Advertisement

ಬರ ಕಾಮಗಾರಿ ನಿರ್ವಹಣೆಗೆ ಸಜ್ಜಾಗಿ

11:38 AM Jan 12, 2019 | |

ಕೊಪ್ಪಳ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ತುಂಬಾ ಇದೆ. ಜನರು ಈಗಲೇ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಹಳ್ಳಿ ಹಳ್ಳಿಗೆ ತೆರಳಿ ಅಲ್ಲಿನ ಸಮಸ್ಯೆ ಆಲಿಸಬೇಕು. ಕೂಡಲೇ ಗೋ ಶಾಲೆ ಆರಂಭಕ್ಕೆ ಸನ್ನದ್ಧರಾಗಬೇಕು ಎಂದು ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅವರು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರುತ್ತಿದೆ. ಸಮಸ್ಯಾತ್ಮಕ ಗ್ರಾಪಂ, ಹಳ್ಳಿಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಬೇಕು. ಜಿಲ್ಲಾಮಟ್ಟದ ಅಧಿಕಾರಿಗಳು ಸನ್ನದ್ಧರಾದರೆ ಮಾತ್ರ ಕೆಳ ಹಂತದ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡಲಿದ್ದಾರೆ ಎಂದರು.

ತಾಲೂಕು ಮಟ್ಟದ ಸಹಾಯಕ ಇಂಜನಿಯರ್‌ ಸರಿಯಾಗಿ ಸ್ಪಂದಿಸುವುದಿಲ್ಲ . ಅಧ್ಯಕ್ಷರೇ ಪೋನ್‌ ಮಾಡಿದರೂ ಕರೆ ಸ್ವೀಕರಿಸುವುದಿಲ್ಲ. ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಇರುವ ಶುದ್ಧ ಕುಡಿವ ನೀರಿನ ಘಟಕಗಳ ನಿರ್ವಹಣೆ ಮಾಡುವುದು ಮುಖ್ಯವಿದೆ. ಜಿಲ್ಲೆಯಲ್ಲಿ 152 ಶುದ್ಧ ಕುಡಿವ ನೀರಿನ ಘಟಕಗಳು 2014-15 ಹಾಗೂ 2015-16ನೇ ಸಾಲಿನಲ್ಲಿ ಮಂಜೂರಾಗಿದ್ದು, ಇದರಲ್ಲಿ 152 ಘಟಕಗಳಲ್ಲಿ 148 ಘಟಕಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ. ಎಷ್ಟೋ ಘಟಕಗಳು ದುರಸ್ತಿ ಮಾಡಬೇಕಿದೆ. ಬರ ಹಾಗೂ ಬೇಸಿಗೆ ಸಂದರ್ಭದಲ್ಲಿ ಕುಡಿವ ನೀರಿನ ಸಮಸ್ಯೆ ಸಾಕಷ್ಟು ಉದ್ಭವಿಸುತ್ತದೆ. ಇದರಿಂದ ಕೂಡಲೇ ದುರಸ್ತಿಗೊಳಿಸಿ, ಕುಡಿವ ನೀರಿನ ಸೌಲಭ್ಯ ಕಲ್ಪಿಸಬೇಕು. ನಿಮ್ಮ ಇಲಾಖೆಯ ಜವಾಬ್ದಾರಿ ಹೆಚ್ಚಾಗಿದೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಭಾರಿ ಎಇ ವಿ.ಎಂ. ತಿರಕನಗೌಡರ ಮಾತನಾಡಿ, ಈಗಾಗಲೇ ಕುಡಿವ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಬೋರ್‌ವೆಲ್‌ ಹಾಕಿಸುವ ಕ್ರಿಯಾಯೋಜನೆ ರೂಪಿಸಲಾಗಿದೆ. ಸಮಸ್ಯೆ ಇರುವ ಗ್ರಾಮಗಳಲ್ಲಿ ತ್ವರಿತವಾಗಿ ಕ್ರಮಕೈಗೊಳ್ಳಲಾಗುವುದು. ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಗೋ ಶಾಲೆ ಆರಂಭಿಸಿ: ಬರದ ಹಿನ್ನೆಲೆಯಲ್ಲಿ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ತಮ್ಮಲಿದ್ದ ನಾಲ್ಕೈದು ಜಾನುವಾರುಗಳಲ್ಲಿ ಕೆಲವನ್ನು ಮಾರಾಟ ಮಾಡಿದ್ದಾರೆ. ಉಳಿದವುಗಳಿಗೆ ಮೇವಿಗಾಗಿ ಪರದಾಡುತ್ತಿದ್ದಾರೆ. ಗೋಶಾಲೆ ಆರಂಭಿಸಿದರೇ ರೈತರಿಗೆ ಅನುಕೂಲವಾಗುತ್ತದೆ. ಆದರೆ ಮೇವು ಬ್ಯಾಂಕ್‌ ತೆರೆದ ಸಮಸ್ಯೆ ಪರಿಹಾರವಾಗಲ್ಲ. ರೈತರು ಈಗಾಗಲೇ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು ಹಣ ನೀಡಿ ಮೇವು ಖರೀದಿಸುವುದು ಕಷ್ಟವಿದೆ. ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಕೂಡಲೇ ಗೋ ಶಾಲೆ ಆರಂಭಕ್ಕೆ ಒತ್ತು ನೀಡಬೇಕೆಂದರು.

Advertisement

ಪಶುಸಂಗೋಪನಾ ಇಲಾಖೆ ಪ್ರಭಾರಿ ಉಪನಿರ್ದೇಶಕ ಡಾ| ಬಸಯ್ಯ ಸಾಲಿ ಮಾತನಾಡಿ, ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ 90 ದಿನ ಮಾತ್ರ ಗೋಶಾಲೆ ಆರಂಭಿಸಬೇಕೆನ್ನುವ ನಿಯಮವಿದೆ. ಈಗಲೇ ಗೋಶಾಲೆ ಆರಂಭಿಸಿದರೆ, ಮುಂದೆ ಬೇಸಿಗೆಯಲ್ಲಿ ತೊಂದರೆ ಎದುರಾಗಲಿದೆ. ಹಾಗಾಗಿ ಸದ್ಯಕ್ಕೆ ಮೇವು ಬ್ಯಾಂಕ್‌ ಆರಂಭಿಸಿದ್ದೇವೆ. ಮುಂದೆ ಗೋ ಶಾಲೆ ಆರಂಭ ಮಾಡಲಿದ್ದೇವೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ ಮಾತನಾಡಿ, ಯೋಜನೆ ರೂಪಿಸುವ ಸಂದರ್ಭದಲ್ಲಿ ತಾಂತ್ರಿಕವಾಗಿ ಕಾಮಗಾರಿಗೆ ಬೇಕಾಗುವ ಅಂದಾಜು ವೆಚ್ಚವನ್ನು ಮಾಡಲಾಗಿರುತ್ತದೆ. ಟೆಂಡರ್‌ ವೇಳೆ ಶೇ. 40 ಕಡಿಮೆ ಪಡೆದು ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಲೋಕೋಪಯೋಗಿ ಇಲಾಖೆ ಇಂಜನಿಯರ್‌ ಪ್ರತಿಕ್ರಿಯಿಸಿ, ಸರಕಾರದ ನಿಯಮದಂತೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತವೆ. ಈ ಕಾಮಗಾರಿ ಗುಣಮಟ್ಟದ ಪರಿಶೀಲನೆ ಮೂರನೇ ಹಂತದ ತನಿಖಾ ಅಧಿಕಾರಿಗಳಿಂದ ಪರಿಶೀಲನೆಯಾಗುತ್ತದೆ ಎಂದರು.

ಜಿಪಂ ಸಿಇಒ ವೆಂಕಟ್ರಾಜಾ ಅವರು ಮಾತನಾಡಿ, ಜಿಪಂ ಕೆಡಿಪಿ ಸಭೆಯಲ್ಲಿ ಚರ್ಚೆಯಾದ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು. ಸಭೆಯಲ್ಲಿ ಸಣ್ಣ ಕೈಗಾರಿಕೆ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಜಿಲ್ಲಾ ಕೈಗಾರಿಕೆ ಕೇಂದ್ರ, ರೇಷ್ಮೆ ಇಲಾಖೆ, ಸಣ್ಣ ನೀರಾವರಿ ಇಲಾಖೆ ಸೇರಿದಂತೆ ನಾನಾ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ಕುರಿತು ಚರ್ಚೆ ನಡೆಸಲಾಯಿತು. ಜಿಪಂ ಉಪಾಧ್ಯಕ್ಷೆ ರತ್ನಮ್ಮ ನಗರ ಸೇರಿದಂತೆ ನಾನಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ಧರು.

ಪೂರ್ಣ ಮಾಹಿತಿ ಕೊಡಿ
ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ ಅವರು ಬಹುತೇಕ ಇಲಾಖೆಯ ಎಲ್ಲ ಅಧಿಕಾರಿಗಳಿಗೆ ನಿಮ್ಮ ಇಲಾಖೆಗಳ ಪ್ರಗತಿ ವರದಿ ಹಾಗೂ ಕೈಗೊಂಡ ಕಾಮಗಾರಿಗಳ ಕುರಿತು ಪೂರ್ಣ ಪಟ್ಟಿ ಕೊಡಬೇಕು. ಇದರಿಂದ ನನಗೆ ಚರ್ಚೆ ಮಾಡಲು ಸಾಧ್ಯವಾಗಲಿದೆ. ಎಲ್ಲವೂ ಸಭೆಗೆ ಬಂದ ಬಳಿಕ ಮಾಹಿತಿ ಕೊಡುವುದಲ್ಲ. ಪಟ್ಟಿ ಕೊಡಿ ನಂತರ ಸಭೆಯಲ್ಲಿ ಚರ್ಚೆ ಮಾಡಬೇಕು. ಜೊತೆಗೆ ಜಿಲ್ಲಾಮಟ್ಟದ ಅಧಿಕಾರಿಗಳೇ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next