ಕೊಪ್ಪಳ: ಜಿಲ್ಲೆಯಲ್ಲಿ ಬರದ ಭೀಕರತೆ ಅನ್ನದಾತನನ್ನು ಪೆಡಂಭೂತವಾಗಿ ಕಾಡುತ್ತಿದ್ದರೆ, ಇತ್ತ ನೀರಾವರಿ ಪ್ರದೇಶದಲ್ಲಿನ ಬೆಳೆಗಳಿಗೆ ನಾನಾ ರೋಗ ಆವರಿಸುತ್ತಿವೆ. ಜಿಂಕೆ ಹಾವಳಿ ಮತ್ತೊಂದೆಡೆ ಹೆಚ್ಚಾಗಿದೆ. ಇದರಿಂದ ರೈತರ ಜೀವನ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಜಿಲ್ಲೆಯಲ್ಲಿ ಮೊದಲೇ ಮಳೆಯ ಸಮರ್ಪಕವಾಗಿಲ್ಲ. ಒಣ ಬೇಸಾಯದಲ್ಲಿ ಬಿತ್ತನೆ ಮಾಡಿದ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದ್ದು, ಕೃಷಿ ಇಲಾಖೆಯೂ ಈಗಾಗಲೇ ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿವೆ. ಈ ಮಧ್ಯೆ ನೀರಾವರಿ ಪ್ರದೇಶದಲ್ಲಿ ಕಡಿಮೆ ನೀರಿನಲ್ಲಿಯೂ ಅಲ್ಲಲ್ಲಿ ಬೆಳೆದಿರುವ ಮೆಕ್ಕೆಜೋಳಕ್ಕೆ ಸುಳಿ ರೋಗದ ಬಾಧೆ ಭಯಾನಕವಾಗಿ ಕಾಡುತ್ತಿದೆ.
ತಾಲೂಕಿನ ಬೆಟಗೇರಿ, ತಿಗರಿ, ಅನುಕುಂಟಿ, ಅಳವಂಡಿ ಸೇರಿದಂತೆ ಮಸಾರಿ ಹಾಗೂ ಎರೆ ಭಾಗದ ರೈತರು ಸುಳಿ ರೋಗಕ್ಕೆ ಬೆಚ್ಚಿ ಬೀಳುತ್ತಿದ್ದಾರೆ. ಮುಂಗಾರಿನ ಮುಂಚೂಣಿಯಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ ಬೆಳೆಗೆ ಯಾವುದೇ ಸುಳಿರೋಗ ಬೀಳಲಿಲ್ಲ. ಆದರೆ ಮುಂಗಾರಿನ ಕೊನೆ ಅವಧಿಯಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನಾನಾ ರೋಗದ ಬಾಧೆ ಕಾಡುತ್ತಿವೆ. ಅಚ್ಚುಕಟ್ಟು ಪ್ರದೇಶದ ಭತ್ತದ ಬೆಳೆಗೆ ನೊಣಗಳ ಹಾವಳಿ ಕಾಡುತ್ತಿದ್ದರೆ, ಇತ್ತ ನೀರಾವರಿ ಪ್ರದೇಶದ ಬೆಳೆಗೆ ಸುಳಿರೋಗ ಕಾಡುತ್ತಿದೆ.
ಬೆಟಗೇರಿಯ ರೈತ ಭೀಮಣ್ಣ ಕವಲೂರು ಅವರು ಬಿತ್ತನೆ ಮಾಡಿದ 10 ಎಕರೆಯ ಮೆಕ್ಕೆಜೋಳ ಬೆಳೆಗೆ ಸುಳಿರೋಗ ಬಾಧಿಸಿದ್ದು, ಏಷ್ಟೇ ಔಷಧಿ ಸಿಂಪರಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರಲಿಲ್ಲ. ಹೀಗಾಗಿ ಬೆಳೆಯನ್ನೇ ನಾಶಪಡಿಸಿದ ಘಟನೆ ನಡೆದಿದೆ. ಇದಲ್ಲದೇ, ಸಿದ್ದಪ್ಪ ಸಜ್ಜನ್, ಗವಿಸಿದ್ದಪ್ಪ ನೆರೆಗಲ್ ಸೇರಿದಂತೆ ಹಲವು ರೈತರ ಜಮೀನಿನಲ್ಲೂ ಸುಳಿ ರೋಗದ ಬಾಧೆ ಅಧಿಕ ಪ್ರಮಾಣದಲ್ಲಿ ಗೋಚರವಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡೂವರೆ ತಿಂಗಳಿಂದ ಮಳೆಯ ಸುಳಿವಿಲ್ಲ. ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಯಲ್ಲವೂ ಹಾನಿಯಗಿದ್ದು, ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಕೈಗೆ ಬರಬೇಕಾದ ತುತ್ತು ಬಾಯಿಗೆ ಬಾರದಂತಾಯಿತಲ್ಲ ಎಂದು ರೈತರು ನೋವು ತೋಡಿಕೊಳ್ಳುತ್ತಿದ್ದಾರೆ. ಇದನ್ನರಿತ ರಾಜ್ಯ ಸರ್ಕಾರ ಕೊಪ್ಪಳ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡಿದೆ.
ಒಣ ಬೇಸಾಯದ ಬೆಳೆಯ ಪರಿಸ್ಥಿತಿ ಬರಕ್ಕೆ ನಲುಗಿದರೆ, ಇನ್ನೂ ನೀರಾವರಿ ಪ್ರದೇಶದಲ್ಲಿ ಅಲ್ಪ ನೀರಿನಲ್ಲಿ ಬೆಳೆದ ಬೆಳೆಗಳಿಗೆ ಕೊಪ್ಪಳ-ಯಲಬುರ್ಗಾ ಭಾಗದಲ್ಲಿ ಜಿಂಕೆಗಳ ಹಾವಳಿಗೆ ನಲುಗಿದೆ. ಹಸಿರು ಬೆಳೆ ನೋಡಿ ಬೆಳೆಯಲ್ಲಿ ಸುತ್ತಾಡುವ ಜಿಂಕೆಗಳು ಬೆಳೆಯನ್ನು ಹಾನಿ ಮಾಡುತ್ತಿವೆ. ಇದರ ಜೊತೆಗೆ ರೋಗಗಳ ಬಾಧೆಗೆ ಜಿಲ್ಲೆಯ ರೈತ ಸಮೂಹ ಕೃಷಿಯಿಂದ ವಿಮುಖವಾಗುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಕೃಷಿ ಇಲಾಖೆ, ವಿಜ್ಞಾನಿಗಳು ಕೂಡಲೇ ರೈತರ ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕಿದೆ. ರೋಗ ಬಾಧೆ ನಿಯಂತ್ರಣಕ್ಕೆ ಸಜ್ಜಾಗಬೇಕಿದೆ.
ನಾನು 10 ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದು ಆದರೆ ಸುಳಿ ರೋಗ ಹೆಚ್ಚಾಗಿದೆ. ಇದಕ್ಕೆ ಏಷ್ಟೇ ಔಷಧೋಪಚಾರ ಮಾಡಿದರೂ ನಿಯಂತ್ರಣಕ್ಕೆ ಬರಲಿಲ್ಲ. ಹಾಗಾಗಿ ಬಿತ್ತನೆ ಮಾಡಿದ ಬೆಳೆಯನ್ನು ಸಂಪೂರ್ಣ ನಾಶಪಡಿಸಿದ್ದೇನೆ. ಅಂದಾಜು ಲಕ್ಷ ರೂ. ವೆಚ್ಚ ಮಾಡಿದ್ದೇನೆ. ನಮ್ಮ ಕಷ್ಟ ಯಾರು ಕೇಳ್ತಾರೀ.. ಯಾರೂ ಪರಿಹಾರ ಕೊಡಲ್ಲ.
. ಭೀಮಣ್ಣ ಕವಲೂರು, ಬೆಳೆ ನಾಶಪಡಿಸಿದ ರೈತ
ಬೆಳೆಯಲ್ಲಿ ನೀರಿನ ಕೊರತೆ ಕಡಿಮೆಯಾಗುತ್ತಿದೆ. ಹಾಗಾಗಿ ರೋಗಗಳು ಕಾಣಿಸಿಕೊಳ್ಳುತ್ತಿವೆ. ರೈತರು ಪ್ರತಿ ವರ್ಷವೂ ಒಂದೇ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯಬಾರದು. ಮೆಕ್ಕೆಜೋಳ ಬಿಟ್ಟು ಬೇರೆ ಬೇರೆ ಬೆಳೆ ಬೆಳೆದರೆ, ರೋಗ ನಿಯಂತ್ರಣ ಮಾಡಬಹುದು. ರೈತರು ಜಮೀನುಗಳ ಬದುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಣ್ಣಿನ ಫಲವತ್ತತೆ ಹೆಚ್ಚಿಸುವಂತಹ ಸಾವಯವ ಗೊಬ್ಬರ ಬಳಕೆ ಮಾಡಬೇಕು. ಅಂದರೆ ರೋಗ ನಿಯಂತ್ರಣ ಮಾಡಲು ಸಾಧ್ಯವಿದೆ.
.
ಎಂ.ಬಿ.ಪಾಟೀಲ, ಕೃಷಿ ವಿಸ್ತರಣಾ ಕೇಂದ್ರದ ಮುಖ್ಯಸ್ಥ.
ದತ್ತು ಕಮ್ಮಾರ