ಕೊಪ್ಪಳ: ಟ್ಯಾಕ್ಸಿ ಮೇಲಿನ ಸಾಲದ ಕಿರುಕುಳಕ್ಕೆ ಮನನೊಂದು ಟ್ಯಾಕ್ಸಿ ಮಾಲೀಕ ಹೆದ್ದಾರಿ ರಸ್ತೆ ಮಧ್ಯದಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಗರದ ತಿಕೋಟಿಕರ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಬಾಗಲಕೋಟೆಯ ಸುಭಾಷಚಂದ್ರ ಎನ್ನುವ ಟ್ಯಾಕ್ಸಿ ಮಾಲೀಕನೇ ತನ್ನ ವಾಹನಕ್ಕೆ ಬೆಂಕಿ ಹಚ್ಚಿರುವ ವ್ಯಕ್ತಿ.
ಈತನು ಬಾಗಲಕೋಟೆಯ ಖಾಸಗಿ ಫೈನಾನ್ಸ್‌ನಲ್ಲಿ ಟ್ಯಾಕ್ಸಿ ಮೇಲೆ ಸಾಲ ಪಡೆದಿದ್ದನಂತೆ. ಕಳೆದ ನಾಲ್ಕೈದು ತಿಂಗಳಿಂದ ಸಾಲದ ಕಂತು ಕಟ್ಟಿರಲಿಲ್ಲ. ಇದರಿಂದ ಫೈನಾನ್ಸ್ ಪ್ರತಿನಿಧಿಗಳು ಸಾಲವನ್ನ ಕಟ್ಟುವಂತೆ ಈತನಿಗೆ ಪದೇ ಪದೆ ಒತ್ತಾಯ ಮಾಡಿದ್ದಾರೆ. ಕೋವಿಡ್ ಕಾರಣ ಹೇಳುತ್ತ ಬಂದಿದ್ದ ಈತನು ಸಾಲ ಪಾವತಿಸಿರಲಿಲ್ಲ. ಅಲ್ಲದೇ, ಬಾಗಲಕೋಟೆ-ಕುಷ್ಟಗಿಗೆ ತನ್ನ ಟ್ಯಾಕ್ಸಿ ಚಲಾಯಿಸಿ ಜೀವನ ನಡೆಸುತ್ತಿದ್ದನು. ಭಾನುವಾರ ಕೊಪ್ಪಳಕ್ಕೆ ತನ್ನ ಟ್ಯಾಕ್ಸಿ ತೆಗೆದುಕೊಂಡು ಬಂದಿರುವುದು ಫೈನಾನ್ಸ್ ಪ್ರತಿನಿಧಿಗಳಿಗೆ ಗೊತ್ತಾಗಿ ಕೊಪ್ಪಳದಲ್ಲಿ ಬಂದು ಆತನ ಟ್ಯಾಕ್ಸಿ ತಡೆದು ಸಾಲವನ್ನು ಕೇಳಿದ್ದಾರೆ. ಇಬ್ಬರ ಮಧ್ಯೆಯೂ ಮಾತಿನ ಚಕಮಕಿ ನಡೆದಿದೆ. ಕೊನೆಗೆ ತೀವ್ರ ಮನನೊಂದ ಟ್ಯಾಕ್ಸಿ ಮಾಲೀಕನು ನಗರದ ಎಲ್‌ಐಸಿ ಕಚೇರಿ ಬಳಿ ಹೆದ್ದಾರಿ ರಸ್ತೆ ಮಧ್ಯದಲ್ಲಿಯೇ ತನ್ನ ಟ್ಯಾಕ್ಸಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಟ್ಯಾಕ್ಸಿ ಹೊತ್ತಿ ಹುರಿಯುತ್ತಿದ್ದ ವೇಳೆ ಏನೋ ಘಟನೆ ನಡೆದಿದೆ ಎಂದು ಸ್ಥಳೀಯರು ಕೆಲವು ಕಾಲ ಆತಂಕ ವ್ಯಕ್ತಪಡಿಸಿದ ಪ್ರಸಂಗವೂ ನಡೆಯಿತು. ಕೊನೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಟ್ಯಾಕ್ಸಿ ಮಾಲೀಕನನ್ನು ಠಾಣೆಗೆ ಕರೆದುಹೊಂದು ತೆರಳಿದ್ದಾರೆ. ನಗರ ಠಾಣೆಯಲ್ಲಿ ಇನ್ನೂ ಪ್ರಕರಣ ದಾಖಲಗಿಲ್ಲ. ಕೇಸ್ ದಾಖಲಿಸಿಕೊಳ್ಳುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ಒಂದೂವರೆ ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪೊಲೀಸ್ ಕಾನ್ಸ್ಟೇಬಲ್ ಪತ್ನಿ ನೇಣಿಗೆ ಶರಣು