ಕೊಪ್ಪಳ: ಪದೇ ಪದೆ ಬರಕ್ಕೆ ತುತ್ತಾಗಿ ಜಿಲ್ಲೆಯ ಜನ ಸಂಕಷ್ಟ ಎದುರಿಸುತ್ತಿರುವುದನ್ನು ತಪ್ಪಿಸಲು, ರೈತಾಪಿ ವಲಯಕ್ಕೆ ನೀರಾವರಿ, ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಜಿಲ್ಲಾಡಳಿತವು ಜಿಲ್ಲೆಯ ಎಲ್ಲ ಕೆರೆಗಳ ಪುನಶ್ಚೇತನ, ನೀರು ತುಂಬಿಸುವ ಪ್ರಸ್ತಾವನೆ ಸಿದ್ಧಗೊಳಿಸಿದೆ.
Advertisement
ಈಗಾಗಲೇ ಕೆಲವು ಕೆರೆಗಳಿಗೆ ಅನುದಾನ ಮಂಜೂರಾಗಿದ್ದರೆ, ಕೆಲ ಕೆರೆಗಳಿಗೆ ವಿಸ್ತೃತ ಯೋಜನೆ ಸಿದ್ಧಪಡಿಸಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೌದು.. ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಮಳೆಯ ಕೊರತೆ ಎದುರಾಗುತ್ತಿದೆ. ಕುಡಿಯುವ ನೀರಿನ ಸಮಸ್ಯೆಯೂ ಹೆಚ್ಚಾಗುತ್ತಿದೆ. ಜೊತೆಗೆ ಅಂತರ್ಜಲಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ರೈತ ಸಮೂಹ ದುಡಿಮೆ ಅರಸಿ ಗುಳೆ ಹೋಗುವಂತಹ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜಿಲ್ಲೆಯಲ್ಲಿನ ಜನತೆ ಜಲ ಜಾಗೃತಿಗೆ ಮುಂದಾಗಿದ್ದು, ಸ್ವತಃ ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮೀಜಿಗಳೇ ಕೆರೆ, ಕಟ್ಟೆಗಳ ಅಭಿವೃದ್ಧಿಗೆ ಚಾಲನೆ ನೀಡುವ ಜೊತೆಗೆ ಹಿರೇಹಳ್ಳದ ಹೂಳು ತೆಗೆಸುವ ಮೂಲಕ ಎಲ್ಲರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.
Related Articles
Advertisement
ಇನ್ನೂ ತುಂಗಭದ್ರಾ ಡ್ಯಾಂನಿಂದ ಚಿಕ್ಕಬೆಣಕಲ್, ಲಿಂಗದಳ್ಳಿ ಮುಕ್ಕುಂಪಿ, ಬೋಲಮ್ಮನ ಗುಂಡಿನ ಕೆರೆ, ಎಚ್‌ಆರ್‌ಜಿ ನಗರ, ವೆಂಕಟಗಿರಿ, ಗಡ್ಡಿ ಜಿನುಗು ಕೆರೆ, ಆಗೋಲಿ ಹಂಪಸದುರ್ಗ, ಉಡಮಕಲ್ ಕೆರೆಗಳಿಗೆ ನೀರು ತುಂಬಿಸಲು ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ 93 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವೆಚ್ಚದ ಪ್ರಸ್ತಾವನೆ ಸಲ್ಲಿಸಿದೆ. ಸಿದ್ಧರಾಂಪುರ, ಚನ್ನಳ್ಳಿ ಹತ್ತಿರ ಕುಡಿಯುವ ನೀರು ಹಾಗೂ ಕಾರಟಗಿಯ ನ. 32ರ ವಿತರಣಾ ಕಾಲುವೆ ಕೊನೆ ಭಾಗದ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಪೂರೈಕೆಗೆ 86 ಕೋಟಿ ರೂ. ವೆಚ್ಚದ ವಿಸ್ತೃತ ಯೋಜನಾ ವರದಿಯನ್ನು ಮುನಿರಾಬಾದ್ ವೃತ್ತ ಕಚೇರಿಗೆ ಸಲ್ಲಿಕೆ ಮಾಡಿದೆ.
ಸಣ್ಣ ನೀರಾವರಿ ಇಲಾಖೆ ಕೆರೆಗಳು: ಇನ್ನೂ ಗಂಗಾವತಿ ತಾಲೂಕಿನ ದೇವಲಾಪೂರ, ಇಂಗಳದಾಳ ಸೇರಿ 8 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 135 ಕೋಟಿ ಅನುದಾನ ಮಂಜೂರಾಗಿದೆ. ಈ ಯೋಜನೆ 2015-16ರಲ್ಲಿ ಪೂರ್ಣಗೊಂಡಿದೆ. ತುಂಗಭದ್ರಾ ಡ್ಯಾಂನಿಂದ ಯಲಬುರ್ಗಾ ತಾಲೂಕಿನ 10, ಕೊಪ್ಪಳ ತಾಲೂಕಿನ 3 ಕೆರೆಗಳಿಗೆ 290 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ಯೋಜನೆಗೆ 2017ರಲ್ಲಿ ಒಪ್ಪಿಗೆ ದೊರೆತಿದ್ದು, ಶೇ. 98ರಷ್ಟು ಕಾಮಗಾರಿ ನಡೆಯಬೇಕಿದೆ. ಇದಲ್ಲದೇ ಕೃಷ್ಣಾ ನದಿಯಿಂದ ಕುಷ್ಟಗಿತಾಲೂಕಿನ ಮಿಯಾಪೂರ ಹೊಸಳ್ಳಿ ಸೇರಿ 15 ಕೆರೆಗೆ ಕುಡಿಯುವ ನೀರಿನ ಸಲುವಾಗಿ 498 ಕೋಟಿ ಮೊತ್ತದ ಯೋಜನೆಗೆ ಕಳೆದ ಜುಲೈನಲ್ಲಿ ಆಡಳಿತಾತ್ಮಕ ಒಪ್ಪಿಗೆ ದೊರೆತಿದೆ. ಇದರಲ್ಲಿ 1ನೇ ಹಂತದಲ್ಲಿ 8 ಕೆರೆ, 2ನೇ ಹಂತದಲ್ಲಿ 7 ಕೆರೆಗೆ ನೀರು ತುಂಬಿಸುವ ಯೋಜನೆ ರೂಪಗೊಂಡಿದೆ. 1ನೇ ಹಂತದಲ್ಲಿ 258 ಕೋಟಿಗೆ ಟೆಂಡರ್ ಕರೆಯಲಾಗಿದೆ. ಇನ್ನೂ ಕೊಪ್ಪಳ ತಾಲೂಕಿನ ಬುಡಶೆಟ್ನಾಳ ಸೇರಿ 7 ಕೆರೆಗಳು ಹಾಗೂ ಹಿರೇಹಳ್ಳದ ಸರ್ವೇ ಕಾರ್ಯ ಪೂರ್ಣಗೊಂಡಿದ್ದು, 130 ಕೋಟಿ ವೆಚ್ಚದ ಅಂದಾಜು ಪತ್ರಿಕೆ ತಯಾರಿಗೆ ಯೋಜನೆ ಸಿದ್ಧಪಡಿಸಿದ್ದು, ಕನ್ಸಲ್ಟೆನ್ಸಿ ಆಯ್ಕೆ ಮಾಡಬೇಕಿದೆ. ಜೊತೆಗೆ ಗಂಗಾವತಿ ತಾಲೂಕಿನಲ್ಲಿ ಒಟ್ಟು 32 ಕೆರೆಗಳಿಗೆ ಕುಡಿಯುವ ನೀರಿನ
ಸಲುವಾಗಿ ನೀರು ತುಂಬಿಸುವುದು ಅಂತರ್ಜಲಮಟ್ಟ ಹೆಚ್ಚಳ ಮಾಡಲು ಸರ್ವೇ ನಡೆಸಿ ಪೂರ್ಣಗೊಳಿಸಿ 400 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದೆ. ಡಿಪಿಆರ್ ಸಿದ್ಧಪಡಿಸಲು ಕನ್ಸಲ್ಟೆನ್ಸಿ ಏಜೆನ್ಸಿ ನಿಗದಿ ಮಾಡಬೇಕಿದೆ. ಒಟ್ಟಾರೆ ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಅಂತರ್ಜಲಮಟ್ಟ ಹೆಚ್ಚಳ ಮಾಡುವುದು ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸುವ ಸಮಗ್ರ ಯೋಜನೆಗೆ ಕೈ ಹಾಕಿದ್ದು, ಕೆಲವು ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಜನನಾಯಕರು ಇವುಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅನುದಾನ ತಂದು ಯೋಜನೆ ಕಾರ್ಯಗತಗೊಳಿಸಿದರೆ ಮಾತ್ರ ಕುಡಿಯುವ ನೀರಿನ ಯೋಜನೆಗಳು ಯಶಸ್ವಿಯಾಗಲಿವೆ.