವೆ ಅಧಿಕಾರಿಗಳು ರೈಲ್ವೆ ಮೇಲ್ಸೇತುವೆಗೆ ಹೆಚ್ಚುವರಿ ಭೂಮಿ, ಸರ್ವಿಸ್‌ ರಸ್ತೆಯ ಭೂಮೀಗೆ ಕೆಐಡಿಎಬಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಸದರಿ ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಹಣ ವರ್ಗಾಯಿಸಿದ ನಂತರ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಕ್ರಮದ ಭರವಸೆಗೆ ಲಿಖಿತ ಪತ್ರ ಪಡೆದ ಬಳಿಕವೇ ರೈತರು ಒಲ್ಲದ ಮನಸ್ಸಿನಿಂದಹಿಂಪಡೆದರು.

ಡಿಸಿಇ ಪಲಾಯನ
ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ ಸೇರಿದಂತೆ ರೈಲು ಮಾರ್ಗ ಕೆಳ ಸೇತುವೆ ಮೆಟ್ಟಿಲು ಇತ್ಯಾದಿ  ಕಾಮಗಾರಿಗಳಿಗೆ ನೀರಿನ ಕ್ಯೂರಿಂಗ್‌ ಆಗದೇ ಕಲ್ಲುಗಳು ಸಡಿಲುಗೊಂಡು ಕುಸಿಯುವ ಸಾಧ್ಯತೆ ಬಗ್ಗೆ ಸುದ್ದಿಗಾರರ ಪ್ರಸ್ತಾಪಕ್ಕೆ ಉಪ ಮುಖ್ಯ ಎಂಜಿನಿಯರ್‌
ರವೀಂದ್ರ ಬಿರಾದಾರ ಸ್ಪಷ್ಟನೆ ನೀಡದೇ ಪಲಾಯನಗೈದ ಪ್ರಸಂಗ ನಡೆಯಿತು. ರೈಲು ಮಾರ್ಗದ ಸಿಮೆಂಟ್‌ ಕಾಮಗಾರಿಗೆ ನೀರಿನ ಕ್ಯೂರಿಂಗ್‌ ಆಗಿಲ್ಲ. ಬೆರಳಿನಿಂದ ಕೆದರಿದರೆ ಸಿಮೆಂಟು ಕಿತ್ತು ಬರುತ್ತಿದೆ. ಮಳೆಯಾದಲ್ಲಿ ಮೆಟ್ಟಿಲುಗಳ ಕಲ್ಲುಗಳು ಕಳಚಿ ಬೀಳುವ ಸಾಧ್ಯತೆಗಳಿವೆ. ರೈಲ್ವೆ ಅಧಿಕಾರಿಗಳು ಗುತ್ತಿಗೆದಾರರ ಕೆಲಸಗಳಿಗೆ ಚಕಾರವೆ ತ್ತದೇ ಸುಮ್ಮನಾಗಿರುವುದು ಸ್ಥಳೀಯರ ಆಕ್ರೋಶ ಕಾರಣವಾಗಿದೆ. ಕೊಪ್ಪಳ ಸಂಸದ, ಕುಷ್ಟಗಿ ಶಾಸಕರು ಈ ಬಗ್ಗೆ ತಲೆಕಡಿಸಿಕೊಳ್ಳದೇ ಇರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ. ಫೆಬ್ರುವರಿ ಮಾಸಾಂತ್ಯದ ವೇಳೆಗೆ ರೈಲು ಸಂಚರಿಸುವ ಒತ್ತಡಕ್ಕೆ ಸಿಲುಕಿರುವ ಅಧಿಕಾರಿಗಳು ಕಳಪೆ ಕಾಮಗಾರಿಗೆ ಜಾಣ ಕುರುಡು ವ್ಯಕ್ತವಾಗಿರುವುದು ಅಚ್ಚರಿಯಾಗಿದೆ.

ನೆರೆಬೆಂಚಿ ಸೀಮಾದಲ್ಲಿರುವ ಹಳೆ ನಿಡಶೇಸಿ ರಸ್ತೆ ಪೂರ್ವ ಕಾಲದಿಂದಲೂ ಬಳಕೆಯಲ್ಲಿದೆ. ಈ ಜಮೀನು ಸಂಪರ್ಕ ರಸ್ತೆಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸದೇ ಇದ್ದಲ್ಲಿ ಕೊಪ್ಪಳ ಸಂಸದ, ಕುಷ್ಟಗಿ ಶಾಸಕರನ್ನು ಊರೊಳಗೆ ಬರಲು ಬಿಡುವುದಿಲ್ಲ.
ಬಸವರಾಜ್‌ ಗುರಿಕಾರ, ನೆರೆಬೆಂಚಿ ಗ್ರಾಮಸ್ಥ

ರೈತರ ಚಕ್ಕಂಡಿ, ಟ್ರಾಕ್ಟರ್‌ ವಾಹನ ಸುಗಮ ಸಂಚಾರಕ್ಕೆ ರೈಲ್ವೆ ಮೇಲ್ಸೇತುವೆ ನಿರ್ಮಿಸಲೇ ಬೇಕು. ರೈಲ್ವೆ ಅಧಿಕಾರಿಗಳು ಇವತ್ತು ಇಲ್ಲಿಗೆ ಬಂದು ಮೂಗಿಗೆ ತುಪ್ಪ ಹಚ್ಚಿ ಹೋಗ್ತಾರೆ ಎಲ್ಲಾ ಕೆಲಸ ಮುಗಿದ ಮೇಲೆ ರೈತರ ವಿರುದ್ಧ ತಿರುಗಿ ಬೀಳ್ತಾರೆ.
ಹುಬ್ಬೇಶ ಅದೋನಿ, ಕುಷ್ಟಗಿ ರೈತ

Advertisement

Udayavani is now on Telegram. Click here to join our channel and stay updated with the latest news.

Next