ಕೊಪ್ಪಳ: ಬಿಜೆಪಿ ಮುಖಂಡರು 400 ಸೀಟು ಗೆದ್ದರೆ ಸಂವಿದಾನ ಬದಲಿಸುತ್ತೇವೆ ಎನ್ನುತ್ತಾರೆ. ಬಿಜೆಪಿಯವರು ಸಂವಿದಾನ ಹಾಗು ರಾಷ್ಟ್ರಧ್ವಜ ಒಪ್ಪಿಕೊಂಡಿಲ್ಲ. ಬಿಜೆಪಿ ಎಲ್ಲವನ್ನು ಒಂದು ದೇಶ ಒಂದು ಮತ ಎನ್ನುತ್ತಾರೆ. ಮೂಲ ಸಂವಿಧಾನಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆಯಲ್ಲಿ ಹತ್ತು ವರ್ಷದಲ್ಲಿ ಏನು ಮಾಡಿದ್ದೇವೆ ಎಂದು ಹೇಳಿಲ್ಲ. ಕಾಂಗ್ರೆಸ್ ನ್ಯಾಯ ಪಂಚ ಘೋಷಣೆ ಮಾಡಿದೆ. ಬಿಜೆಪಿಯವರ ಅಮೃತಕಾಲ ಅಲ್ಲ ಅನ್ಯಾಯದ ಕಾಲ, ಇದು ಬರ್ಬಾದ್ ಕಾಲ ಎನ್ನಬಹುದು ಎಂದು ಟೀಕಿಸಿದರು.
ಸುಪ್ರೀಂ ಕೋರ್ಟಿನಿಂದ ಸೂಚನೆಯ ಹಿನ್ನೆಲೆಯಲ್ಲಿ ಕೇಂದ್ರದಿಂದ ಬರ ಪರಿಹಾರ ಬಿಡುಗಡೆ ಮಾಡಿದೆ. ಪರಿಹಾರ ವಿಚಾರದಲ್ಲಿ ಕೇಂದ್ರ ಸರಕಾರವು ಮಲತಾಯಿ ಧೋರಣೆ ತೋರುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದಾಗಲೂ ಮಲತಾಯಿ ಧೋರಣೆ ಇತ್ತು. ಈಗ ಸಂಪೂರ್ಣವಾಗಿ ಮಲತಾಯಿ ಧೋರಣೆ ತೋರುತ್ತಿದ್ದಾರೆ. ಪ್ರಧಾನಿ ಮೋದಿ ಬಂಡವಾಳಶಾಹಿಗಳಿಗೆ ಸಾಲ ಮನ್ನಾ ಮಾಡಿದ್ದಾರೆ. ಸಾಲಮನ್ನಾ ಮಾಡಿದ ಶೇ 25 ರಷ್ಟು ನಮಗೆ ನೀಡಿದರೆ ರೈತರ ಸಾಲ ಮನ್ನಾವಾಗುತ್ತದೆ. ಈ ಹಿಂದೆ ರಾಮಾ ಜೋಶಿಯವರ ಮೀಸಲಾತಿ ಗಾಗಿ ನ್ಯಾಯಲಯಕ್ಕೆ ಹೋಗಿದ್ದರು. ಸಾಮಾಜಿಕ ಹಾಗು ಆರ್ಥಿಕ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಲಾಗಿದೆ. ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಅನ್ಯಾಯ ಮಾಡಿಲ್ಲ ಎಂದರು.
ಹಿಂದೂ ಹಾಗು ಮುಸ್ಲಿಂ ಧರ್ಮದವರು ಅಪಾಯದಲ್ಲಿಲ್ಲ. ಬಿಜೆಪಿಯವರು ಅಪಾಯದಲ್ಲಿದ್ದಾರೆ. ಆರ್ಎಸ್ಎಸ್ ಸರಸಂಚಾಲಕ ಸ್ಥಾನದಲ್ಲಿ ಯಾವ ದಲಿತರನ್ನು ನೇಮಿಸಿದ್ದಾರೆ. ಭ್ರಷ್ಟಾಚಾರ, ಉಗ್ರವಾದ ನಿಲ್ಲಿಸುತ್ತೇನೆ ಎಂದಿದ್ದರು ಎಲೆಕ್ಟ್ರೋ ಬಾಂಡ್ ಖರೀದಿ ಮಾಡಿದ ತನಿಖೆ ಮಾಡಬೇಕು. ಭ್ರಷ್ಟಾಚಾರಿ, ಅತ್ಯಾಚಾರಿಗಳು ಕೂಡಿರುವ ಪಕ್ಷ ಬಿಜೆಪಿ. ದೇಶದಲ್ಲಿ ಅತ್ಯಾಚಾರ ಮಾಡುವವರು ಬಿಜೆಪಿಯವರು ಎಂದು ಹರಿಪ್ರಸಾದ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್ ಬಿ ನಾಗರಳ್ಳಿ, ಹೆಚ್ ಎನ್ ಬಡಿಗೇರ, ಜುಲ್ಲಾ ಖಾದ್ರಿ. ಕೃಷ್ಣಾ ಇಟ್ಟಂಗಿ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಉಪಸ್ಥಿತರಿದ್ದರು.