Advertisement

ಸರ್ಕಾರಿ ಒಒಡಿ ಸೌಲಭ್ಯ ದುರ್ಬಳಕೆ!

03:16 PM Mar 01, 2020 | Naveen |

ಕೊಪ್ಪಳ: ನೌಕರರಿಗೆ ಕರ್ತವ್ಯದ ವೇಳೆ ಸರ್ಕಾರಿ ಕೆಲಸ ನಿರ್ವಹಣೆಗಾಗಿ ಜಾರಿ ಮಾಡಿರುವ (ಒಒಡಿ) ಅನ್ಯ ಕಾರ್ಯ ನಿಮಿತ್ತದ ಸೌಲಭ್ಯವು ಇತ್ತೀಚಿನ ದಿನಗಳಲ್ಲಿ ದುರ್ಬಳಕೆಯಾಗುತ್ತಿದೆ. ಅದರಲ್ಲೂ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಿಕ್ಷಕರೇ ಸರ್ಕಾರಿ ಕೆಲಸವಿದೆ ಎಂದು ತಮ್ಮ ವೈಯಕ್ತಿಕ ಕೆಲಸಕ್ಕೆ ತೆರಳುತ್ತಿರುವುದು ಬೆಳಕಿಗೆ ಬಂದಿದ್ದು, ಸ್ವತಃ ಶಾಸಕರೇ ಇದರ ವಿರುದ್ಧ ಆಕ್ರೋಶವ್ಯಕ್ತಪಡಿಸಿದ್ದಾರೆ. ಶಿಕ್ಷಣ ಇಲಾಖೆ ಇದನ್ನೊಮ್ಮೆ ಕಣ್ತೆರೆದು ನೋಡಬೇಕಿದೆ.

Advertisement

ಹೌದು. ಜಿಲ್ಲಾದ್ಯಂತ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಇಂತಹ ಪ್ರಸಂಗಗಳು ಹೆಚ್ಚಾಗಿ ನಡೆಯುತ್ತಿವೆ. ಬೆಳಗ್ಗೆ ಶಾಲೆಗೆ ಹಾಜರಾಗುವ ಹಲವು ಶಿಕ್ಷಕರು ಮಧ್ಯಾಹ್ನ 12ರಿಂದ 1 ಗಂಟೆ ಸುಮಾರಿಗೆ ತಮ್ಮ ಹಾಜರಾತಿ ಪುಸ್ತಕದಲ್ಲಿ ಒಒಡಿ ಎಂದು ಅರ್ಜಿ ಬರೆದು ವೈಯಕ್ತಿಕ ಕೆಲಸಕ್ಕೆ ತೆರಳುತ್ತಿರುವುದು ಬೆಳಕಿಗೆ ಬರುತ್ತಿವೆ.

ಒಒಡಿ ಸೌಲಭ್ಯ ಯಾವುದಕ್ಕಿದೆ?: ಸರ್ಕಾರಿ ಕರ್ತವ್ಯದ ವೇಳೆ ಸರ್ಕಾರಿ ನೌಕರರು ರಜೆ ಹಾಕಿ ತೆರಳುವ ಬದಲು ಒಒಡಿ (ಅನ್‌ ಅಫಿಸಿಯಲ್‌ ಡ್ನೂಟಿ) ಸೌಲಭ್ಯವನ್ನು ನೀಡಿದೆ. ಸರ್ಕಾರಿ ಕೆಲಸದ ನಿಮಿತ್ಯ ಒಒಡಿಯ ಮೇಲೆ ತೆರಳಬೇಕು. ಅದರಲ್ಲೂ ಶಿಕ್ಷಣ ಇಲಾಖೆಯಲ್ಲಿ ಮೇಲಾ ಧಿಕಾರಿಗಳು ಕಾರ್ಯಾಗಾರ, ತರಬೇತಿ, ಸಭೆ, ಮೌಲ್ಯಮಾಪನ, ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುವ ಸಂಬಂಧ ಸಭೆ ಕರೆದಿದ್ದರೆ, ಆಯಾ ಶಾಲೆಗಳ ಶಿಕ್ಷಕರು ಶಾಲೆಯ ಹಾಜರಾತಿ ಪುಸ್ತಕದಲ್ಲಿ ಒಒಡಿ ಎಂದು ಅರ್ಜಿ ಬರೆದಿಟ್ಟು ತೆರಳಬೇಕು. ಇನ್ನೂ ಸಾಹಿತ್ಯ ಸಮ್ಮೇಳನ, ಕ್ರೀಡಾ ಕೂಟದಂತ ಸಾಂಸ್ಕೃತಿಕ ಚಟುವಟಿಕೆಗಳಿಗೆ ಶಿಕ್ಷಕರು ತೆರಳಲು ಮುಖ್ಯೋಪಾಧ್ಯಾಯರಿಗೆ ಅರ್ಜಿ ನೀಡಿ ಅಲ್ಲಿಗೆ ತೆರಳಿ ವಾಪಾಸ್‌ ಒಒಡಿ ಪ್ರತಿಯನ್ನು ಶಾಲೆ ಮುಖ್ಯೋಪಾಧ್ಯಾಯರಿಗೆ ಹಾಜರುಪಡಿಸಬೇಕು. ಇಂತಹ ವಿಷಯಕ್ಕೆ ಮಾತ್ರ ಒಒಡಿ ಸೌಲಭ್ಯ ಬಳಕೆಗೆ ಅವಕಾಶವಿದೆ.

ಶಾಲೆಗೆ ಚಕ್ಕರ್‌: ಆದರೆ ಜಿಲ್ಲೆಯಲ್ಲಿನ ಹಲವು ಶಿಕ್ಷಕರು ಒಒಡಿ ಹೆಸರಲ್ಲಿ ತಮ್ಮ ವೈಯಕ್ತಿಕ ಕೆಲಸಗಳಿಗೆ ತೆರಳುತ್ತಿದ್ದಾರೆ. ಶಾಲೆಗೆ ಸಂಬಂ ಧಿಸಿದಂತೆ ಬ್ಯಾಂಕ್‌ನ ಕೆಲಸದ ಮೇಲೆ ತೆರಳುವುದು. ವಿದ್ಯಾರ್ಥಿ ವೇತನದ ಅರ್ಜಿ ಸಂಬಂಧ ಒಒಡಿ ಬರೆದಿಟ್ಟು ತೆರಳುವುದು. ಸುಮ್ಮನೆ ಬಿಇಒ ಹಾಗೂ ಡಿಡಿಪಿಐ ಕಚೇರಿಯಲ್ಲಿ ಕೆಲಸವಿದೆ. ಸಭೆಯಿದೆ ಎಂಬ ಕಾರಣ ನೀಡಿ ಶಾಲೆಗೆ ಬೆಳಗಿನ ಅವಧಿಗೆ ಹಾಜರಾಗಿ, ಮಧ್ಯಾಹ್ನದ ಅವಧಿಗೆ ಚೆಕ್ಕರ್‌ ಹೊಡೆದು ತಮ್ಮ ವೈಯಕ್ತಿಕ ಕೆಲಸಕ್ಕೆ, ಮದುವೆ ಸಮಾರಂಭಕ್ಕೆ ಸ್ನೇಹಿತರ ಜೊತೆ ತೆರಳುವುದು ಜೋರಾಗಿಯೇ ನಡೆಯುತ್ತಿದೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಶಿಕ್ಷಕರು ಈ ರೀತಿಯ ಕಾರ್ಯ ನಿರ್ವಹಣೆಯಿಂದ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟಕ್ಕೂ ಹಿನ್ನಡೆಯಾಗುತ್ತಿದೆ.

ಅದರಲ್ಲೂ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯು ಮುಖ್ಯ ಘಟ್ಟವಾಗಿದೆ. ಈ ಸಂದರ್ಭದಲ್ಲೇ ಒಒಡಿ ಎಂಬ ನೆಪವೊಡ್ಡಿ ತೆರಳುತ್ತಿದ್ದಾರೆ. ಇನ್ನೂ ಪ್ರಾಥಮಿಕ ಶಾಲೆಯಲ್ಲಂತೂ ಶಾಲೆ ಗಂಟೆ ಯಾವಾಗ ಬಾರಿಸಲಿದೆ ಎಂದು ಕಾದು ಕುಳಿತಿರುತ್ತಾರೆ. ಇನ್ನೂ ಗಂಟೆ ಬಾರಿಸುವ ಮೊದಲೇ ಅರ್ಜಿ ಬರೆದು ತೆರಳುತ್ತಿದ್ದಾರೆ.

Advertisement

ಈ ಬಗ್ಗೆ ಸ್ವತಃ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ನಾಪೂರ ಅವರು ತಮ್ಮ ತಾಲೂಕು ವ್ಯಾಪ್ತಿಯಲ್ಲಿ ಬಿಇಒ ಕಚೇರಿಯಲ್ಲಿ ಸುಮ್ಮನೆ ಸುತ್ತಾಡುವ ಶಿಕ್ಷಕರನ್ನು ಗುರುತಿಸಿ ಪಟ್ಟಿ ಸಮೇತ ಬಿಇಒ ಹಾಗೂ ಡಿಡಿಪಿಐ ಅವರಿಗೆ ಪತ್ರ ಬರೆದು ಎಚ್ಚರಿಕೆ ಮೂಡಿಸಿದ್ದಾರೆ. ಇಷ್ಟಾದರೂ ಶಿಕ್ಷಣ ಇಲಾಖೆ ಇನ್ನೂ ಕಾಳಜಿ ವಹಿಸುತ್ತಿಲ್ಲ. ಹಲವರು ಬಿಇಒ, ಡಿಡಿಪಿಐ ಕಚೇರಿಯಲ್ಲೇ ಸುತ್ತಾಡುತ್ತಿರುವುದು ಕಂಡು ಬರುತ್ತಿದೆ. ಇದಕ್ಕೆ ಕೂಡಲೇ ಕಡಿವಾಣ ಹಾಕಲೇ ಬೇಕಿದೆ. ಇಲ್ಲದಿದ್ದರೆ ಮಕ್ಕಳ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ.

ಸರ್ಕಾರಿ ಕೆಲಸದ ನಿಮಿತ್ತ ಮಾತ್ರ ಶಿಕ್ಷಕರು ಒಒಡಿ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದೆ. ತಮ್ಮ ವೈಯಕ್ತಿಕ ಕೆಲಸಕ್ಕೆ ತೆರಳುವಂತಿಲ್ಲ. ಆ ರೀತಿ ನಡೆದರೆ ಅಂತಹ ಶಿಕ್ಷಕರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಬಿಇಒ ಹಂತದಲ್ಲಿ ಬಿಆರ್‌ ಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಪ್ರತಿದಿನ ಶಾಲೆಗೆ ಹಾಜರಾಗಿ ಶಿಕ್ಷಕರ ಕಾರ್ಯ ನಿರ್ವಹಣೆ ಗಮನಿಸಿ, ಶಾಲೆಗೆ ಭೇಟಿ ನೀಡಿದ ಫೋಟೋ ಕಳಿಸಿಕೊಡುವಂತೆ ಸೂಚನೆ ನೀಡಿದ್ದೇನೆ. ಬಿಇಒಗಳಿಗೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ. ದೊಡ್ಡಬಸಪ್ಪ ನೀರಲಕೇರಿ,
ಡಿಡಿಪಿಐ ಕೊಪ್ಪಳ ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next