Advertisement

ನಗರದಲ್ಲೇ ಬಯಲು ಬಹಿರ್ದೆಸೆ!

05:08 PM Oct 01, 2018 | |

ಕೊಪ್ಪಳ: ನಗರವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಿದ್ದೇವೆ ಎಂದು ಬೀಗುವ ನಗರಸಭೆ ಅಧಿಕಾರಿಗಳು ಇಲ್ಲಿನ ಪಲ್ಟನ್‌ ಗಲ್ಲಿ, ಕುಂಬಾರ ಓಣಿ, ಜೋಗೇರ ಓಣಿ, ಬಸವೇಶ್ವರ ಓಣಿಯ ಜನರ ಗೋಳನ್ನು ಕೇಳಬೇಕಿದೆ. ಎರಡು ವರ್ಷಗಳಿಂದ ಶೌಚಾಲಯ ಇದ್ದರೂ ಈ ಮಹಿಳೆಯರಿಗೆ ಬಯಲೇ ಗತಿಯಾಗಿದೆ.

Advertisement

ಹೌದು.. ಗವಿಮಠದ ಆರ್ಯುವೇದ ಕಾಲೇಜಿನ ಹಿಂಭಾಗದಲ್ಲಿನ ಬಯಲು ಪ್ರದೇಶದಲ್ಲಿ ಎರಡು ವರ್ಷಗಳ ಹಿಂದೆ ನಗರಸಭೆ ಎರಡು ಶೌಚಾಲಯಗಳನ್ನು ನಿರ್ಮಿಸಿತ್ತು. ಇದರಲ್ಲಿ ಒಂದನ್ನು ಇತ್ತೀಚೆಗೆ ತೆರವುಗೊಳಿಸಿದ್ದರೆ, ಇನ್ನೊಂದನ್ನು ಬಳಸಲು ಸಾರ್ವಜನಿಕರಿಗೆ ಅವಕಾಶವನ್ನೇ ಕೊಟ್ಟಿಲ್ಲ.

ಇಲ್ಲಿನ 3, 4, 13 ಹಾಗೂ 14ನೇ ವಾರ್ಡ್‌ನಲ್ಲಿನ ಪಲ್ಟನ್‌ ಗಲ್ಲಿ, ಕುಂಬಾರ ಓಣಿ, ಜೋಗೇರ ಓಣಿ, ಬಸವೇಶ್ವರ ನಗರದ ನಿವಾಸಿಗಳಿಗೆ ಏಕೈಕ ಸಾರ್ವಜನಿಕ ಮಹಿಳಾ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ ನಗರಸಭೆ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ಒಂದು ವರ್ಷದ ಹಿಂದೆ ಗುತ್ತಿಗೆದಾರರು ಶೌಚಾಲಯಕ್ಕೆ ಬೀಗ ಜಡಿದು ಅಸಮಾಧಾನ ವ್ಯಕ್ತಪಡಿಸಿದ್ದರಂತೆ. ಬಾಕಿ ಮೊತ್ತ ಕೊಟ್ಟ ಬಳಿಕವೂ ಈ ಶೌಚಾಲಯ ಮಹಿಳೆಯರಿಗೆ ಮುಕ್ತವಾಗಿಲ್ಲ. ಹೀಗಾಗಿ ಇಲ್ಲಿನ ಮಹಿಳೆಯರು ಬಹಿರ್ದೆಸೆಗೆ ಶೌಚಾಲಯದ ಪಕ್ಕದಲ್ಲಿನ ಬಯಲು ಪ್ರದೇಶವನ್ನೇ ಅಲಂಬಿಸಿದ್ದಾರೆ.

ಇಲ್ಲಿಯೂ ಮಹಿಳೆಯರು ಸೂರ್ಯೋದಯಕ್ಕೂ ಮುನ್ನ ಸೂರ್ಯಾಸ್ತದ ನಂತರವೇ ಬಹಿರ್ದೆಸೆಗೆ ತೆರಳುವಂತ ಸ್ಥಿತಿ ಇದೆ. ಇದೆಲ್ಲವೂ ಗೊತ್ತಿದ್ದರೂ ನಗರಸಭೆ ಕ್ಯಾರೇ ಎನ್ನುತ್ತಿಲ್ಲ. ಕನಿಷ್ಟ ಪಕ್ಷ ಶೌಚಾಲಯದ ನಿರ್ವಹಣೆಗೆ ಜನರಿಂದ ತಿಂಗಳಿಗೆ ಇಂತಿಷ್ಟು ಎಂದು ಹಣ ಪಡೆಯಲಿ. ಹಣ ಕೊಡಲು ನಾವು ಸಿದ್ಧರಿದ್ದೇವೆ. ಆದರೆ ಇದ್ದದ್ದನ್ನೂ ಬಂದ್‌ ಮಾಡಿದ್ದಾರಲ್ಲ ಆ ಅಧಿಕಾರಿಗಳಿಗೆ ನಾವು ಏನು ಅನ್ನಬೇಕು ಎಂದು ಸ್ಥಳೀಯ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಬೇಕೆಂದರೆ ಈ ಪ್ರದೇಶ ಸುತ್ತಲೂ ಕಲ್ಲು ಬಂಡೆ ಬರುತ್ತಿದೆ. ಶೌಚಗುಂಡಿ ತೆಗೆಯಲು ಸಾಧ್ಯವಾಗುತ್ತಿಲ್ಲ. ಯಂತ್ರದ ಮೂಲಕ ಗುಂಡಿ ತೆಗೆಸಿದರೆ ಮನೆ ಬುನಾದಿ ಸಡಿಲಗೊಳ್ಳುತ್ತಿದೆ. ಇದು ನಗರಸಭೆಗೆ ಗೊತ್ತಿದೆ. ಅದರ ಬದಲಿಗೆ ಗುಂಪು ಶೌಚಾಲಯವನ್ನಾದರೂ ನಿರ್ಮಿಸಿ, ಪ್ರತಿ ಮನೆಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಿ ಶೌಚಾಲಯ ನಿರ್ವಹಣೆ ಮಾಡಬಹುದು. ಆದರೆ ನಗರಸಭೆ ಅಧಿಕಾರಿಗಳು ಆ ಕೆಲಸ ಮಾಡುತ್ತಿಲ್ಲ. ಇಲ್ಲಿನ ಸಮಸ್ಯೆಯನ್ನು ಗಮನಿಸುತ್ತಿಲ್ಲ. ನಾವು ವಾರ್ಡ್‌ನಲ್ಲಿ ಗೆದ್ದ ಸದಸ್ಯರಿಗೆ ಪದೇ ಪದೇ ಹೇಳುತ್ತಲೇ ಇದ್ದೇವೆ. ಆದರೆ ನಮ್ಮ ನೋವು, ಕೂಗು ಅವರ ಕಿವಿಗೂ ಬೀಳುತ್ತಿಲ್ಲ. ನಮ್ಮಷ್ಟಕ್ಕೆ ನಾವು ಸುಮ್ಮನಾಗಿದ್ದೇವೆ ಎಂದು ಸ್ಥಳೀಯ ಮಹಿಳೆಯರು ತಮ್ಮ ವೇದನೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ಕೈಯಲ್ಲಿ ಬಳಿಯುವ ಸ್ಥಿತಿ: ಬೆಳಗಿನ ಜಾವ-ಸಂಜೆ ವೇಳೆ ಮಹಿಳೆಯರು ಸಾರ್ವಜನಿಕ ಮಹಿಳಾ ಶೌಚಾಲಯದ ಅಕ್ಕಪಕ್ಕ ಹಾಗೂ ಬಯಲು ಪ್ರದೇಶದಲ್ಲೇ ಬಹಿರ್ದೆಸೆಗೆ ತೆರಳುತ್ತಿದ್ದಾರೆ. ನಮ್ಮ ಮನೆಗಳು ಶೌಚಾಲಯದ ಪಕ್ಕದಲ್ಲಿವೆ. ಚರಂಡಿ ಪಕ್ಕವೇ ಬಹಿರ್ದೆಸೆಗೆ ತೆರಳುತ್ತಿದ್ದಾರೆ. ನಾವೇ ದುರ್ವಾಸನೆ ತಾಳಲಾರದೆ ಶೌಚ ಕೈಯಿಂದ ಬಳಿಯುವಂತ ಪರಿಸ್ಥಿತಿ ಬಂದಿದೆ. ಅನಿವಾರ್ಯ ಕಾರಣಕ್ಕೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ ಜನ. ನಗರಸಭೆ ಸದಸ್ಯರು, ಅಧಿಕಾರಿಗಳು ಜಿಲ್ಲಾಡಳಿತ ವಾಸ್ತವ ಅರಿಯಲು ಪಲ್ಟನ್‌ ಗಲ್ಲಿ, ಕುಂಬಾರ ಓಣಿಗೆ ತೆರಳಬೇಕಿದೆ. ಅಂದಾಗ ಮಾತ್ರ ಜನರ ನೋವು-ಸಮಸ್ಯೆ ತಿಳಿಯಲಿದೆ.

ಕಳೆದ ಎರಡು ವರ್ಷದ ಹಿಂದೆಯೇ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಆರಂಭದಿಂದಲೂ ಬಂದ್‌ ಮಾಡಲಾಗಿದೆ. ಇಲ್ಲಿನ ಮಹಿಳೆಯರಿಗೆ ಮರ್ಯಾದೆ ಇಲ್ಲದಂತಾಗಿದೆ. ರಾತ್ರಿ-ಬೆಳಗಿನ ಜಾವ ಮಹಿಳೆಯರು ಬಯಲು ಪ್ರದೇಶಕ್ಕೆ ತೆರಳಬೇಕಿದೆ. ಒಂದೊಮ್ಮೆ ನಮ್ಮ ಮನೆ ಪಕ್ಕವೇ ಶೌಚ ಮಾಡಿದ್ದು, ನಾವೇ ಕೈಯಿಂದ ಬಳಿದು ಹಾಕಿದ್ದೇವೆ. ಅಂತಹ ಕರ್ಮ ನಾವು ಮಾಡಿದ್ದೇವೆ.
ಅಂಜಿನಮ್ಮ ಅಳವಂಡಿ,
ಪಲ್ಟನ್‌ ಓಣಿ ನಿವಾಸಿ.

ನಾಲ್ಕು ವಾರ್ಡ್‌ನ ನಡುವೆ ಸ್ವಲ್ಪ ಬಯಲು ಪ್ರದೇಶವಿದೆ. ಒಂದು ಕಡೆ ಮಹಿಳೆಯರು ಬಯಲು ಶೌಚಕ್ಕೆ ತೆರಳಬೇಕು. ಇನ್ನೊಂದು ಸ್ವಲ್ಪ ಜಾಗದಲ್ಲಿ ಪುರುಷರು ಬಯಲು ಶೌಚಕ್ಕೆ ತೆರಳಬೇಕಿದೆ. ಈ ಬಗ್ಗೆ ಯಾರೂ ಗಮನಿಸುತ್ತಿಲ್ಲ. ನಮಗೂ ಹೇಳಿ ಹೇಳಿ ಸಾಕಾಗಿದೆ. ನಾವು ವೈಯಕ್ತಿಕ ಶೌಚಾಲಯ ಕಟ್ಟಿಸಿಕೊಳ್ಳಬೇಕೆಂದರೆ ನಮ್ಮ ಮನೆಗಳ ಕೆಳಗೆ ಕಲ್ಲುಬಂಡೆ ಬರುತ್ತಿವೆ. ಹೀಗಾಗಿ ಕಟ್ಟಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಜನರ ಫಜೀತಿ ಯಾರಿಗೂ ಹೇಳದಂತಾಗಿದೆ.
 ವೆಂಕಟೇಶ ದೊಡ್ಡಮನಿ, ಅನೀಲ ಆಕಲಕುಂಪೆ, ಮಂಜುನಾಥ, ಸ್ಥಳೀಯರು.

„ದತ್ತು ಕಮ್ಮಾರ 

Advertisement

Udayavani is now on Telegram. Click here to join our channel and stay updated with the latest news.

Next